ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕನ್ನಡ ನೆಲದಲ್ಲಿ ಬೇರೂರುತ್ತಿದ್ದಾರೆ ಕೆಂಪು ಉಗ್ರರು: ಎಚ್ಚರಿಕೆ (DV Guru Prasad | Naxals | south India | Karnataka)
Bookmark and Share Feedback Print
 
ಪಶ್ಚಿಮ ಬಂಗಾಲ, ಛತ್ತೀಸ್‌ಗಢ, ಬಿಹಾರ ಮುಂತಾದ ರಾಜ್ಯಗಳಲ್ಲಿ ಅಟ್ಟಹಾಸಗೈಯ್ಯುತ್ತಿರುವ ಮಾವೋವಾದಿಗಳು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ತಮ್ಮ ನೆಲೆಗಳನ್ನು ಬಲಪಡಿಸುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಆಂಧ್ರಪ್ರದೇಶ ಪೊಲೀಸ್ ಮುಖ್ಯಸ್ಥರು ಎಚ್ಚರಿಕೆ ನೀಡಿದ್ದಾರೆ.

ನಕ್ಸಲರು ತಮ್ಮ ಪ್ರಭಾವವನ್ನು ದೇಶದಾದ್ಯಂತ ಪಸರಿಸಲು ಯತ್ನಿಸುತ್ತಿದ್ದಾರೆ. ಅವರು ಕೇರಳ, ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ತಮ್ಮ ಶಾಶ್ವತ ನೆಲೆಗಳನ್ನು ಸ್ಥಾಪಿಸಲು ಯತ್ನಿಸುತ್ತಿರುವುದರ ಕುರಿತು ನಮ್ಮಲ್ಲಿ ಪುರಾವೆಗಳಿವೆ ಎಂದು ಆಂಧ್ರ ಡಿಜಿಪಿ ಆರ್.ಆರ್. ಗಿರೀಶ್ ಕುಮಾರ್ ತಿಳಿಸಿದ್ದಾರೆ.

ದಕ್ಷಿಣ ರಾಜ್ಯಗಳ ಡಿಜಿಪಿಗಳ ಸಮಾವೇಶದ ನಂತರ ಪತ್ರಕರ್ತರಿಗೆ ವಿವರಣೆ ನೀಡುತ್ತಿದ್ದ ಅವರು, ಕಣ್ಣೆದುರೇ ಅಪಾಯವಿದ್ದರೂ ಗುರುತಿಸಲಾಗದ ಸೂಕ್ಷ್ಮ ಪರಿಸ್ಥಿತಿ ನಿಧಾನವಾಗಿ ನೆಲೆಸುತ್ತಿದೆ ಎಂಬ ಕುರಿತು ನಾವು ನೆರೆ ರಾಜ್ಯಗಳ ಪೊಲೀಸರಿಗೆ ಎಚ್ಚರಿಕೆ ನೀಡಿದ್ದೇವೆ. ಇದರಿಂದ ಅವರು ಸೂಕ್ತ ಸಂದರ್ಭದಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಆಂಧ್ರಪ್ರದೇಶದಲ್ಲಿ ಕೆಂಪು ಉಗ್ರರ ಚಟುವಟಿಕೆ ತೀವ್ರತರದಲ್ಲೇ ಗುರುತಿಸಿಕೊಂಡು ಬಂದಿದೆ. ಅದನ್ನು ಸಾಕಷ್ಟು ನಿಯಂತ್ರಿಸುತ್ತಲೂ ನಾವು ಬಂದಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿನ ಸಿಪಿಐ ಮಾವೋವಾದಿಗಳ ಕೆಲವು ಪ್ರಮುಖ ಮುಖಂಡರು ಸೆರೆ ಸಿಕ್ಕಿರುವುದು ದಕ್ಷಿಣ ಭಾರತದಲ್ಲಿ ಅವರು ತಮ್ಮ ಜಾಲವನ್ನು ವಿಸ್ತರಿಸುತ್ತಿರುವುದರ ಸುಳಿವುಗಳಾಗಿವೆ. ದಕ್ಷಿಣ ಭಾರತದಲ್ಲಿ ಅವರು ತಮ್ಮ ಕಬಂದಬಾಹುಗಳನ್ನು ವಿಸ್ತರಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಇತರ ಡಿಜಿಪಿಗಳನ್ನು ಉಲ್ಲೇಖಿಸುತ್ತಾ ತಿಳಿಸಿದ್ದಾರೆ.

ಆಂಧ್ರಪ್ರದೇಶದ ಉನ್ನತ ಪೊಲೀಸ್ ಅಧಿಕಾರಿಗಳ ಹತ್ಯೆಗೆ ಸಂಚು ರೂಪಿಸಿದ್ದ ಮಾವೋವಾದಿಗಳನ್ನು ಕಳೆದ ನವೆಂಬರ್ ಮತ್ತು ಇದೇ ವರ್ಷದ ಜೂನ್ ತಿಂಗಳಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಸೆರೆ ಹಿಡಿದಿದ್ದರು.

ಡಿಜಿಪಿಗಳ ಸಮಾವೇಶದಲ್ಲಿ ಕೇರಳದಿಂದ ಜಾಕೋಬ್ ಪುನ್ನೋಸ್, ಕರ್ನಾಟಕದ ಸಿಐಡಿ ಡಿಜಿಪಿ ಡಿ.ವಿ. ಗುರು ಪ್ರಸಾದ್, ತಮಿಳುನಾಡಿನ ತಲಿತಾ ಸರಣ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪಾಪ್ಯುಲರ್ ಫ್ರಂಟ್...
ಇತ್ತೀಚೆಗಷ್ಟೇ ಕೇರಳದಲ್ಲಿ ಉಪನ್ಯಾಸಕರೊಬ್ಬರ ಕೈ ಕತ್ತರಿಸುವ ಮೂಲಕ ಸುದ್ದಿ ಮಾಡಿರುವ ಮುಸ್ಲಿಂ ಮೂಲಭೂತವಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ಆಂಧ್ರಪ್ರದೇಶದಲ್ಲೂ ತನ್ನ ಚಟುವಟಿಕೆಗಳನ್ನು ತೀವ್ರಗೊಳಿಸಲು ಯತ್ನಿಸಿದ ಕುರಿತು ಸುಳಿವು ಲಭಿಸಿದೆ ಎಂದು ಇದೇ ಸಂದರ್ಭದಲ್ಲಿ ಡಿಜಿಪಿ ಗಿರೀಶ್ ತಿಳಿಸಿದ್ದಾರೆ.

ಇಲ್ಲಿನ ಹಬ್ಬದ ಕೆಲ ದಿನಗಳ ಮೊದಲು ಹೈದರಾಬಾದ್‌ನಲ್ಲಿ ಪಿಎಫ್ಐ ಸಂಘಟನೆಯ ಕೆಲವು ಪೋಸ್ಟರುಗಳು ಕಾಣಿಸಿಕೊಂಡಿದ್ದವು. ಕರ್ನೂಲ್ ಮತ್ತು ನೆಲ್ಲೂರ್ ಜಿಲ್ಲೆಗಳಲ್ಲಿ ಆ ಸಂಘಟನೆಯ ಸದಸ್ಯರು ಧರಣಿ ಕೂಡ ನಡೆಸಿದ್ದಾರೆ. ಹಾಗಾಗಿ ನಾವು ಪರಿಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿದ್ದೇವೆ. ರಾಜ್ಯದಲ್ಲಿ ಯಾವುದೇ ಅನಾಹುತಗಳ ಸೃಷ್ಟಿಗೆ ನಾವು ಅವಕಾಶ ನೀಡುವುದಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ