ಹೀಗೆಂದು ಹೇಳಿರುವುದು ಭೋಪಾಲ್ ಅನಿಲ ದುರಂತ ನಡೆದ ಸಂದರ್ಭದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿದ್ದ ಅರ್ಜುನ್ ಸಿಂಗ್. ನಡೆಯಲಾರದ ಸ್ಥಿತಿಯಲ್ಲಿ ವ್ಹೀಲ್ ಚೇರಿನಲ್ಲೇ ರಾಜ್ಯಸಭೆಗೆ ಆಗಮಿಸಿರುವ ಅವರು, ಯಾಂತ್ರಿಕವಾಗಿ ಮೇಲಿನಂತೆ ಹೇಳಿ 'ಕೈ' ತೊಳೆದುಕೊಂಡಿದ್ದಾರೆ.
ಭೋಪಾಲ್ ಅನಿಲ ದುರಂತಕ್ಕೆ ಕಾರಣವಾದ ಯೂನಿಯನ್ ಕಾರ್ಬೈಡ್ ಕಂಪನಿಯ ಮುಖ್ಯಸ್ಥ ವಾರೆನ್ ಆಂಡರ್ಸನ್ ದೇಶ ಬಿಟ್ಟು ಹೋಗುವಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಪಾತ್ರವಿಲ್ಲ. ಆಗ ಈ ಸಂಬಂಧ ನಿರಂತರ ದೂರವಾಣಿ ಕರೆಗಳನ್ನು ಮಾಡುತ್ತಿದ್ದುದು ಪಿ.ವಿ. ನರಸಿಂಹರಾವ್ ಅವರ ಕೇಂದ್ರ ಗೃಹಸಚಿವಾಲಯ ಎಂದು ತಿಳಿಸಿದ್ದಾರೆ.
ಯೂನಿಯನ್ ಕಾರ್ಬೈಡ್ ಸಿಇಒ ವಾರೆನ್ ಆಂಡರ್ಸನ್‌ನನ್ನು ಬಂಧಿಸಬೇಕು ಎನ್ನುವುದು ನನ್ನ ಅನಿಸಿಕೆಯಾಗಿತ್ತು. ಅದರಂತೆ ಬಂಧಿಸಲಾಯಿತು. ಆಂಡರ್ಸನ್ ಬಂಧನಕ್ಕೆ ನಾನು ಲಿಖಿತ ಆದೇಶವನ್ನೇ ನೀಡಿದ್ದೆ. ಆಂಡರ್ಸನ್‌ನನ್ನು ಜನತೆ ಕೊಂದು ಹಾಕಬಹುದು ಎಂಬ ಭೀತಿ ನನಗಿತ್ತು. ಆ ಹೊತ್ತಿನಲ್ಲಿ ಆತನನ್ನು ರಕ್ಷಿಸುವುದು ನನ್ನ ಕರ್ತವ್ಯವಾಗಿತ್ತು. ದುರಂತ ನಡೆದ ಹೊತ್ತಿನಲ್ಲಿ ಪ್ರಧಾನಿ ರಾಜೀವ್ ಗಾಂಧಿ ಪ್ರವಾಸದಲ್ಲಿದ್ದರು ಎಂದು ಅರ್ಜುನ್ ಸಿಂಗ್ ವಿವರಣೆ ನೀಡಿದರು.
ಅಲ್ಲದೆ ತಾನು ರಾಜೀನಾಮೆಯ ಪ್ರಸ್ತಾಪವನ್ನೂ ಮುಂದಿಟ್ಟಿದ್ದೆ ಎಂದೂ ಆಗಿನ ಮಧ್ಯಪ್ರದೇಶ ಮುಖ್ಯಮಂತ್ರಿ ಹೇಳಿದ್ದಾರೆ. ದುರಂತದ ನಂತರದ ದಿನಗಳಲ್ಲಿ ನಾನು ಭೋಪಾಲ್‌ನಲ್ಲೇ ಉಳಿದುಕೊಳ್ಳುತ್ತಿದ್ದೆ. ನನ್ನ ರಾಜೀನಾಮೆಯನ್ನು ರಾಜೀವ್ ತಿರಸ್ಕರಿಸಿದ್ದರು ಎಂದು ಹೇಳಿದ್ದಾರೆ.
ಆಂಡರ್ಸನ್‌ಗೆ ಜಾಮೀನು ನೀಡಬೇಕೆಂದು ದೆಹಲಿಯಿಂದ ಗೃಹಸಚಿವಾಲಯದ ಅಧಿಕಾರಿಗಳು ತನಗೆ ನಿರಂತರ ಕರೆಗಳನ್ನು ಮಾಡುತ್ತಿದ್ದಾರೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿದ್ದ ಬ್ರಹ್ಮ ಸ್ವರೂಪ್ ನನಗೆ ತಿಳಿಸಿದ್ದರು. ನಿಮಗೆ ಇಷ್ಟ ಬಂದಂತೆ ಮಾಡಿ ಎಂದು ನಾನು ಕಾರ್ಯದರ್ಶಿಯವರಿಗೆ ಹೇಳಿದ್ದೆ. ಆದರೆ ಮತ್ತೆ ಸಮನ್ಸ್ ನೀಡಿದಾಗ ಆಂಡರ್ಸನ್ ಕೋರ್ಟ್‌ಗೆ ಬರುವಂತಾಗಬೇಕು ಎಂದು ಹೇಳಿದ್ದೆ ಎಂದು ಪರೋಕ್ಷವಾಗಿ ಪಿ.ವಿ. ನರಸಿಂಹರಾವ್ ಅವರತ್ತ ಬೆಟ್ಟು ಮಾಡಿದರು.
ನಂತರದ ದಿನಗಳಲ್ಲಿ ಪಿ.ವಿ. ನರಸಿಂಹ ರಾವ್ ಪ್ರಧಾನ ಮಂತ್ರಿಯಾಗಿದ್ದಾಗ ಅವರ ಸಂಪುಟದಲ್ಲಿ ಮಾನವ ಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಅರ್ಜುನ್ ಸಿಂಗ್, ರಾವ್ ಜತೆ ಅತ್ಯುತ್ತಮ ಸಂಬಂಧ ಹೊಂದಿರಲಿಲ್ಲ ಎನ್ನುವುದು ಜಗಜ್ಜಾಹೀರು.
ಅದೇ ಹೊತ್ತಿಗೆ ರಾಜೀವ್ ಗಾಂಧಿಯವರಿಗೆ ಸಿಂಗ್ ಕ್ಲೀನ್ ಚಿಟ್ ನೀಡಿರುವುದು ಹೀಗೆ. ಆಂಡರ್ಸನ್ ಬಂಧನಕ್ಕೊಳಗಾದ ನಂತರ ರಾಜೀವ್ ಗಾಂಧಿ ಒಂದೇ ಒಂದು ಶಬ್ದವನ್ನೂ ಮಾತನಾಡಿಲ್ಲ. ಅವರು ಆಂಡರ್ಸನ್‌ಗೆ ಬೆಂಬಲ ಸೂಚಿಸಿರುವುದಾಗಲೀ ಅಥವಾ ಸಮಾಧಾನಗೊಳಿಸುವ ಯತ್ನವನ್ನಾಗಲೀ ಮಾಡಿಲ್ಲ ಎಂದರು.
ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ, ಕಾಂಗ್ರೆಸ್ ಹಿರಿಯ ನಾಯಕ ಈಗ ಬದುಕಿಲ್ಲದ ಆಗಿನ ಗೃಹಸಚಿವ ಮತ್ತು ಮುಖ್ಯ ಕಾರ್ಯದರ್ಶಿಯವರ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದರು.
ಆಂಡರ್ಸನ್ ಮೇಲೆ ರಾಜೀವ್ ಗಾಂಧಿ ಯಾವುದೇ ರೀತಿಯ ಕರುಣೆ ಹೊಂದಿರಲಿಲ್ಲವಾಗಿದ್ದು ನಿಜವೇ ಆಗಿದ್ದಲ್ಲಿ, ಗೃಹ ಸಚಿವಾಲಯವನ್ನು ಯಾಕೆ ಅವರು ಪ್ರಶ್ನಿಸಿರಲಿಲ್ಲ ಅಥವಾ ಈ ಕುರಿತು ಗಮನ ಹರಿಸಿರಲಿಲ್ಲ. ಅರ್ಜುನ್ ಸಿಂಗ್ ಅವರು ಏನನ್ನೋ ಮುಚ್ಚಿಡುತ್ತಿದ್ದಾರೆ ಎಂದು ಆರೋಪಿಸಿದರು.