ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಪ್ರಾಪ್ತರ ನಡುವಿನ ವಿವಾಹ ಅಸಿಂಧುವಲ್ಲ: ಹೈಕೋರ್ಟ್
(minors Marriage valid | Delhi High Court | Child Marriage Act | Hindu Marriage Act)
ಅಪ್ರಾಪ್ತ ಹುಡುಗ-ಹುಡುಗಿಯ ನಡುವಿನ ವಿವಾಹವು ಊರ್ಜಿತ ಮತ್ತು ಇಬ್ಬರಲ್ಲೊಬ್ಬರು ಮನವಿ ಮಾಡದ ಹೊರತು ಮದುವೆಯನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ದೆಹಲಿ ಉಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ.
ಮದುವೆಯನ್ನು ಅನೂರ್ಜಿತಗೊಳಿಸುವ ಅಥವಾ ರದ್ದುಗೊಳಿಸಬಹುದಾದ ವಿವಾಹಗಳ ವಿಭಾಗಗಳಿಗೆ ಅನ್ವಯವಾಗುವ, ಐದನೇ ಪರಿಚ್ಛೇದದ ಮೂರನೇ ಅಧಿನಿಯಮ (ವರನಿಗೆ 21 ಹಾಗೂ ವಧುವಿಗೆ 18 ವರ್ಷ)ದಡಿ ಈ ಅಪ್ರಾಪ್ತ ವಯಸ್ಕರ ವಿವಾಹವು ಬರುವುದಿಲ್ಲ. ಹಾಗಾಗಿ ಮದುವೆಯು ಸಿಂಧುವೆನಿಸಿಕೊಳ್ಳುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
ಬಾಲ್ಯವಿವಾಹವನ್ನು ನಿಷೇಧಿಸಿರುವ ಕಾನೂನಿನ ಪ್ರಕಾರವೂ ಅಪ್ರಾಪ್ತರ ಮದುವೆಯನ್ನು ಅಸಿಂಧು ಎಂದು ಘೋಷಿಸಿಲ್ಲ. ಈ ಕಾಯ್ದೆಯ ಪ್ರಕಾರ, ಅಪ್ರಾಪ್ತ ವಧು ಅಥವಾ ವರ ಮನವಿ ಮಾಡಿಕೊಳ್ಳದ ಹೊರತು ಮದುವೆಯನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಬಿ.ಡಿ. ಅಹ್ಮದ್ ಮತ್ತು ವಿ.ಕೆ. ಜೈನ್ ನೇತೃತ್ವದ ಪೀಠವು ಸ್ಪಷ್ಟಪಡಿಸಿದೆ.
ಹಿಂದೂ ವಿವಾಹ ಕಾಯ್ದೆಗೆ ಸಂಬಂಧಿಸಿದಂತೆ, ಈ ಹಿಂದೆ ಬಾಲ್ಯ ವಿವಾಹವು ವೈಯಕ್ತಿಕ ಕಾನೂನಿನ ಅಡಿಯಲ್ಲಿದ್ದುದರಿಂದ, ರದ್ದುಪಡಿಸುವಂಥದ್ದಾಗಿರಲಿಲ್ಲ ಎಂಬುದು ಸ್ಪಷ್ಟ. ಆದರೆ, ಬಾಲ್ಯವಿವಾಹ ನಿಷೇಧ ಕಾಯ್ದೆಯ ಮೂರನೇ ಪರಿಚ್ಛೇದದ ಪ್ರಕಾರ, ಮದುವೆಯನ್ನು ರದ್ದುಪಡಿಸುವ ಅಧಿಕಾರ ಬಾಲ್ಯವಿವಾಹಕ್ಕೊಳಗಾಗಿರುವ ಅಪ್ರಾಪ್ತ ಸಂಗಾತಿಗೆ ಇರುತ್ತದೆ. ಆದರೆ ಎರಡು ಪಕ್ಷದವರನ್ನು ಹೊರತುಪಡಿಸಿ ಬೇರೆ ಯಾರೂ ಮದುವೆಯನ್ನು ಅನೂರ್ಜಿತಗೊಳಿಸಲು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಹಿಂದೂ ವಿವಾಹ ಕಾಯ್ದೆಯ ನಿಬಂಧನೆಗಳನ್ನು ರೂಪಿಸುವಾಗ ಶಾಸಕಾಂಗವು ಅರಿವಿದ್ದುಕೊಂಡೇ, ವೈವಾಹಿಕ ವಯೋಮಾನ ಉಲ್ಲಂಘನೆಯ ಮದುವೆಗಳನ್ನು ಅಸಿಂಧು ಅಥವಾ ಅನೂರ್ಜಿತಗೊಳಿಸುವ ವಿಭಾಗದಿಂದ ಹೊರಗಿರಿಸಿತ್ತು ಎಂದು ನ್ಯಾಯಾಲಯ ಹೇಳಿದೆ.
ಮನೆಯಿಂದ ಪರಾರಿಯಾದ ಬಳಿಕ ತಮ್ಮ ಕುಟುಂಬಗಳ ಇಚ್ಛೆಗೆ ವಿರುದ್ಧವಾಗಿ ಅಪ್ರಾಪ್ತ ಹುಡುಗಿಯನ್ನು ಮದುವೆಯಾಗಿದ್ದ ಅಪ್ರಾಪ್ತ ಹುಡುಗನೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಈ ಮೇಲಿನಂತೆ ತೀರ್ಪು ನೀಡಿದೆ.
16ರ ಹರೆಯದ ಅಪ್ರಾಪ್ತೆ ಪೂನಂ ಶರ್ಮಾಳನ್ನು 18ರ ಹರೆಯದ ಜಿತೇಂದ್ರ ಕುಮಾರ್ ಶರ್ಮಾ ಅಪಹರಿಸಿ, ಅತ್ಯಾಚಾರ ನಡೆಸಿದ್ದಾನೆ ಎಂದು ಹುಡುಗಿಯ ಕುಟುಂಬದ ಸದಸ್ಯರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದನ್ನು ಅಪ್ರಾಪ್ತ ಹುಡುಗ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ.
ಆದರೆ ಅಪ್ರಾಪ್ತರ ಮದುವೆ ನಿಷಿದ್ಧವಾಗಿರುವ ಹೊರತಾಗಿಯೂ, ಮದುವೆಯನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿರುವುದರಿಂದ ಅಪ್ರಾಪ್ತ ದಂಪತಿಯೀಗ ನಿಟ್ಟುಸಿರು ಬಿಟ್ಟಿದ್ದಾರೆ.