ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಹಾರ ಕೊಳೆಸಬೇಡಿ, ಬಡವರಿಗೆ ಹಂಚಿ: ಕೇಂದ್ರಕ್ಕೆ ಸುಪ್ರೀಂ
(Distribute free foodgrains to hungry | Supreme Court | hungry people | FCI)
ಗೋದಾಮುಗಳಲ್ಲಿ ಆಹಾರ ಪದಾರ್ಥಗಳನ್ನು ಕೊಳೆಸುವ ಬದಲು ಅದನ್ನು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿರುವ ದೇಶದ ಬಡವರಿಗೆ ಉಚಿತವಾಗಿ ಹಂಚಿ ಎಂದು ಕೇಂದ್ರ ಸರಕಾರಕ್ಕೆ ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ಆಹಾರ ಪದಾರ್ಥಗಳು ಕೊಳೆತು ಹೋಗುತ್ತಿವೆ. ಯಾರಿಗೂ ಉಪಯೋಗವಿಲ್ಲದಂತಾಗುತ್ತಿದೆ. ಅದರ ಬದಲು ಅದನ್ನು ಹಸಿವೆಯಿಂದ ಬಳಲುತ್ತಿರುವ ಬಡವರಿಗೆ ನೀಡಿ ಎಂದು ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಮತ್ತು ದೀಪಕ್ ವರ್ಮಾ ಅವರನ್ನೊಳಗೊಂಡ ಪೀಠವು ಸಲಹೆ ನೀಡಿದೆ.
ಅಲ್ಲದೆ ಆಹಾರ ವಸ್ತುಗಳನ್ನು ಶೇಖರಿಸಿಡಲು ಸಮರ್ಥ ಗೋದಾಮುಗಳನ್ನು ಕಟ್ಟಿಸಬೇಕು. ಪ್ರತಿ ರಾಜ್ಯಗಳಲ್ಲಿ ಬೃಹತ್ ಗೋದಾಮುಗಳನ್ನು ನಿರ್ಮಿಸುವುದು, ಜತೆಗೆ ಜಿಲ್ಲೆಗಳಲ್ಲಿ ಮತ್ತು ಹೋಬಳಿಗಳಲ್ಲೂ ಪ್ರತ್ಯೇಕ ಗೋದಾಮುಗಳನ್ನು ನಿರ್ಮಿಸುವುದಕ್ಕೆ ಕೇಂದ್ರ ಸರಕಾರವು ಮುಂದಾಗಬೇಕು ಎಂದು ಪೀಠವು ಸೂಚನೆ ನೀಡಿದೆ.
ದೇಶದಲ್ಲಿ ಸಾವಿರಾರು ಮಂದಿ ತುತ್ತಿನ ಕೊರತೆಯನ್ನೆದುರಿಸುತ್ತಿರುವ ಹೊರತಾಗಿಯೂ ಭಾರತೀಯ ಆಹಾರ ನಿಗಮದ ಗೋದಾಮುಗಳಲ್ಲಿ ಸಾರ್ವಜನಿಕ ವಿತಣಾ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದಿಂದಾಗಿ ಭಾರೀ ಪ್ರಮಾಣದ ಆಹಾರ ಪದಾರ್ಥಗಳು ಕೊಳೆತು ಹೋಗುತ್ತಿವೆ ಎಂದು ಪಿಯುಸಿಎಲ್ ಸಾರ್ವಜನಿಕ ಹಿತಾಸಕ್ತಿಯ ದಾವೆಯನ್ನು ನ್ಯಾಯಾಲಯದಲ್ಲಿ ಹೂಡಿತ್ತು.
ಇದನ್ನು ವಿಚಾರಣೆಗೆ ಸ್ವೀಕರಿಸಿದ ಸುಪ್ರೀಂ, ಮಾರುಕಟ್ಟೆಗಳಲ್ಲಿ ಆಹಾರ ವಸ್ತುಗಳ ದರ ನ್ಯಾಯಯುತವಾಗಿದೆಯೇ ಎಂಬುದನ್ನು ಪರಿಶೀಲನೆ ನಡೆಸಬೇಕು. ಆಹಾರ ಪದಾರ್ಥಗಳು ಕೊಳೆತು ಹೋಗದಂತೆ ವಿತರಣೆ ಮಾಡಬೇಕು ಎಂದು ಸರಕಾರಕ್ಕೆ ಹೇಳಿದೆ.
ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳಿಗಾಗಿನ (ಎಪಿಎಲ್) ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು (ಪಿಡಿಎಸ್) ರದ್ದು ಮಾಡಬೇಕು ಮತ್ತು ಈ ವ್ಯವಸ್ಥೆಯನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ (ಬಿಪಿಎಲ್) ಮತ್ತು ಅಂತ್ಯೋದಯ ಅನ್ನ ಯೋಜನೆಯ (ಎಎವೈ) ಫಲಾನುಭವಿಗಳಿಗೆ ಮಾತ್ರ ಮೀಸಲಿಡಬೇಕು ಎಂಬ ಸಲಹೆಯನ್ನು ಸರಕಾರ ಪರಿಗಣಿಸಬೇಕೆಂದು ಈ ಹಿಂದಿನ ವಿಚಾರಣೆಯಲ್ಲಿ ಸುಪ್ರೀಂ ಹೇಳಿತ್ತು.
ಇದಕ್ಕೆ ಇಂದು ಉತ್ತರಿಸಿರುವ ಕೇಂದ್ರ, ಬಿಪಿಎಲ್ ಮತ್ತು ಎಎವೈ ಫಲಾನುಭವಿಗಳ ಬೇಡಿಕೆ ಪೂರೈಕೆಯಾದ ನಂತರ ಮಾತ್ರ ಎಪಿಎಲ್ ಕುಟುಂಬಗಳಿಗೆ ಪಿಡಿಎಸ್ ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿದೆ.