ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೆಂಗಳೂರು ಸ್ಫೋಟ; ಮದನಿ ಸೆರೆಗೆ ಕೇರಳ ಅಡ್ಡಗಾಲು? (Kerala police | Karnataka police | PDP | Abdul Nasser Madani)
Bookmark and Share Feedback Print
 
ಹಲವಾರು ಭಯೋತ್ಪಾದನಾ ಕೃತ್ಯಗಳಲ್ಲಿ ಆರೋಪಿಯಾಗಿರುವ ಕೇರಳ ಪಿಡಿಪಿ ನಾಯಕ ಅಬ್ದುಲ್ ನಾಸಿರ್ ಮದನಿಯನ್ನು ಬೆಂಗಳೂರು ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧಿಸಲು ಕರ್ನಾಟಕ ಪೊಲೀಸರು ಸಿದ್ಧರಾಗಿದ್ದಾರೆ. ಆದರೆ ಕೇರಳ ಪೊಲೀಸರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ವರದಿಗಳು ಹೇಳಿವೆ.

2008ರ ಬೆಂಗಳೂರು ಸ್ಫೋಟ ಪ್ರಕರಣದ ಆರೋಪಿ ಮದನಿ ಬಂಧನಕ್ಕೆಂದು ಈಗಾಗಲೇ ಕರ್ನಾಟಕ ಪೊಲೀಸರು ತೆರಳಿದ್ದಾರೆ. ಅವರು ಕೇರಳ ಪೊಲೀಸರ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ. ಆರೋಪಿಯ ಬಂಧನಕ್ಕೆ ಕೇರಳ ಪೊಲೀಸರು ಒಪ್ಪಿಗೆ ಸೂಚಿಸಿಲ್ಲ ಎಂದು ಹೇಳಲಾಗಿದೆ.

ಮದನಿ ಬಂಧನ ಸಾಧ್ಯತೆ ಹಿನ್ನೆಲೆಯಲ್ಲಿ ಮಂಜೇಶ್ವರ, ಉಪ್ಪಳ, ಕಾಸರಗೋಡು ಸೇರಿದಂತೆ ಹಲವೆಡೆ ಉದ್ನಿಗ್ನ ಪರಿಸ್ಥಿತಿ ತಲೆದೋರಿದೆ. ಕೇರಳದಾದ್ಯಂತ ಮದನಿ ಬಂಧನ ಯತ್ನಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಹೀಗಾಗಿ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಸರ್ಕಲ್ ಇನ್ಸ್‌ಪೆಕ್ಟರ್ ಸಿದ್ದಪ್ಪ ನೇತೃತ್ವದ ಬೆಂಗಳೂರು ಪೊಲೀಸರ ತಂಡ ನಿನ್ನೆ ಅಪರಾಹ್ನವೇ ಕೊಲ್ಲಂ ತಲುಪಿದೆ. ಎರ್ನಾಕುಲಂ ಪೊಲೀಸ್ ಆಯುಕ್ತ ಮನೋಜ್ ಅಬ್ರಹಾಂ ಅವರ ಜತೆ ಮಾತುಕತೆ ನಡೆಸಿರುವ ಕರ್ನಾಟಕ ಪೊಲೀಸರು ನಂತರ ಕೊಲ್ಲಂಗೆ ಬಂದಿದ್ದಾರೆ.

ಮದನಿ ಬಂಧನಕ್ಕಾಗಿ ಕರ್ನಾಟಕ ಪೊಲೀಸರು ಕೊಲ್ಲಂಗೆ ಬಂದಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಪಿಡಿಪಿ ಕಾರ್ಯಕರ್ತರು ಮತ್ತು ಮದನಿ ಅಭಿಮಾನಿಗಳು ಅನ್ವರಸ್ಸೇರಿಯಲ್ಲಿನ ಮದನಿ ನಿವಾಸಕ್ಕೆ ಹರಿದು ಬಂದಿದ್ದಾರೆ. ತಮ್ಮ ನಾಯಕನನ್ನು ಯಾವುದೇ ಕಾರಣಕ್ಕೂ ಬಂಧಿಸಲು ತಾವು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳುತ್ತಿದ್ದಾರೆ.

ಬೆಂಗಳೂರು ಭಯೋತ್ಪಾದನಾ ಸ್ಫೋಟ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಬೇಕೆಂದು ಮದನಿ ಸಲ್ಲಿಸಿದ್ದ ಅರ್ಜಿಯನ್ನು ಕಳೆದ ವಾರವಷ್ಟೇ ಕರ್ನಾಟಕ ಹೈಕೋರ್ಟ್ ತಳ್ಳಿ ಹಾಕಿತ್ತು.

ಸದ್ಯಕ್ಕೆ ಬಂಧಿಸಬೇಡಿ....
ಹೀಗೆಂದು ಕರ್ನಾಟಕ ಪೊಲೀಸರಿಗೆ ಸಲಹೆ ನೀಡಿರುವುದು ಕೇರಳ ಪೊಲೀಸರು. ಕಳೆದ ರಾತ್ರಿಯೇ ಮದನಿಯವರನ್ನು ಪೊಲೀಸರು ಬಂಧಿಸಬೇಕಾಗಿತ್ತಾದರೂ, ಕಾನೂನು-ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪರಿಸ್ಥಿತಿಯನ್ನು ಅರಿತುಕೊಂಡು ಮುಂದುವರಿಯಿರಿ ಎಂದು ಬೆಂಗಳೂರು ಪೊಲೀಸರಿಗೆ ಕೇರಳ ಪೊಲೀಸರು ಹೇಳಿದ್ದಾರೆ ಎಂದು ವರದಿಗಳು ಹೇಳಿವೆ.

ಆರೋಪಿಯನ್ನು ಬಂಧಿಸುವುದರಿಂದ ಪ್ರಸಕ್ತ ಅನ್ವರಸೇರಿಯಲ್ಲಿ ಮದನಿಯಿಂದ ನಡೆಸಲ್ಪಡುತ್ತಿರುವ ಶಿಬಿರ ಮತ್ತು ಕೇರಳದ ಇತರ ಭಾಗಗಳಲ್ಲಿ ಜನತೆ ಭಾವೋದ್ವೇಗಕ್ಕೊಳಗಾಗಬಹುದು. ಅಲ್ಲದೆ ಮದನಿಯವರ ಆರೋಗ್ಯ ಪರಿಸ್ಥಿತಿಯನ್ನು ಕೂಡ ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಕೇರಳ ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

ಮದನಿ ಜ್ವರದಿಂದ ಬಳಲುತ್ತಿದ್ದಾರೆ, ಹಾಗಾಗಿ ನಿನ್ನೆ ರಾತ್ರಿಯಷ್ಟೇ ಅವರನ್ನು ತಪಾಸಣೆ ನಡೆಸಲು ಸ್ಥಳೀಯ ಖಾಸಗಿ ವೈದ್ಯರು ಧಾವಿಸಿದ್ದಾರೆ. ಹಾಗಾಗಿ ತಕ್ಷಣ ಕಾರ್ಯಪ್ರವೃತ್ತರಾಗುವುದು ಬೇಡ. ಸ್ವಲ್ಪ ಕಾಯೋಣ ಎಂಬ ಸಲಹೆಗೆ ಕರ್ನಾಟಕ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಮದನಿ ಬಂಧನಕ್ಕೆಂದು ಪೊಲೀಸರು ಕೇರಳಕ್ಕೆ ತೆರಳಿರುವುದನ್ನು ಬೆಂಗಳೂರು ಪೊಲೀಸ್ ಆಯುಕ್ತ ಶಂಕರ್ ಬಿದರಿ ಖಚಿತಪಡಿಸಿದ್ದಾರೆ.

ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ...
ತನ್ನ ವಿರುದ್ಧ ಎಂಟು ತಿಂಗಳ ಹಿಂದೆ ರೂಪಿಸಲಾಗಿದ್ದ ಪಿತೂರಿಯ ಭಾಗವಾಗಿ ಇದೀಗ ಕರ್ನಾಟಕದ ಬಿಜೆಪಿ ಸರಕಾರವು ಬಂಧಿಸಲು ಮುಂದಾಗುತ್ತಿದೆ ಎಂದು ಮದನಿ ವಾಗ್ದಾಳಿ ನಡೆಸಿದ್ದಾರೆ.

ತಾನು ಬಂಧನಕ್ಕೆ ಸಿದ್ಧವಾಗಿದ್ದೇನೆ. ಆದರೆ ಕಸ್ಟಡಿಯಲ್ಲಿ ನನಗೆ ಏನಾಗುತ್ತದೋ ಎಂಬ ಭೀತಿಯಿದೆ. ಅಲ್ಲದೆ ಪವಿತ್ರ ರಂಜಾನ್ ತಿಂಗಳ ಅವಧಿಯಲ್ಲೇ ಬಂಧನಕ್ಕೆ ಒಳಗಾಗಬೇಕಾಗಿರುವುದು ಅಸಮಾಧಾನ ತಂದಿದೆ. ಆದರೂ ಕಾರ್ಯಕರ್ತರು ಸಾವಧಾನದಿಂದ ಇರುವಂತೆ ಮನವಿ ಮಾಡಿದ್ದೇನೆ ಎಂದು ಮದನಿ ತಿಳಿಸಿದ್ದಾರೆ.

ನಾನು ಬಂಧನಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲ. ನಾನು ಅಮಾಯಕ ಎಂಬುವುದನ್ನು ಕಾನೂನು ಮೂಲಕ ಸಾಬೀತುಪಡಿಸುತ್ತೇನೆ. ನ್ಯಾಯಾಂಗದ ಪ್ರಕ್ರಿಯೆಗಳಿಗೆ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ