ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭೋಪಾಲ್ ದುರಂತ; ರಾಜೀವ್ ಗಾಂಧಿಯತ್ತ ಬಿಜೆಪಿ ಬೆಟ್ಟು (Bhopal Gas Tragedy | BJP | Sushma Swaraj | Warren Anderson)
Bookmark and Share Feedback Print
 
ಭೋಪಾಲ್ ಅನಿಲ ದುರಂತವನ್ನು ಔದ್ಯಮಿಕ ನರಮೇಧ ಎಂದು ಬಣ್ಣಿಸಿರುವ ಲೋಕಸಭೆಯ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್, ಇದೊಂದು ಕ್ರಿಮಿನಲ್ ನಿರ್ಲಕ್ಷ್ಯದ ಫಲಿತಾಂಶ; ಘಟನೆಗೆ ಕಾರಣವಾಗಿದ ಆರೋಪಿಗಳು ದೇಶ ಬಿಟ್ಟು ಹೋಗುವಲ್ಲಿ ಪಾತ್ರ ವಹಿಸಿರುವುದು ಯಾರೆಂದು ಬಹಿರಂಗವಾಗಬೇಕು ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರತ್ತ ಬೆಟ್ಟು ಮಾಡಿ ತೋರಿಸಿದ್ದಾರೆ.

ಭೋಪಾಲ್ ದುರಂತದ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿದ್ದಾಗ ಪ್ರಶ್ನಿಸಿದ ಸುಷ್ಮಾ, ಭೋಪಾಲ್ ಅನಿಲ ದುರಂತದ ಆರೋಪಿಯನ್ನು ದೇಶ ಬಿಟ್ಟು ಹೋಗಲು ಅವಕಾಶ ನೀಡಿದ್ದು ಯಾಕೆ? ಇದೊಂದು ಔದ್ಯಮಿಕ ನರಹತ್ಯಾ ಪ್ರಸಂಗ. ಹಣವನ್ನು ಉಳಿಸಬೇಕು ಮತ್ತು ಲಾಭ ಗಳಿಸಬೇಕೆಂಬ ನಿಟ್ಟಿನಲ್ಲಿ ಸರಕಾರವು ಈ ಘಟನೆ ನಡೆಯಲು ಅವಕಾಶ ನೀಡಿದೆ. ಅದನ್ನು ಬಳಸಿಕೊಂಡ ಅವರು ಭಾರತೀಯರ ಪ್ರಾಣಗಳನ್ನೇ ತೆಗೆದರು ಎಂದರು.

ನ್ಯಾಯಾಲಯದಿಂದ ಹೊರಗಡೆ ಪ್ರಕರಣವನ್ನು ಮುಗಿಸಲಾಗುತ್ತದೆ ಎಂಬ 1989ರ ಭಾರತ ಸರಕಾರ ಮತ್ತು ಯೂನಿಯನ್ ಕಾರ್ಬೈಡ್ ನಡುವಿನ ಒಪ್ಪಂದವನ್ನು ರದ್ದು ಮಾಡುವ ಗೊತ್ತುವಳಿಯನ್ನು ಒಮ್ಮತದಿಂದ ಸಂಸತ್ತು ಅಂಗೀಕರಿಸಬೇಕು ಎಂದು ಒತ್ತಾಯಿಸಿರುವ ಸುಷ್ಮಾ, ಪಕ್ಷಾತೀತವಾಗಿ ಇದನ್ನು ಎಲ್ಲರೂ ಬೆಂಬಲಿಸಬೇಕು ಎಂದು ಮನವಿ ಮಾಡಿಕೊಂಡರು.

615 ಕೋಟಿ ರೂಪಾಯಿ ಮೊತ್ತದ ಪರಿಹಾರ ಪ್ಯಾಕೇಜನ್ನು ಯೂನಿಯನ್ ಕಾರ್ಬೈಡ್ ಕಂಪನಿಯ ಜತೆ ಮಾಡಿಕೊಂಡಿದ್ದ ಆಗಿನ ಸರಕಾರದ್ದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ನೂತನ ಒಪ್ಪಂದದಂತೆ ವಿದೇಶಿ ಕಂಪನಿಯು ಭೋಪಾಲ್ ದುರಂತಕ್ಕೆ ಕಾರಣವಾಗಿದ್ದಕ್ಕೆ ಹೆಚ್ಚಿನ ಪರಿಹಾರ ನೀಡುವಂತಾಗಬೇಕು ಎಂದು ಒತ್ತಾಯಿಸಿದ್ದಾರೆ.

ಸರಕಾರ ಮತ್ತು ಕಂಪನಿಯ ನಡುವೆ ನಡೆದ ಈ ಒಪ್ಪಂದಕ್ಕೆ ಯಾರು ಹೊಣೆ? ಆ ಸಂದರ್ಭದಲ್ಲಿ ಇಂತಹ ವ್ಯವಹಾರಗಳ ಮುಖ್ಯಸ್ಥರಾಗಿದ್ದವರು ಯಾಕೆ ಅವಕಾಶ ನೀಡಿದರು ಎಂದು ಒಪ್ಪಂದದ ಸಂದರ್ಭದಲ್ಲಿ ಪ್ರಧಾನ ಮಂತ್ರಿಯಾಗಿದ್ದ ರಾಜೀವ್ ಗಾಂಧಿಯವರ ಹೆಸರು ಹೇಳದೆ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

1989ರಲ್ಲಿ ಭಾರತ ಸರಕಾರದ ಜತೆ ಒಪ್ಪಂದ ಮಾಡಿಕೊಂಡಿದ್ದ ಯೂನಿಯನ್ ಕಾರ್ಬೈಡ್ 470 ಮಿಲಿಯನ್ ಡಾಲರುಗಳನ್ನು ನೀಡಿ ತನ್ನ ಹೊಣೆಗಾರಿಕೆಯಿಂದ ಜಾರಿಕೊಂಡಿತ್ತು. ನಂತರ ಈ ಅಮೆರಿಕಾ ಕಂಪನಿಯನ್ನು 'ಡೋ ಕೆಮಿಕಲ್' ಎಂಬ ಕಂಪನಿ ಖರೀದಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ