ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಶ್ಮೀರ 'ಕೈ' ಬಿಡಲು ಕೇಂದ್ರ ಸಿದ್ಧ?; ವ್ಯಾಪಕ ಟೀಕೆ (Autonomy to Kashmir | Manmohan Singh | BJP | VHP)
Bookmark and Share Feedback Print
 
ಕಾಶ್ಮೀರಕ್ಕೆ ಸ್ವಾಯತ್ತತೆ ನೀಡುವ ಕುರಿತು ಕೇಂದ್ರ ಸರಕಾರ ಪರಿಶೀಲನೆ ನಡೆಸುತ್ತದೆ ಎಂಬ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹೇಳಿಕೆಗೆ ಭಾರೀ ಟೀಕೆಗಳು ವ್ಯಕ್ತವಾಗಿವೆ. ತಕ್ಷಣವೇ ಸಿಂಗ್ ಸ್ಪಷ್ಟನೆ ನೀಡಬೇಕೆಂದು ಬಿಜೆಪಿ ಆಗ್ರಹಿಸಿದೆ.

ಜಮ್ಮು-ಕಾಶ್ಮೀರಕ್ಕೆ ಸ್ವಾಯತ್ತ ಸ್ಥಾನಮಾನ ನೀಡುವ ಕುರಿತು ಅಲ್ಲಿನ ರಾಜಕೀಯ ಪಕ್ಷಗಳಲ್ಲಿ ಒಮ್ಮತವಿದ್ದಲ್ಲಿ ಭಾರತದ ಸಂವಿಧಾನದ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಲು ಕೇಂದ್ರ ಸರಕಾರ ಸಿದ್ಧವಿದೆ ಎಂದು ನಿನ್ನೆ ಪ್ರಧಾನಿ ತನ್ನ ಭಾಷಣದಲ್ಲಿ ಹೇಳಿದ್ದರು.

ಆದರೆ ಇದನ್ನು ಪ್ರಮುಖ ಪ್ರತಿಪಕ್ಷ ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸಿವೆ. ಪ್ರಧಾನಿಯವರಿಂದ ಇಂತಹ ಹೇಳಿಕೆಯನ್ನು ನಾವು ನಿರೀಕ್ಷಿಸಿರಲಿಲ್ಲ ಎಂದು ಹಲವು ನಾಯಕರು ತಿಳಿಸಿದ್ದಾರೆ.

ಸ್ವಾಯತ್ತತೆ ನೀಡಿದರೆ ಏನಾಗುತ್ತದೆ?
ಪ್ರಧಾನ ಮಂತ್ರಿಯವರು ಜಮ್ಮು-ಕಾಶ್ಮೀರಕ್ಕೆ ಸ್ವಾಯತ್ತತೆ ನೀಡುವ ಕುರಿತು ಹೆಚ್ಚಿನ ವಿವರಗಳನ್ನು ನೀಡಿಲ್ಲ. ಆದರೂ ಅವರ ಹೇಳಿಕೆಯನ್ನು ವಿಶ್ಲೇಷಣೆ ನಡೆಸುವುದಾದರೆ ಸ್ವಾಯತ್ತತೆ ಎನ್ನುವುದು ಭಾರತಕ್ಕೆ ಕಂಟಕಪ್ರಾಯವೆನಿಸಲಿದೆ.

ಕಾಶ್ಮೀರಕ್ಕೆ ಸ್ವಾಯತ್ತತೆ ಎಂದರೆ ಅಲ್ಲಿ ಪ್ರತ್ಯೇಕ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಲಾಗುತ್ತದೆ. ಹಾಗಾದಲ್ಲಿ ಕೇಂದ್ರ ಸರಕಾರಕ್ಕೆ ಅಲ್ಲಿನ ಆಡಳಿತದ ಕುರಿತು ರಾಜಕೀಯವನ್ನು ಹೊರತುಪಡಿಸಿ ಉಳಿದಂತೆ ಹಸ್ತಕ್ಷೇಪ ಮಾಡಲು ಅವಕಾಶ ಇರುವುದಿಲ್ಲ.

ಸ್ವಾಯತ್ತತೆ ನೀಡಿದಲ್ಲಿ ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನ ಮಂತ್ರಿಯ ನೇಮಕವಾಗುತ್ತದೆ. ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿಯೆನ್ನುವುದು ಹೊಸತೇನಲ್ಲ. ಈ ಹಿಂದೆ 1925ರಿಂದ 1965ರ ವರೆಗೆ ಜಮ್ಮು-ಕಾಶ್ಮೀರ ಹತ್ತಾರು ಪ್ರಧಾನಿಗಳನ್ನು ಕಂಡಿದೆ. 1965ರಲ್ಲಿ ಈ ಪದ್ಧತಿ ಕೊನೆಗೊಂಡು ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಆಡಳಿತಕ್ಕೊಳಗಾಗಿತ್ತು.

ಇಷ್ಟೇ ಅಲ್ಲದೆ ಪ್ರತ್ಯೇಕ ಕರೆನ್ಸಿ, ಬಾವುಟ, ಚುನಾವಣಾ ಆಯೋಗ, ಮೂಲಭೂತ ಹಕ್ಕುಗಳು ಮತ್ತು ನಾಗರಿಕ ಸೌಲಭ್ಯಗಳು ಸೇರಿದಂತೆ ಹತ್ತು-ಹಲವು ಅನುಕೂಲತೆಗಳನ್ನು ಜಮ್ಮು-ಕಾಶ್ಮೀರ ತನಗೆ ಬೇಕಾದಂತೆ ಮಾಡಿಕೊಳ್ಳಬಹುದಾಗಿದೆ.

ಏನಿದು ವಿಶೇಷ ಸ್ಥಾನಮಾನ?
ಪ್ರಸಕ್ತ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ವಿಶೇಷ ಸ್ಥಾನಮಾನ ಪಡೆಯುತ್ತಿರುವ ಏಕೈಕ ರಾಜ್ಯವೆಂದರೆ ಅದು ಜಮ್ಮು-ಕಾಶ್ಮೀರ ಮಾತ್ರ. ಅಂದರೆ ಆ ರಾಜ್ಯಕ್ಕೆ ಸಂವಿಧಾನದ 370ನೇ ವಿಧಿಯು ಅನ್ವಯವಾಗುತ್ತಿದೆ.

ಈ ವಿಧಿಯ ಪ್ರಮುಖ ಅಂಶಗಳ ಪ್ರಕಾರ, ಭಾರತದ ಪ್ರಮುಖ ಕಾನೂನುಗಳು ಜಮ್ಮು-ಕಾಶ್ಮೀರಕ್ಕೆ ಅನ್ವಯವಾಗುವುದಿಲ್ಲ. ಅಂದರೆ ರಕ್ಷಣೆ, ವಿದೇಶಾಂಗ, ಹಣಕಾಸು ಮತ್ತು ಸಂಪರ್ಕವನ್ನು ಹೊರತುಪಡಿಸಿದ ಕಾನೂನುಗಳನ್ನು ಜಮ್ಮು-ಕಾಶ್ಮೀರಕ್ಕೆ ರೂಪಿಸಬೇಕಾದ ಸಂದರ್ಭ ಬಂದಾಗ ರಾಜ್ಯದ ಒಪ್ಪಿಗೆ ಪಡೆಯುವುದು ಕೇಂದ್ರಕ್ಕೆ ಅವಶ್ಯಕ.

ಜಮ್ಮು-ಕಾಶ್ಮೀರದ ಪ್ರಜೆಗಳು ಭಾರತದ ಇತರ ಭಾರತೀಯರಿಗಿಂತ ಹೆಚ್ಚಿನ ಸೌಲಭ್ಯಗಳನ್ನು ಪಡೆಯುತ್ತಾರೆ. ಇತರ ರಾಜ್ಯದ ಪ್ರಜೆಗಳು ಅಲ್ಲಿಗೆ ಹೋಗಿ ಆಸ್ತಿ-ಪಾಸ್ತಿ ಖರೀದಿಸುವಂತಿಲ್ಲ. ಆ ರಾಜ್ಯದ ಮಹಿಳೆಯೊಬ್ಬಳು ಬೇರೆ ರಾಜ್ಯದವನನ್ನು ಮದುವೆಯಾದಲ್ಲಿ, ಆಕೆಗೂ ಆಸ್ತಿ ಖರೀದಿಗೆ ಅವಕಾಶ ಇರುವುದಿಲ್ಲ.

ಕಾಶ್ಮೀರದಿಂದ ಭಾರತಕ್ಕೇನು ಲಾಭ?
ಈಗಿನ ಪರಿಸ್ಥಿತಿಯಲ್ಲಿ ಒಟ್ಟಾರೆ ಗಮನಿಸಿದಾಗ ಭಾರತಕ್ಕೆ ಸಿಗುವ ಲಾಭವೆಂದರೆ ಪಾಕಿಸ್ತಾನ ಮತ್ತು ಚೀನಾಗಳಿಂದ ರಕ್ಷಣೆ. ಎರಡೂ ವೈರಿ ರಾಷ್ಟ್ರಗಳಾಗಿರುವುದರಿಂದ ಭಾರತದ ಮೇಲೆ ಸುಲಭವಾಗಿ ಮೇಲೇರಿ ಬರುವುದು ಅವುಗಳಿಂದ ಸಾಧ್ಯವಾಗುವುದಿಲ್ಲ.

ಅಂದರೆ ಜಮ್ಮು-ಕಾಶ್ಮೀರಕ್ಕೆ ಸ್ವಾಯತ್ತತೆ ಒದಗಿಸಿದರೆ, ಪ್ರಸಕ್ತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಸ್ಥಿತಿಯೇ ನಮ್ಮ ಜಮ್ಮು-ಕಾಶ್ಮೀರಕ್ಕೆ ಒದಗುತ್ತದೆ. ಪಾಕ್ ಆಕ್ರಮಿತ ಕಾಶ್ಮೀರ ಅಥವಾ ಆಜಾದ್ ಕಾಶ್ಮೀರಕ್ಕೆ ಪಾಕಿಸ್ತಾನವು ಸ್ವಾಯತ್ತ ಸ್ಥಾನಮಾನವನ್ನು ನೀಡಿದೆ. ಅದರ ಮೇಲೆ ಪಾಕಿಸ್ತಾನಕ್ಕೆ ಹೆಚ್ಚಿನ ಅಧಿಕಾರಗಳಿಲ್ಲ.

ಭಾರತದ ವಶದಲ್ಲಿರುವ ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಈಗಾಗಲೇ ಪಾಕಿಸ್ತಾನದಿಂದ ಬೆಂಬಲ ಪಡೆದುಕೊಂಡು ಭಾರತ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆ ರಾಜ್ಯಕ್ಕೆ ಸ್ವಾಯತ್ತತೆಯನ್ನು ಒದಗಿಸಿದಲ್ಲಿ ಅದು ನಂತರ ಎಗ್ಗಿಲ್ಲದೆ ಪಾಕಿಸ್ತಾನವನ್ನು ನೆಚ್ಚಿಕೊಳ್ಳಬಹುದು. ಇದರಿಂದ ಭಾರತವು ಆ ರಾಜ್ಯದ ಮೇಲಿನ ಹಿಡಿತವನ್ನು ನಿಧಾನವಾಗಿ ಕಳೆದುಕೊಳ್ಳುವ ಕಾಲವೂ ಬರಬಹುದಾಗಿದೆ.

ಅಲ್ಲದೆ ಕಾಶ್ಮೀರಕ್ಕೆ ಸ್ವಾಯತ್ತತೆ ದೊರಕಿದಲ್ಲಿ ಭಾರತ ವಿರೋಧಿ ಕಾರ್ಯಾಚರಣೆಗೆ ಚೀನಾಕ್ಕೂ ಸಹಕಾರವಾಗಬಹುದು.

ಸ್ವಾಯತ್ತತೆ ಪರಿಹಾರವಲ್ಲ: ಬಿಜೆಪಿ
ಪ್ರಧಾನಿಯವರ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿರುವ ಬಿಜೆಪಿ, ಜಮ್ಮು-ಕಾಶ್ಮೀರದ ಸಮಸ್ಯೆಗಳಿಗೆ ಸ್ವಾಯತ್ತತೆ ಪರಿಹಾರವಲ್ಲ ಎಂದು ಹೇಳಿದೆ.

ಜಮ್ಮು-ಕಾಶ್ಮೀರಕ್ಕೆ ಸ್ವಾಯತ್ತತೆ ನೀಡುವ ವಿಚಾರ ಮತ್ತೆ ಕೆರಳಿರುವುದು ದುರದೃಷ್ಟಕರ ಎಂದು ಇಂದು ಸಂಸತ್ತಿನಲ್ಲಿ ಹೇಳಿರುವ ಬಿಜೆಪಿ, ಈ ಸಂಬಂಧ ಪ್ರಧಾನಿಯವರು ನಿಲುವನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದೆ.

ಅಲ್ಲದೆ ಇಂತಹ ಹೇಳಿಕೆಗಳು ಭಯೋತ್ಪಾದಕರು, ಪ್ರತ್ಯೇಕತಾವಾದಿಗಳಿಗೆ ಸಹಕಾರವಾಗಬಹುದು ಮತ್ತು ಭದ್ರತಾ ಪಡೆಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸಬಹುದು ಎಂದು ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ವೆಂಕಯ್ಯ ನಾಯ್ಡು, ಭಾರತದ ಐಕ್ಯತೆ ಮತ್ತು ಕಾಶ್ಮೀರವು ಭಾರತದ ಒಂದು ಅವಿಭಾಜ್ಯ ಅಂಗ ಎನ್ನುವುದಕ್ಕೆ ಧಕ್ಕೆ ಬರದಂತಹ ಯಾವುದೇ ವಿಚಾರಗಳ ಕುರಿತು ಸಂವಿಧಾನದ ಚೌಕಟ್ಟಿನಲ್ಲಿ ನಡೆಯುವ ಚರ್ಚೆಗಳಿಗೆ ಬಿಜೆಪಿ ಮುಕ್ತವಾಗಿದೆ ಎಂದಿದ್ದಾರೆ.

ವಿಶ್ವ ಹಿಂದೂ ಪರಿಷತ್ ಏನು ಹೇಳುತ್ತದೆ?
ಕಾಶ್ಮೀರಕ್ಕೆ ಸ್ವಾಯತ್ತತೆ ಸ್ಥಾನಮಾನ ನೀಡುವ ಅಗತ್ಯವಿಲ್ಲ. ಸ್ವಾಯತ್ತತೆ ಕುರಿತು ಮಾತನಾಡುವ ಮಂದಿ ಕಾಶ್ಮೀರವನ್ನು ಭಾರತದ ಜತೆ ಈಗಾಗಲೇ ವಿಲೀನಗೊಳಿಸಲಾಗಿದೆ ಎಂಬುದನ್ನು ಮನಗಾಣಬೇಕಾಗಿದೆ. ಅಲ್ಲದೆ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಲೇಬೇಕು ಎಂದು ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಅಶೋಕ್ ಸಿಂಘಾಲ್ ಹೇಳಿದ್ದಾರೆ.

ಇದೇ ತಪ್ಪನ್ನು ಈ ಹಿಂದೆ ಜವಾಹರ್ ಲಾಲ್ ನೆಹರೂ ಮಾಡಿದ್ದರು. ಅವರಿಂದಾಗಿ ನಾವು ಮಾನಸ ಸರೋವರವನ್ನು ಕಳೆದುಕೊಳ್ಳಬೇಕಾಯಿತು. ಈಗ ಮನಮೋಹನ್ ಸಿಂಗ್ ಕೂಡ ಅದೇ ರಾಗ ಹಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮಗೆ ಸ್ವಾತಂತ್ರ್ಯವೇ ಬೇಕು: ಪ್ರತ್ಯೇಕತಾವಾದಿಗಳು
ಜಮ್ಮು-ಕಾಶ್ಮೀರಕ್ಕೆ ಸ್ವಾಯತ್ತತೆ ನೀಡುವ ಕುರಿತು ಪರಿಶೀಲನೆ ನಡೆಸಲಾಗುತ್ತದೆ ಎಂಬ ಪ್ರಧಾನಿ ಆಹ್ವಾನವನ್ನು ತಳ್ಳಿ ಹಾಕಿರುವ ಮಾಜಿ ಭಯೋತ್ಪಾದಕ ಕಮಾಂಡರ್ ಹಾಗೂ ಪ್ರತ್ಯೇಕತಾವಾದಿ ರಾಜಕಾರಣಿ ಜಾವೇದ್ ಮಿರ್, ನಮಗೆ ಬೇಕಾಗಿರುವುದು ಸ್ವಾಯತ್ತತೆಯಲ್ಲ, ಸ್ವಾತಂತ್ರ್ಯ ಎಂದಿದ್ದಾರೆ.

ನಾವು ನಮ್ಮ ಸ್ವಾತಂತ್ರ್ಯದ ಗುರಿ ಮುಟ್ಟುವ ತನಕ ಶಾಂತಿಯುತ ಹೋರಾಟವನ್ನು ಮುಂದುವರಿಸುತ್ತೇವೆ. ನಾವು ಹೋರಾಟ ನಡೆಸುತ್ತಿರುವುದು ಸ್ವಾಯತ್ತತೆ ಸ್ಥಾನಮಾನಕ್ಕಲ್ಲ. ನಾವು ಭಾರತಕ್ಕೆ ಸೇರಬೇಕೋ, ಪಾಕಿಸ್ತಾನಕ್ಕೆ ಸೇರಬೇಕೋ ಅಥವಾ ಪ್ರತ್ಯೇಕ ರಾಷ್ಟ್ರವಾಗಿ ಉಳಿಯಬೇಕೋ ಎನ್ನುವುದನ್ನು ನಿರ್ಧರಿಸುವ ಹಕ್ಕನ್ನು ನಮಗೇ ನೀಡಬೇಕು. ಇದರ ಹೊರತು ನಮ್ಮ ಹೋರಾಟವನ್ನು ಕೈ ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ