ಕಾಮನ್‌ವೆಲ್ತ್ ಗೇಮ್ಸ್ ಕಾಮಗಾರಿಗಳಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಸರಕಾರವನ್ನು ಗುರಿ ಮಾಡುತ್ತಿರುವ ಪ್ರತಿಪಕ್ಷ ಬಿಜೆಪಿಯು ಕರ್ನಾಟಕದಲ್ಲಿನ ಅಕ್ರಮ ಗಣಿಗಾರಿಕೆ ಕುರಿತು 'ಧೃತರಾಷ್ಟ್ರ ಮತ್ತು ಗಾಂಧಾರಿ'ಯಂತೆ ವರ್ತಿಸುತ್ತಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಮಹಾಭಾರತದ ಪ್ರಮುಖ ಪಾತ್ರಧಾರಿಗಳ ಹೆಸರನ್ನು ಕಾಂಗ್ರೆಸ್ ಹಿರಿಯ ನಾಯಕರು ಮತ್ತು ಅಧಿಕಾರಿಗಳ ಮೇಲೆ ಮೊನ್ನೆಯಷ್ಟೇ ಕಾಮನ್‌ವೆಲ್ತ್ ಗೇಮ್ಸ್ ತಯಾರಿ ಕುರಿತ ಚರ್ಚೆ ಆರಂಭಿಸುವಾಗ ಬಿಜೆಪಿ ಸದಸ್ಯ ಕೀರ್ತಿ ಆಜಾದ್ ಬಳಸಿದ್ದರು. ಅದಕ್ಕೀಗ ಕಾಂಗ್ರೆಸ್ ತಿರುಗೇಟು ನೀಡಿದೆ.
ಕರ್ನಾಟಕದಲ್ಲಿನ ಅಕ್ರಮ ಗಣಿಗಾರಿಕೆ ವಿಚಾರ ಬರುವಾಗ ಧೃತರಾಷ್ಟ್ರ ಮತ್ತು ಗಾಂಧಾರಿಯಂತೆ (ಕುರುಡರಂತೆ) ವರ್ತಿಸುವ ಬಿಜೆಪಿ, ಕಾಮನ್‌ವೆಲ್ತ್ ಗೇಮ್ಸ್ ಭ್ರಷ್ಟಾಚಾರ ಆರೋಪ ಮಾಡುವಾಗ ಭಾರೀ ದನಿಯೆತ್ತುತ್ತಿರುವುದು ಯಾಕೆ ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಪ್ರಶ್ನಿಸಿದ್ದಾರೆ.
ಅವರು ಕಾಮನ್‌ವೆಲ್ತ್ ಕುರಿತು ಎಲ್ಲಾ ರೀತಿಯ ಸರ್ಕಸ್ ಮಾಡುತ್ತಿದ್ದಾರೆ. ಆದರೆ ರೆಡ್ಡಿ ಸಹೋದರರ ಅಕ್ರಮ ಗಣಿಗಾರಿಕೆ ವಿಚಾರ ಬಂದಾಗ ಮಾತ್ರ ಮೌನವಾಗಿ ಉಳಿಯುತ್ತಾರೆ. ಹೀಗೆ ಯಾಕೆ ಎಂಬುದನ್ನು ಬಿಜೆಪಿ ನಾಯಕರು ಸ್ಪಷ್ಟಪಡಿಸಬೇಕಾಗಿದೆ ಎಂದು ತಿವಾರಿ ಹೇಳಿದ್ದಾರೆ.
ರೆಡ್ಡಿ ಸಹೋದರರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಬಗ್ಗೆ ಸಾಕಷ್ಟು ಪುರಾವೆಗಳು ಇರುವುದು ಹೌದೇ ಆದಲ್ಲಿ, ಕೇಂದ್ರ ಸರಕಾರವು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತಿವಾರಿಯವರಲ್ಲಿ ಪ್ರಶ್ನಿಸಿದಾಗ, ಕರ್ನಾಟಕದಲ್ಲಿನ ಅಕ್ರಮ ಗಣಿಗಾರಿಕೆಯಿಂದಾಗಿಯೇ 1957ರ ಅದಿರುಗಳು ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಗೆ ತಿದ್ದುಪಡಿ ಮಾಡಲು ಸರಕಾರ ಮುಂದಾಗುತ್ತಿದೆ ಎಂದರು.
ಬಿಜೆಪಿಯ ಉನ್ನತ ನಾಯಕರ ಜತೆ ರೆಡ್ಡಿ ಸಹೋದರರು ನಿಕಟ ಸಂಬಂಧ ಹೊಂದಿರುವ ಕಾರಣದಿಂದಲೇ ಬಹುಶಃ ಅವರ ವಿರುದ್ಧ ಬಿಜೆಪಿ ಯಾವುದೇ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಈ ವಿಚಾರದ ಕುರಿತು ಬಿಜೆಪಿಯ ಕೇಂದ್ರೀಯ ನಾಯಕತ್ವವು ಸ್ಪಷ್ಟನೆ ನೀಡಬೇಕಾಗಿದೆ ಎಂದು ತಿವಾರಿ ಆಗ್ರಹಿಸಿದ್ದಾರೆ.
ರೆಡ್ಡಿ ಸಹೋದರರನ್ನು ಸಮರ್ಥಿಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕುರಿತು ಪ್ರಶ್ನಿಸಿದಾಗ, ಇಲ್ಲಿ ವಾಸ್ತವ ವಿಚಾರವೆಂದರೆ ಅವರೆಲ್ಲ ಅಕ್ರಮ ಗಣಿಗಾರಿಕೆಯಲ್ಲಿ ತಮ್ಮನ್ನು ತೀವ್ರವಾಗಿ ತೊಡಗಿಸಿಕೊಂಡಿದ್ದಾರೆ; ಹಾಗಾಗಿ ಯಡಿಯೂರಪ್ಪ ಯಾವುದೇ ಒಂದು ಸಣ್ಣ ಕ್ರಮವನ್ನೂ ಕೈಗೊಳ್ಳುತ್ತಿಲ್ಲ ಎಂದರು.
ಕಾಂಗ್ರೆಸ್ ಬಳ್ಳಾರಿಯವರೆಗೆ ನಡೆಸಿದ 16 ದಿನಗಳ ಪಾದಯಾತ್ರೆ ಕೊನೆಗೊಂಡ ದಿನ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಜನತೆ ಸೇರಿರುವುದನ್ನು ಉಲ್ಲೇಖಿಸಿರುವ ತಿವಾರಿ, ರಾಜ್ಯದ ಗಣಿ ಸಂಪತ್ತನ್ನು ಲೂಟಿ ಮಾಡುತ್ತಿರುವ ಮಂದಿಯ ವಿರುದ್ಧ ಕರ್ನಾಟಕದ ಜನತೆ ಒಗ್ಗಟ್ಟಾಗಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ; ರೆಡ್ಡಿ ಸಹೋದರರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳದೇ ಇದ್ದರೆ ಬಿಜೆಪಿ ಸರಕಾರವನ್ನು ಜನತೆ ಮತ್ತು ಕಾಂಗ್ರೆಸ್ ಬುಡಮೇಲು ಮಾಡಲಿದೆ ಎಂದು ಭವಿಷ್ಯ ನುಡಿದರು.