ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪರಿಸ್ಥಿತಿ ಅರಿತುಕೊಂಡು ಮದನಿ ಬಂಧನ: ಕೇರಳ ಪೊಲೀಸ್ (Kerala | Karnataka | Abdul Nasser Madani | Bangalore serial blasts)
Bookmark and Share Feedback Print
 
ಬೆಂಗಳೂರು ಭಯೋತ್ಪಾದನಾ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ, ಪಿಡಿಪಿ ನಾಯಕ ಅಬ್ದುಲ್ ನಾಸಿರ್ ಮದನಿಯನ್ನು ಬಂಧಿಸುವ ಸಂಬಂಧ ಯಾವುದೇ ಗೊಂದಲಗಳಿಲ್ಲ ಎಂದು ಹೇಳಿರುವ ಕೇರಳ, ಸಮಯ-ಸಂದರ್ಭ ನೋಡಿಕೊಂಡು ಕರ್ನಾಟಕ ಪೊಲೀಸರು ಶಂಕಿತನನ್ನು ವಶಕ್ಕೆ ತೆಗೆದುಕೊಳ್ಳಲಿದ್ದಾರೆ ಎಂದಿದೆ.

ಆಗಸ್ಟ್ 10ರಂದು ಕೇರಳದ ಕೊಲ್ಲಂಗೆ ತೆರಳಿರುವ ಕರ್ನಾಟಕ ಪೊಲೀಸರ ತಂಡವು ಮದನಿ ಬಂಧನಕ್ಕಾಗಿ ಕಾಯುತ್ತಿದೆ. ಆದರೆ ಕೇರಳ ಪೊಲೀಸರು ಇದುವರೆಗೆ ತಮ್ಮ ಒಪ್ಪಿಗೆ ಸೂಚಿಸಿಲ್ಲ.

ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಕೇರಳ ಭೇಟಿ ಮತ್ತು ಸ್ವಾತಂತ್ರ್ಯೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಪೊಲೀಸರ ಕೊರತೆಯಿರುವುದರಿಂದ ಭದ್ರತಾ ಕಾರಣಗಳನ್ನು ಮುಂದೊಡ್ಡಿ ಕೇರಳ ಮದನಿ ಬಂಧನವನ್ನು ಮುಂದೂಡುತ್ತಿದೆ.

ನಾವು ಕರ್ನಾಟಕ ಪೊಲೀಸರ ಜತೆ ನಿಕಟ ಸಂಪರ್ಕದಲ್ಲಿದ್ದೇವೆ. ಸೂಕ್ತ ಸಮಯದಲ್ಲಿ ಮದನಿಯನ್ನು ಬಂಧಿಸಲಾಗುತ್ತದೆ. ಆತನ ಬಂಧನದ ಕುರಿತು ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಕೇರಳ ಡಿಜಿಪಿ ಜಾಕೋಬ್ ಪುನ್ನೋಸ್ ತಿಳಿಸಿದ್ದಾರೆ.

ಅದೇ ಹೊತ್ತಿಗೆ ಮದನಿ ಬೆಂಬಲಿಗರು ಆತನ ಮನೆಯ ಸುತ್ತ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದು, ಆರೋಪಿಯನ್ನು ಬಂಧಿಸದಂತೆ ರಕ್ಷಣೆ ನೀಡುತ್ತಿದ್ದಾರೆ. ಅಂದಾಜುಗಳ ಪ್ರಕಾರ ಸುಮಾರು ನಾಲ್ಕು ಸಾವಿರ ಮಂದಿ ಮದನಿ ಮನೆಯ ಆಸುಪಾಸಿನಲ್ಲಿ ಜಮಾಯಿಸಿದ್ದಾರೆ.

ಮದನಿ ನಿರೀಕ್ಷಣಾ ಜಾಮೀನನ್ನು ಕರ್ನಾಟಕ ಹೈಕೋರ್ಟ್ ತಳ್ಳಿ ಹಾಕಿರುವ ಕಾರಣ ತಾನು ಬಂಧನಕ್ಕೆ ಸಿದ್ಧನಾಗಿದ್ದೇನೆ ಎಂದು ಮದನಿ ಹೇಳಿಕೊಂಡಿದ್ದಾನೆ. ವರದಿಗಳ ಪ್ರಕಾರ ಆತ ಮತ್ತೊಂದು ನಾಟಕಕ್ಕೆ ಮುಂದಾಗಿದ್ದಾನೆ.

ಮದನಿಯವರಿಗೆ ಕಳೆದ ಕೆಲವು ದಿನಗಳಿಂದ ಜ್ವರ ಬಾಧಿಸುತ್ತಿದೆ. ಅದು ಎಚ್1ಎನ್1 ಸೋಂಕು ಆಗಿರುವ ಸಾಧ್ಯತೆಯಿದೆ. ಇದರ ಕುರಿತು ತಪಾಸಣೆ ನಡೆಯುತ್ತಿದೆ. ಇದನ್ನು ಮುಖ್ಯಮಂತ್ರಿ ವಿ.ಎಸ್. ಅಚ್ಯುತ್ತಾನಂದನ್, ಗೃಹಸಚಿವ ಕೊಡೆಯೇರಿ ಬಾಲಕೃಷ್ಣನ್ ಮತ್ತು ಆರೋಗ್ಯ ಸಚಿವ ಪಿ.ಕೆ. ಶ್ರೀಮತಿಯವರಿಗೂ ಮಾಹಿತಿ ನೀಡಲಾಗಿದೆ ಎಂದು ಪಿಡಿಪಿ ತಿಳಿಸಿದೆ.

ಕೊಯಂಬತ್ತೂರು ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಮದನಿ, 2008ರ ಜುಲೈ 25ರಂದು ಬೆಂಗಳೂರಿನಲ್ಲಿ ನಡೆದಿದ್ದ ಸರಣಿ ಸ್ಫೋಟದಲ್ಲೂ ಆರೋಪಿ ಎಂದು ಪ್ರಕರಣ ದಾಖಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ