ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಂಸದರ ಸಂಬಳ ಹೆಚ್ಚಳಕ್ಕೆ ಯಾರೂ ಗದ್ದಲ ಎಬ್ಬಿಸಲ್ಲ! (MP's salary | Govt of India | Congress | BJP)
Bookmark and Share Feedback Print
 
ಸಂಸದರಿಗೆ ಸಂಬಳ ಜಾಸ್ತಿ ಮಾಡಬೇಕಂತೆ. ಹಾಗಂತ ಸಂಸದರು ತಮ್ಮನ್ನು ಆರಿಸಿದ ಪ್ರಭುಗಳಲ್ಲಿ ಈ ವಿಚಾರವನ್ನು ಮುಂದಿಡುತ್ತಿದ್ದಾರೆ ಅಂದುಕೊಳ್ಳಬೇಡಿ. ಅಂತಹ ಮಸೂದೆಗಳನ್ನು ತಪ್ಪಿಯೂ ಗದ್ದಲ-ಕೋಲಾಹಲ ಎಬ್ಬಿಸದೆ ಸುಮ್ಮನೆ ಅಂಗೀಕರಿಸಿಬಿಡುತ್ತಾರೆ ನಮ್ಮ ದಿ ಗ್ರೇಟ್ ರಾಜಕಾರಣಿಗಳು!

ಹೌದು, ಪ್ರಸಕ್ತ 16,000 ರೂಪಾಯಿ ವೇತನ ಪಡೆಯುತ್ತಿರುವ ಸಂಸದರ ವೇತನವನ್ನು ಐದು ಪಟ್ಟು, ಅಂದರೆ 80,001 ರೂಪಾಯಿಗಳಿಗೆ ಏರಿಕೆ ಮಾಡಬೇಕೆನ್ನುವುದು ಒಕ್ಕೊರಲಿನ ಬೇಡಿಕೆ. ಮುಂದಿನ ವಾರ ಈ ಸಂಬಂಧ ಮಸೂದೆಯೊಂದು ಲೋಕಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ. ಈ ಮಸೂದೆ ಯಾವುದೇ ಅಡೆತಡೆಗಳಿಲ್ಲದೆ ಅಂಗೀಕಾರವಾಗುವ ಬಗ್ಗೆ ಎಳ್ಳಷ್ಟೂ ಸಂಶಯ ಬೇಕಾಗಿಲ್ಲ.

ಪಾಪ, ಇದುವರೆಗೆ ಕೇವಲ 16,000 ರೂಪಾಯಿ ವೇತನವನ್ನಷ್ಟೇ ನಮ್ಮ ಸಂಸದರು ಪಡೆದುಕೊಳ್ಳುತ್ತಿದ್ದರೇ ಎಂದು ಇದಕ್ಕಿಂತ ದ್ವಿಗುಣ ಮೊತ್ತವನ್ನು ಪ್ರತಿ ತಿಂಗಳು ಎಣಿಸುವ ಮಂದಿ ಅಂದುಕೊಂಡಿದ್ದರೆ, ಅದು ಸುಳ್ಳು. ಇಲ್ಲಿದೆ ನೋಡಿ, ಒಂದು ಸ್ಥೂಲ ಚಿತ್ರಣ.

ಸೌಲಭ್ಯಗಳುಈ ಹಿಂದೆಈಗಇಷ್ಟು ಬೇಕಂತೆ
ಸಂಸದನ ಮಾಸಿಕ ವೇತನ12,000 ರೂ.16,000 ರೂ.80,001 ರೂ.
ದಿನವೊಂದರ ಕಲಾಪ ಭತ್ಯೆ500 ರೂ.1,000 ರೂ.2,000 ರೂ.
ಕ್ಷೇತ್ರದಲ್ಲಿ ಸುತ್ತಾಡಲು ತಿಂಗಳಿಗೆ10,000 ರೂ.20,000 ರೂ.40,000 ರೂ.
ತನ್ನ ಕಚೇರಿ ವೆಚ್ಚಗಳಿಗಾಗಿ14,000 ರೂ.20,000 ರೂ.34,000 ರೂ.
ಲೆಕ್ಕಪತ್ರ ಮತ್ತಿತರ ಖರ್ಚುಗೊತ್ತಿಲ್ಲ2,000 ರೂ.ಗೊತ್ತಿಲ್ಲ
ರಸ್ತೆಯಲ್ಲಿ ಸುತ್ತಾಡಿದ್ದಕ್ಕೆ8 ರೂ./ಕಿ.ಮೀ.ಗೆ12 ರೂ./ಕಿ.ಮೀ.ಗೆಗೊತ್ತಿಲ್ಲ

ಇತರ ಸೌಲಭ್ಯಗಳತ್ತಲೂ ಕಣ್ಣು ಹಾಯಿಸಿ...
* ರೈಲಿನ ಪ್ರಥಮ ದರ್ಜೆಯಲ್ಲಿ ಪತ್ನಿ/ಪತಿ, ಮಕ್ಕಳೊಂದಿಗೆ ಎಲ್ಲಿ ಸುತ್ತಾಡಿದರೂ ಉಚಿತ.
* ಸಂಸದರಿಗೆ ದೆಹಲಿಯಲ್ಲಿ ಮೂರು ಬೆಡ್‌ರೂಂ ಉಳ್ಳ ಮನೆ.
* ಈ ಮನೆಯ ವಿದ್ಯುತ್, ನೀರಿನ ಬಿಲ್ ಎಲ್ಲವನ್ನೂ ಸರಕಾರ ಪಾವತಿಸುತ್ತದೆ.
* ಈ ಮನೆಗೆ ಅಗತ್ಯವಿರುವ ಪೀಠೋಪಕರಣಗಳಿಗೆ 60,000 ರೂಪಾಯಿ ಸರಕಾರ ನೀಡುತ್ತದೆ.
* ಬಟ್ಟೆ ಒಗೆಯುವುದು-ಇಸ್ತ್ರಿ ಮಾಡುವುದಕ್ಕೂ ಭತ್ಯೆಗಳಿವೆ.
* ವರ್ಷಕ್ಕೆ 1,70,000 ದೂರವಾಣಿ ಕರೆಗಳು ಉಚಿತ.
* ಮನೆ ಬಳಕೆಗೆ 50,000 ಯೂನಿಟ್‌ ವಿದ್ಯುತ್ ಉಚಿತ.
* ಶೇ.5ರ ಬಡ್ಡಿದರದಲ್ಲಿ ಐದು ಲಕ್ಷ ರೂಪಾಯಿಗಳವರೆಗೆ ಸಾಲ.

ರಸ್ತೆ ಭತ್ಯೆಯಿದು...
ನಮ್ಮ ಸಂಸದರು ರಸ್ತೆಯಲ್ಲಿ ಪ್ರಯಾಣಿಸಿದರೆ, ಅದನ್ನು ಕೂಡ ಸರಕಾರದಿಂದ ಪಡೆದುಕೊಳ್ಳುತ್ತಾರೆ. ಇದುವರೆಗೆ ಕಿಲೋಮೀಟರ್ ಒಂದಕ್ಕೆ 12 ರೂಪಾಯಿಗಳನ್ನು ನೀಡಲಾಗುತ್ತಿತ್ತು. ಇನ್ನು ಅದೂ ಹೆಚ್ಚಾಗಲಿದೆ.

ಅಂದರೆ ಬೆಂಗಳೂರಿನಿಂದ ದೆಹಲಿಯ ನಡುವಿನ ಅಂದಾಜು ದೂರ 2000 ಕಿಲೋ ಮೀಟರ್. ಬೆಂಗಳೂರಿನಿಂದ ದೆಹಲಿಗೆ ಹೋಗಿ ವಾಪಸ್ ಬೆಂಗಳೂರಿಗೆ ಬಂದರೆ ಆಗ ಸಂಸದನೊಬ್ಬ ಸರಕಾರಕ್ಕೆ ನೀಡುವ ಬಿಲ್ 48,000 ರೂಪಾಯಿಗಳದ್ದು!

ವಿಮಾನದಲ್ಲಿ 40 ಬಾರಿ ಪ್ರಯಾಣ ಸಾಲದಂತೆ...
ಸಂಸದರೀಗ ಬಯಸುತ್ತಿರುವುದು ತಮ್ಮ ಹಿತವನ್ನಷ್ಟೇ ಅಲ್ಲ. ತಮ್ಮ ಹೆಂಡತಿ/ಗಂಡ, ಮಕ್ಕಳು ಮತ್ತು ನೌಕರರದ್ದು ಕೂಡ. ಹೌದು, ಪ್ರಸಕ್ತ ಸಂಸದನೊಬ್ಬ ತನ್ನ ಕ್ಷೇತ್ರದಿಂದ ನವದೆಹಲಿಗೆ 40 ಬಾರಿ ತಮ್ಮ ಹೆಂಡತಿ/ಗಂಡ, ಮಕ್ಕಳು ಅಥವಾ ನೌಕರರೊಂದಿಗೆ ಉಚಿತವಾಗಿ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ.

ಆದರೆ ಈಗ ಅದರಲ್ಲಿ 12 ಹೆಚ್ಚುಗೊಳಿಸಬೇಕಂತೆ. ಅಂದರೆ ಉಚಿತ ವಿಮಾನ ಪ್ರಯಾಣದ ಸಂಖ್ಯೆ 52ಕ್ಕೇರಬೇಕೆಂಬುದು ಅವರ ಬೇಡಿಕೆ. ಅಲ್ಲದೆ ತಮ್ಮ ಜತೆಗೆ ಪ್ರಯಾಣಿಸುವ ಮನೆಗೆಲಸದವರಿಗೆ ಭತ್ಯೆ ನೀಡಬೇಕೆಂದೂ ಆಗ್ರಹಿಸುತ್ತಿದ್ದಾರೆ.

ಕಾರಣ ಬೆಲೆಯೇರಿಕೆ...
ಸಂಬಳ ಜಾಸ್ತಿ ಮಾಡಲು ಸಂಸದರು ನೀಡಿರುವ ಕಾರಣ ಬೆಲೆಯೇರಿಕೆ. ಇದು ಅಚ್ಚರಿಯಾದರೂ ನಿಜ. ಬೆಲೆಯೇರಿಕೆಗೆ ಕಾರಣರಾದ, ಬೆಲೆಯೇರಿಕೆಯನ್ನು ನಿಯಂತ್ರಿಸಲು ವಿಫಲರಾದ ಸರಕಾರದ ಪ್ರತಿನಿಧಿಗಳೇ (ಜನಪ್ರತಿನಿಧಿ) ಹೀಗೆ ಹೇಳುತ್ತಿದ್ದಾರೆ.

ಅಲ್ಲದೆ ಕಾಂಗ್ರೆಸ್ ಸಂಸದ ಚರಣ್ ದಾಸ್ ಮಹಾಂತ್ ನೀಡುವ ಸಮರ್ಥನೆಯನ್ನು ಕೇಳಿ. ಅವರ ಪ್ರಕಾರ ಕಾರ್ಯದರ್ಶಿ ರ‌್ಯಾಂಕಿಗಿಂತ (80,000) ಒಂದು ರೂಪಾಯಿಯಾದರೂ ನಮಗೆ ಹೆಚ್ಚು ವೇತನ ನೀಡಬೇಕು, ಪ್ರೊಟೋಕಾಲ್ ಪ್ರಕಾರ ನಾವು ಉನ್ನತರು ಎಂದು ಹೇಳಿಕೊಂಡಿದ್ದಾರೆ.

ಕೇಳಿದಷ್ಟು ಜಾಸ್ತಿ ಮಾಡ್ತಾ ಇಲ್ಲ...
ಸಂಸದರ ವೇತನವನ್ನು ಐದು ಪಟ್ಟು, ಅಂದರೆ 80,001 ರೂಪಾಯಿಗಳಿಗೆ ಹೆಚ್ಚಳ ಮಾಡಬೇಕು ಎಂದು ಜಂಟಿ ಸದನ ಸಮಿತಿಯು ಸರಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ ಸರಕಾರವು ಇದನ್ನು 50,000 ರೂಪಾಯಿಗಳಿಗೆ ನಿಗದಿ ಮಾಡಿದೆ ಎಂದು ಹೇಳಲಾಗಿದೆ.

ಪ್ರಸಕ್ತ ಹೊಂದಿರುವ ಕಲಾಪ ಭತ್ಯೆಯನ್ನು 1,000ದಿಂದ 2,000 ರೂಪಾಯಿಗಳಿಗೆ ಹೆಚ್ಚಳಗೊಳಿಸಲು ಸರಕಾರ ಒಪ್ಪಿಗೆ ಸೂಚಿಸಿದೆ. ಅಲ್ಲದೆ ಕ್ಷೇತ್ರ ಭತ್ಯೆ, ಕಚೇರಿ ಭತ್ಯೆ ಮತ್ತಿತರ ಭತ್ಯೆಗಳನ್ನೂ ಹೆಚ್ಚಳಗೊಳಿಸಲಿದೆ.

ಆದರೆ ತಮ್ಮ ವಿಮಾನ ಯಾನದ ಸಂಖ್ಯೆಯನ್ನು ಹೆಚ್ಚಳ ಮಾಡುವುದು, ದೂರವಾಣಿ ಕರೆ ಹೆಚ್ಚು ಬೇಕೆಂಬ ಬೇಡಿಕೆಗೂ ಸರಕಾರ ನಕಾರ ಸೂಚಿಸಿದೆ ಎಂದು ವರದಿಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ