ದೇಶದಲ್ಲಿ ದ್ವಿಪಕ್ಷ ಪದ್ಧತಿಯನ್ನು ಸೃಷ್ಟಿಸುವ ಮೂಲಕ ಇತರ ಪಕ್ಷಗಳನ್ನು ಮುಗಿಸಲು ಬಿಜೆಪಿ ಮತ್ತು ಕಾಂಗ್ರೆಸ್ ಸಂಚು ರೂಪಿಸಿದೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆರೋಪಿಸಿದ್ದಾರೆ.
ಆದರೆ ಇದಕ್ಕೆ ನಾನು ಅವಕಾಶ ನೀಡುವುದಿಲ್ಲ. ಈ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಹೋರಾಡಲು ಸಿದ್ಧ ಎಂದು ಪಕ್ಷ ಹೇಳಲು ಹಿಂದೇಟು ಹಾಕುವುದಿಲ್ಲ. ಈ ಕಾರ್ಯಕ್ಕೆ ಪ್ರಜಾಪ್ರಭುತ್ವದಲ್ಲಿ ಅಸ್ತಿತ್ವದಲ್ಲಿರುವ ಇತರ ಪಕ್ಷಗಳು ಬೆಂಬಲ ನೀಡಬೇಕು, ಒಟ್ಟಾಗಬೇಕು ಎಂದು ಗೌಡರು ಕರೆ ನೀಡಿದ್ದಾರೆ.
ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗಳು ಪ್ರಾಂತೀಯ ಮತ್ತು ಇತರ ಪಕ್ಷಗಳನ್ನು ಬಳಸಿಕೊಂಡು ನಂತರ ಎಸೆದು ಬಿಡುತ್ತಿವೆ. ಇದರ ವಿರುದ್ಧ ಹೋರಾಡಲು ಎಡಪಕ್ಷಗಳು ಕ್ರೋಢೀಕರಣಗೊಳ್ಳಬೇಕಾದ ಅಗತ್ಯವಿದೆ. ಜಾತ್ಯತೀತ ಪಕ್ಷಗಳು ಬಹುತೇಕ ಒಟ್ಟಾಗುತ್ತಿದ್ದು, ಈ ನಿಟ್ಟಿನಲ್ಲಿ ಮುನ್ನಡೆ ಸಾಧಿಸುತ್ತಿವೆ ಎಂದು ಕೊಟ್ಟಾಯಂನಲ್ಲಿ ಕೇರಳ ಜೆಡಿಎಸ್ ರಾಜ್ಯ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಮಾಜಿ ಪ್ರಧಾನಿ ತಿಳಿಸಿದ್ದಾರೆ.
ತೃತೀಯ ರಂಗದ ಸಾಧ್ಯತೆಗಳ ಕುರಿತು ಮಾತನಾಡಿದ ಅವರು, ತಾನು ಈಗಾಗಲೇ ಈ ಕುರಿತು ಎಡಪಕ್ಷಗಳ ಜತೆ ಚರ್ಚೆ ನಡೆಸಿದ್ದೇನೆ. ಈ ಕುರಿತು ಇನ್ನಷ್ಟೇ ಅಂತಿಮ ನಿರ್ಧಾರಗಳು ಹೊರ ಬರಬೇಕಿದೆ. ದೇಶದಲ್ಲಿ ಜಾತ್ಯತೀತ ಶಕ್ತಿಗಳು ಒಗ್ಗಟ್ಟಾಗಬೇಕಾದ ಅಗತ್ಯವಿದೆ ಎಂದರು.
ನಾನು ಪ್ರಧಾನಿಯಾದ ದಿನದಿಂದ ನಾನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ದೇಶದಲ್ಲಿ ದ್ವಿಪಕ್ಷೀಯ ಪದ್ಧತಿಯನ್ನು ನಿರ್ಮಿಸಲು ಯತ್ನಿಸುತ್ತಿರುವ ದುಷ್ಟ ಸಂಚನ್ನು ಗಮನಿಸುತ್ತಾ ಬಂದಿದ್ದೇನೆ. ಇದು ಪ್ರಾದೇಶಿಕ ಪಕ್ಷಗಳನ್ನು ಮುಗಿಸುವ ಸಂಚು ಎಂಬುದನ್ನು ಮನಗಾಣಬೇಕಾಗಿದೆ ಎಂದು ಒತ್ತಿ ಹೇಳಿದರು.
ವೀರೇಂದ್ರ ಕುಮಾರ್ ಕುರಿತು... ಜೆಡಿಎಸ್‌ನಿಂದ ಬೇರ್ಪಟ್ಟಿರುವ ಎಂ.ಪಿ. ವೀರೇಂದ್ರ ಕುಮಾರ್ ಅವರು ಸೋಷಿಯಲಿಸ್ಟ್ ಜನತಾ ಪಾರ್ಟಿಯನ್ನು (ಡೆಮಾಕ್ರಟಿಕ್) ಹುಟ್ಟು ಹಾಕಿರುವ ಕುರಿತು ಗೌಡರು ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ.
ಈ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಅವರು ಯುಡಿಎಫ್ ಜತೆ ಹೋಗಲು ನಿರ್ಧರಿಸಿದ್ದಾರೆ. ಅವರು ನಮ್ಮ ಹಿರಿಯ ನಾಯಕರಾಗಿದ್ದವರು. ಅವರಿಗೆ ನಾನು ಶುಭ ಹಾರೈಸುತ್ತೇನೆ ಎಂದರು.
ಜೆಡಿಎಸ್‌ನಿಂದ ಬೇರ್ಪಡಲು ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಜತೆ ಹೋಗಲು ಕಾರಣದ ಅಂಶಗಳೇನು ಎಂಬುದಕ್ಕೂ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಲ್ಪಸಂಖ್ಯಾತರಿಗೆ ರಕ್ಷಣೆಯಿಲ್ಲ... ಬೆಂಗಳೂರು ಸರಣಿ ಸ್ಫೋಟ ಪ್ರಕರಣದ ಆರೋಪಿ ಪಿಡಿಪಿ ನಾಯಕ ಅಬ್ದುಲ್ ನಾಸಿರ್ ಮದನಿಯವರನ್ನು ಬಂಧಿಸಲು ಕರ್ನಾಟಕ ಪೊಲೀಸರು ಕೇರಳಕ್ಕೆ ಬಂದಿರುವ ಕುರಿತು ಕೂಡ ದೇವೇಗೌಡ ಪ್ರತಿಕ್ರಿಯೆ ನೀಡಿಲ್ಲ. ಈಗಲೇ ನಾನು ಯಾವುದನ್ನೂ ಹೇಳಲಾರೆ ಎಂದಿದ್ದಾರೆ.
ಆದರೆ ಕರ್ನಾಟಕದ ಬಿಜೆಪಿ ಆಡಳಿತದ ಅಡಿಯಲ್ಲಿ ಅಲ್ಪಸಂಖ್ಯಾತರನ್ನು ಸುಖಾಸುಮ್ಮನೆ ಗುರಿ ಮಾಡಲಾಗುತ್ತಿದೆ. ಅಲ್ಪಸಂಖ್ಯಾತರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ. ಅವರನ್ನು ಪ್ರಕರಣಗಳಲ್ಲಿ ಸಿಕ್ಕಿಸಿ ಹಾಕಲಾಗುತ್ತಿದೆ. ಅವರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂದು ಮದನಿ ಪ್ರಕರಣವನ್ನು ಉಲ್ಲೇಖಿಸದೆ ಆರೋಪಿಸಿದರು.