ಮನಮೋಹನ್ ಸಿಂಗ್ ದೇಶದ ಆರ್ಥಿಕತೆಯನ್ನು ಪ್ರಗತಿಯತ್ತ ಕೊಂಡೊಯ್ಯುವಲ್ಲಿ, ಬಡತನವನ್ನು ನೀಗಿಸುವಲ್ಲಿ ಅಥವಾ ರಕ್ಷಣೆಯ ವಿಚಾರದಲ್ಲಿ ಯಾವ್ಯಾವ ದಾಖಲೆಗಳನ್ನು ಮಾಡಿದ್ದಾರೆಂಬುದು ಎಲ್ಲರ ಕಣ್ಣ ಮುಂದಿರುವ ಹೊತ್ತಿನಲ್ಲೇ ಗದ್ದುಗೆಯಲ್ಲಿ ಉಳಿದುಕೊಂಡ ಮೂರನೇ ಸುದೀರ್ಘಾವಧಿಯ ಪ್ರಧಾನ ಮಂತ್ರಿ ಎಂಬ ಗರಿಮೆಗೆ ಪಾತ್ರರಾಗಿದ್ದಾರೆ. ಆ ಮೂಲಕ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರನ್ನು ಹಿಂದಿಕ್ಕಿದ್ದಾರೆ.
ಆಗಸ್ಟ್ 11ರಂದು, ಅಂದರೆ ಬುಧವಾರದ ಹೊತ್ತಿಗೆ ಅವರು 2,273 ದಿನಗಳನ್ನು ಪ್ರಧಾನ ಮಂತ್ರಿಯಾಗಿ ಪೂರೈಸುವ ಮೂಲಕ ಜವಾಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿಯವರ ನಂತರದ ಸ್ಥಾನ ಪಡೆದುಕೊಂಡಿದ್ದಾರೆ.
ಸುದೀರ್ಘಾವಧಿಯ ತನಕ ಪ್ರಧಾನಿ ಪಟ್ಟವನ್ನು ಉಳಿಸಿಕೊಂಡವರ ಸಾಲಿನಲ್ಲಿ ನೆಹರೂ ಅವರನ್ನು ಇದುವರೆಗೂ ಯಾರಿಗೂ ಮೀರಿಸಲು ಸಾಧ್ಯವಾಗಿಲ್ಲ. ಅವರು 6,130 ದಿನಗಳ ಕಾಲ ಪ್ರಧಾನಿಯಾಗಿದ್ದರು. ಅದರ ನಂತರದ ಸ್ಥಾನ ನೆಹರೂ ಪುತ್ರಿ ಇಂದಿರಾ ಪ್ರಿಯದರ್ಶಿನಿ ಗಾಂಧಿಯವರದ್ದು. ಅವರು 5,829 ದಿನಗಳ ಕಾಲ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು.
ಮೂರು ಬಾರಿ ಪ್ರಧಾನ ಮಂತ್ರಿಯಾಗಿದ್ದ ವಾಜಪೇಯಿಯವರು ಮೊದಲ ಬಾರಿ 1996ರಲ್ಲಿ 13 ದಿನಗಳಷ್ಟೇ ಪ್ರಧಾನಿ ಪಟ್ಟದಲ್ಲಿದ್ದರು. ನಂತರ 1998-2004ರ ನಡುವೆ ಎರಡು ಮತ್ತು ಮೂರನೇ ಬಾರಿ 2,256 ದಿನಗಳನ್ನು ಪ್ರಧಾನಿಯಾಗಿ ಪೂರೈಸಿದ್ದರು. ಒಟ್ಟಾರೆ ಪ್ರಧಾನಿಯಾಗಿ ಬಿಜೆಪಿ ನಾಯಕ 2,272 ದಿನಗಳನ್ನು ಕಳೆದಿದ್ದರು.
ಆದರೆ ರಾಜಕೀಯದ ಅಜಾತಶತ್ರು ಎಂದೇ ಹೆಸರು ಪಡೆದುಕೊಂಡಿರುವ ರಾಜಕೀಯ ಮುತ್ಸದ್ದಿ ವಾಜಪೇಯಿಯವರನ್ನು ಹಿಂದಿಕ್ಕಿರುವ 77ರ ಸಿಂಗ್ ಈ ಕುರಿತು ಯಾವುದೇ ಸಂಭ್ರಮವನ್ನು ಆಚರಿಸುತ್ತಿಲ್ಲ ಎಂದು ಪ್ರಧಾನಿ ಕಚೇರಿ ಮೂಲಗಳು ತಿಳಿಸಿವೆ.
ಅದೇ ಹೊತ್ತಿಗೆ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ-I (2004-2009) ಸರಕಾರವು 1,826 ದಿನಗಳನ್ನು ಪೂರೈಸುವ ಮೂಲಕ ಸುದೀರ್ಘಾವಧಿ ಅಧಿಕಾರದಲ್ಲಿದ್ದ ಕೇಂದ್ರ ಸರಕಾರದ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನ 1971ರ ಮಾರ್ಚ್ 18ರಿಂದ 1977ರ ಮಾರ್ಚ್ 24ರ ವರೆಗೆ ಸರಕಾರ ನಡೆಸಿದ್ದ (2,198 ದಿನಗಳು) ಇಂದಿರಾ ಗಾಂಧಿಯವರಿಗೆ ಸಲ್ಲುತ್ತದೆ.
ಆದರೆ ಇದಕ್ಕೆ ಕಾರಣವಾದದ್ದು ಕಾಂಗ್ರೆಸ್ಸಿಗೆ ಕಪ್ಪು ಚುಕ್ಕೆಯನ್ನಿತ್ತ ತುರ್ತು ಪರಿಸ್ಥಿತಿ ಎನ್ನುವುದನ್ನು ಮರೆಯಲಾಗದು. ಅಲ್ಲದೆ ಇಂದಿರಾ ದಾಖಲೆಯನ್ನು ಮುರಿಯಬೇಕಾದರೂ ಮತ್ತೊಮ್ಮೆ ತುರ್ತು ಪರಿಸ್ಥಿತಿಯೇ ಕಾರಣವಾಗಬೇಕಾಗುತ್ತದೆ!
ಐದು ವರ್ಷಗಳ ಅವಧಿಯನ್ನು ಪೂರೈಸಿ ಮತ್ತೆ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದ ನೆಹರೂ ನಂತರದ ಏಕೈಕ ಪ್ರಧಾನಿಯೆಂಬ ಹೆಗ್ಗಳಿಕೆಯೂ ಮನಮೋಹನ್ ಸಿಂಗ್ ಅವರದ್ದು.