ಆರರ ಹರೆಯದ ತನ್ನ ಸ್ವಂತ ಮಗಳು, ತಾಯಿಯಿಲ್ಲದ ತಬ್ಬಲಿಯನ್ನು ಜುಜುಬಿ ಹೆಂಡಕ್ಕೋಸ್ಕರ ಆಂಧ್ರಪ್ರದೇಶದ ವ್ಯಕ್ತಿಯೊಬ್ಬ ಮಾರಾಟ ಮಾಡಿರುವ ಆಘಾತಕಾರಿ ಪ್ರಸಂಗ ಬೆಳಕಿಗೆ ಬಂದಿದೆ.
ಕಡಪ ಜಿಲ್ಲೆಯ ರಾಯಚೋಟಿಯಲ್ಲಿನ ಲಕ್ಕಿರೆಡ್ಡಿಪಲ್ಲೆ ಎಂಬಲ್ಲಿನ ದಿನಗೂಲಿ ನೌಕರ 40ರ ಹರೆಯ ಕೃಷ್ಣಯ್ಯ ಎಂಬಾತನೇ ಈ ಪುಣ್ಯಾತ್ಮ. ಇಲ್ಲೇ ಸಮೀಪದ ರಾಮಪುರಂ ಎಂಬಲ್ಲಿನ ಮೊಹಮ್ಮದ್ ಭಾಷಾ ಎಂಬ ಮತ್ತೊಬ್ಬ ಭೂಪ ಕೇವಲ 1,000 ರೂಪಾಯಿಗೆ ಕೃಷ್ಣಯ್ಯನ ಮಗಳು ಭೂತಾಯಿಯನ್ನು ಖರೀದಿಸಿದ್ದಾನೆ.
ಕುಡುಕ ಕೃಷ್ಣಯ್ಯ ಬೆಳಗಾಗೆದ್ದು ಶರಾಬು ಅಂಗಡಿಗೆ ನಮಸ್ಕರಿಸುವ ಗುಂಪಿಗೆ ಸೇರಿದವನು. ಎಂದಿನಂತೆ ಬುಧವಾರವೂ 'ತೀರ್ಥ'ಕ್ಕೆಂದು ಹೋಗಿದ್ದ. ಆದರೆ ಭಾರೀ ಸಾಲ ಉಳಿಸಿಕೊಂಡಿದ್ದ ಕಾರಣ ಶರಾಬು ಅಂಗಡಿಯವ ಮತ್ತೆ ಸಾಲ ನೀಡಲು ನಿರಾಕರಿಸಿದ್ದ.
ಅಷ್ಟಕ್ಕೆ ಧೃತಿಗೆಡದ ಕೃಷ್ಣಯ್ಯನಿಗೆ ಕಣ್ಣಿಗೆ ಬಿದ್ದದ್ದು ತನ್ನ ಪುಟ್ಟ ಮಗಳು. ಸೀದಾ ರಾಮಪುರಂಗೆ ಅವಳನ್ನು ಕರೆದೊಯ್ದ ಆತ ಬಹಿರಂಗವಾಗಿ ಹರಾಜು ಹಾಕಿದ್ದ. ಆತನ ಆರಂಭಿಕ ಬಿಡ್ 300 ರೂಪಾಯಿ. ಕೊನೆಗೂ ಭಾಷಾ ಎಂಬಾತ 1,000 ರೂಪಾಯಿ ತೆತ್ತು ಬಾಲೆಯನ್ನು ಖರೀದಿಸಿದ್ದಾನೆ.
ಸರಿಯಾಗಿ ಬುದ್ಧಿ ಕಲಿಸಿದರು... ಇದೇನೋ ಕುಡುಕನ ಸಹವಾಸ ಎಂದು ಮಿತಿಮೀರಿದ ತಾಳ್ಮೆ ವಹಿಸಿದ್ದ ಸಾರ್ವಜನಿಕರು ಕೊನೆಗೂ ಎಚ್ಚೆತ್ತದ್ದು ಬಾಲಕಿ ಭೂದೇವಿಗೆ ಭಾಷಾ ಥಳಿಸಲಾರಂಭಿಸಿದಾಗ.
ಅಪ್ಪ ಕೃಷ್ಣಯ್ಯ ಮಾರಾಟ ಮಾಡಿದ್ದರೂ ಭಾಷಾ ಜತೆ ಹೋಗಲು ಭೂದೇವಿ ನಿರಾಕರಿಸಿದ್ದಳು. ಹೀಗೆ ಬೀದಿ ರಂಪ ಮಾಡುತ್ತಿದ್ದಾಗ ಭಾಷಾ ಕೋಲು ತೆಗೆದುಕೊಂಡು ಹಿಗ್ಗಾಮುಗ್ಗಾ ಹೊಡೆದಿದ್ದ.
ಇದನ್ನೆಲ್ಲ ನೋಡುತ್ತಿದ್ದ ಸಾರ್ವಜನಿಕರು ಕೃಷ್ಣಯ್ಯ ಮತ್ತು ಭಾಷಾ ಇಬ್ಬರನ್ನೂ ಹಿಡಿದುಕೊಂಡು ಚೆನ್ನಾಗಿ ಬುದ್ಧಿ ಕಲಿಸಿದ್ದಾರೆ. ಆದರೆ ಪೊಲೀಸರು ಆಗಮಿಸುವ ಹೊತ್ತಿಗೆ ಇಬ್ಬರೂ ಪರಾರಿಯಾಗಿದ್ದರು. ನಂತರ ಕೃಷ್ಣಯ್ಯನನ್ನು ಬಂಧಿಸಲಾಗಿದೆ.
ಕಲ್ಲುಕುಟಿಗ ಕೆಲಸ ಮಾಡುತ್ತಿರುವ ಕೃಷ್ಣಯ್ಯನ ಪತ್ನಿ ಸರೋಜಮ್ಮ ನಿಧನರಾದ ನಂತರ ಭೂದೇವಿಯನ್ನು ಕೃಷ್ಣಯ್ಯನ ಹೆತ್ತವರು ಬೇರೆಯಾಗಿಯೇ ಬೆಳೆಸುತ್ತಿದ್ದರು. ಮಗಳಿಗೆ ಅಪ್ಪ ಕಿರುಕುಳ ನೀಡುತ್ತಿದ್ದುದರಿಂದ ಅಜ್ಜ-ಅಜ್ಜಿ ಈ ಕ್ರಮಕ್ಕೆ ಮುಂದಾಗಿದ್ದರು. ಆದರೆ ಆಗಸ್ಟ್ ಐದರಂದು ಆಕೆಯನ್ನು ವಾಪಸ್ ಮನೆಗೆ ಕರೆ ತರಲಾಗಿತ್ತು. ಅಷ್ಟರಲ್ಲೇ ಇಷ್ಟೆಲ್ಲ ಕಿತಾಪತಿಗಳು ನಡೆದು ಹೋಗಿವೆ.
ದುಷ್ಟರ ಕೂಟದಿಂದ ಬಾಲಕಿಯನ್ನು ರಕ್ಷಿಸಲಾಗಿದ್ದು, ಇದೀಗ ಸ್ಥಳೀಯ ಮನೆಯೊಂದರಲ್ಲಿ ಉಪಚರಿಸಲಾಗುತ್ತಿದೆ.