ಹೌದು, ವಿವಿಧ ಕ್ಷೇತ್ರಗಳಲ್ಲಿ ಸೂಪರ್ ಪವರ್ ಆಗಿ ಹೊರಹೊಮ್ಮುತ್ತಿರುವ ಭಾರತದ ಮೇಲೆ ಷಡ್ಯಂತ್ರ ನಡೆಸಲಾಗಿದೆ. ಯಾವುದೇ ಆಂಟಿಬಯಾಟಿಕ್‌ಗಳಿಗೂ ಜಗ್ಗದ ಮಾರಣಾಂತಿಕ 'ಸೂಪರ್‌ಬಗ್' ಬ್ಯಾಕ್ಟೀರಿಯಾ ವಿಶ್ವಕ್ಕೆ ರವಾನೆಯಾಗುತ್ತಿರುವುದು ಭಾರತದಿಂದ ಎಂದು ಆರೋಪಿಸಲಾಗುತ್ತಿದೆ.
ಆದರೆ ಆರೋಪಗಳನ್ನು ಭಾರತ ಸ್ಪಷ್ಟವಾಗಿ ತಳ್ಳಿ ಹಾಕಿದೆ. ಅಲ್ಲದೆ ಸೂಪರ್‌ಬಗ್ ಬ್ಯಾಕ್ಟೀರಿಯಾಕ್ಕೆ ನ್ಯೂಡೆಲ್ಲಿ ಮೆಟಲ್ಲೊ-1 (NDM1= Delhi Metallo-1) ಎಂದು ಹೆಸರಿಟ್ಟಿರುವುದನ್ನೂ ನವದೆಹಲಿ ತೀವ್ರವಾಗಿ ಖಂಡಿಸಿದೆ.
ಪ್ರಸಕ್ತ ಹೊಂದಿರುವ ಎಲ್ಲಾ ಔಷಧಿಗಳನ್ನೂ ಮೀರಿ ನಿಲ್ಲುವ ಶಕ್ತಿ ಎನ್‌ಡಿಎಂ1 ಬ್ಯಾಕ್ಟೀರಿಯಾಕ್ಕಿದೆ. ಆ ರೀತಿಯ ವಂಶವಾಹಿಯನ್ನು ಬೆಳೆಸಿಕೊಂಡಿರುವ ಬ್ಯಾಕ್ಟೀರಿಯಾವು ನವದೆಹಲಿಯಿಂದ ಇಂಗ್ಲೆಂಡ್, ಅಮೆರಿಕಾ ಮುಂತಾದ ದೇಶಗಳಿಗೆ ರವಾನೆಯಾಗಿದೆ ಎಂದು ಆರೋಪಿಸಲಾಗುತ್ತಿದೆ.
ಭಾರತದ ವಿರುದ್ಧ ಪಿತೂರಿ... ಬ್ರಿಟೀಷ್ ವಿಜ್ಞಾನಿಗಳು ಮಾಡಿರುವ ಆರೋಪದ ಹಿಂದೆ ಬಹುರಾಷ್ಟ್ರೀಯ ಔಷಧಿ ಕಂಪನಿಗಳು ಮತ್ತು ಆಸ್ಪತ್ರೆಯ ಕಂಪನಿಗಳ ಕೈವಾಡವಿರುವ ಸಾಧ್ಯತೆಗಳಿವೆ. ಅದೇ ಕಾರಣದಿಂದ ಅವರು ಭಾರತದ ಆಸ್ಪತ್ರೆಗಳಿಂದ ವಿಶ್ವದಾದ್ಯಂತ ಸೂಪರ್‌ಬಗ್ ರವಾನೆಯಾಗಿದೆ ಎಂದು ಆರೋಪಿಸುತ್ತಿದ್ದಾರೆ ಎಂದು ಭಾರತ ಅಭಿಪ್ರಾಯಪಟ್ಟಿದೆ.
ಭಾರತವು ವೈದ್ಯಕೀಯ ಪ್ರವಾಸಿ ಕೇಂದ್ರವಾಗುತ್ತಿರುವುದನ್ನು ಸಹಿಸಲಾಗದ ಮಂದಿ ಇಂತಹ ಪಿತೂರಿ ನಡೆಸುತ್ತಿದ್ದಾರೆ. ಇದು ದುರದೃಷ್ಟಕರವಾಗಿದ್ದು, ಬಹುರಾಷ್ಟ್ರೀಯ ಕಂಪನಿಗಳ ಪಾಪದ ಕೂಪ ಇದಾಗಿರುವ ಸಾಧ್ಯತೆಗಳಿವೆ ಎಂದು ರಾಜ್ಯಸಭೆಯ ಪ್ರತಿಪಕ್ಷದ ಉಪ ನಾಯಕ (ಬಿಜೆಪಿ) ಎಸ್.ಎಸ್. ಅಹ್ಲುವಾಲಿಯಾ ಶೂನ್ಯವೇಳೆಯಲ್ಲಿ ಭಾರತವನ್ನು ಸಮರ್ಥಿಸಿಕೊಂಡರು.
ಭಾರತದಿಂದ ಚಿಕಿತ್ಸೆ ಪಡೆದು ತಮ್ಮ ದೇಶಕ್ಕೆ ವಾಪಸ್ಸಾದ ಕೆಲವು ವಿದೇಶೀಯರು, ತಾವು ಈ ಸೋಂಕನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಮತ್ತು ಇದು ಭಾರತದ ಆಸ್ಪತ್ರೆಗಳಿಂದ ತಮಗೆ ಬಂದಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದು ನಿಜವಾಗಿರಲಾರದು. ಆದರೂ ಈ ಕುರಿತು ಸರಕಾರ ಪ್ರತಿಕ್ರಿಯೆ ನೀಡಬೇಕೆಂದು ಅವರು ಆಗ್ರಹಿಸಿದರು. ಇದಕ್ಕೆ ಕಾಂಗ್ರೆಸ್‌ನ ಜಯಂತಿ ನಟರಾಜನ್ ಕೂಡ ಬೆಂಬಲ ವ್ಯಕ್ತಪಡಿಸಿದರು.
ಇತ್ತೀಚಿನ ವರ್ಷಗಳಲ್ಲಿ ಭಾರತವು ವೈದ್ಯಕೀಯ ಪ್ರವಾಸಿ ಉದ್ಯಮದಲ್ಲಿ ಮಹತ್ತರ ಪ್ರಗತಿ ಸಾಧಿಸುತ್ತಿದೆ. ಜಾಗತಿಕ ವಲಯದಲ್ಲಿ ಅತಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗಳು ಭಾರತದಲ್ಲಿ ಲಭಿಸುತ್ತಿರುವುದರಿಂದ ವಿದೇಶೀಯರು ಭಾರತದತ್ತ ಬರುತ್ತಿದ್ದಾರೆ. ಭಾರತವು ಈ ಕ್ಷೇತ್ರದಲ್ಲಿ ಹೊಂದಿರುವ ಆದಾಯ ಪ್ರಸಕ್ತ 1,200 ಕೋಟಿ ರೂಪಾಯಿ ಎಂದು ಅಂದಾಜಿಸಲಾಗುತ್ತಿದೆ.
ಆರೋಪಗಳು ಹೀಗಿವೆ... ಈ ಸೋಂಕು ಮೊದಲು ಪತ್ತೆಯಾದದ್ದು ಸ್ವೀಡನ್ ಪ್ರಜೆಯೊಬ್ಬನಲ್ಲಿ. ಆತ ಭಾರತದಲ್ಲಿ ಚಿಕಿತ್ಸೆಗಾಗಿ ಬಂದಿದ್ದಾಗ ಸೋಂಕನ್ನು ತಗುಲಿಸಿಕೊಂಡಿದ್ದ. ಆದರೆ ನವದೆಹಲಿಯ ಆಸ್ಪತ್ರೆಗಳಲ್ಲಿ ಇದಕ್ಕೆ ಪೂರಕ ಚಿಕಿತ್ಸೆಗಳು ದೊರಕಿರಲಿಲ್ಲ. ನಂತರ ಆತನನ್ನು ಸ್ವೀಡನ್‌ಗೆ ಸ್ಥಳಾಂತರಿಸಲಾಗಿತ್ತು.
ವರದಿಗಳ ಪ್ರಕಾರ NDM1 ಬ್ಯಾಕ್ಟೀರಿಯಾ ಭಾರತ, ಪಾಕಿಸ್ತಾನ ಸೇರಿದಂತೆ ಇತರ ಏಷಿಯಾದ ರಾಷ್ಟ್ರಗಳಿಗೆ ಹಬ್ಬಿದೆ. ಅಲ್ಲಿಂದ ಯೂರೋಪ್ ದೇಶಗಳತ್ತ ರವಾನೆಯಾಗುತ್ತಿದೆ. ಬಹುತೇಕ ಕಾಸ್ಮೆಟಿಕ್ ಸರ್ಜರಿ ಸಂದರ್ಭಗಳಲ್ಲಿ ಸೋಂಕು ವರ್ಗಾವಣೆಯಾಗುತ್ತಿದೆ ಎಂದು ಹೇಳಲಾಗಿದೆ.
ಇದೇ ತಿಂಗಳು ಬ್ರಿಟನ್ ಪ್ರಕಟಿಸಿರುವ ವರದಿಯೊಂದರ ಪ್ರಕಾರ ಬ್ರಿಟನ್‌ನಲ್ಲಿ 37 ಪ್ರಕರಣಗಳು ಪತ್ತೆಯಾಗಿವೆ. ಚೆನ್ನೈಯಲ್ಲಿ 44, ಹರ್ಯಾಣದಲ್ಲಿ 26 ಹಾಗೂ ದಕ್ಷಿಣ ಏಷಿಯಾದ ಇತರ ರಾಷ್ಟ್ರಗಳಲ್ಲಿ 73 ಪ್ರಕರಣಗಳು ಕಂಡು ಬಂದಿವೆ.
ಸೋಂಕನ್ನು ಈಗಲೇ ತಡೆಗಟ್ಟಲು ವಿಜ್ಞಾನಿಗಳು ಶತಯತ್ನ ನಡೆಸುತ್ತಿದ್ದಾರೆ. ಪ್ರಸಕ್ತ ಇದು ಆರಂಭಿಕ ಹಂತದಲ್ಲಷ್ಟೇ ಇದೆ. ಹೀಗೆ ಬಿಟ್ಟರೆ ಮುಂದೊಂದು ದಿನ ಏಡ್ಸ್, ಹಂದಿಜ್ವರದಂತೆ ಮಾರಣಾಂತಿಕವಾಗಬಹುದು. ಅದಕ್ಕಾಗಿ ವೈದ್ಯರು ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ.
ರೋಗದ ಲಕ್ಷಣಗಳು... * ಕ್ಲೆಬ್ಸೆಲ್ಲಾ ಬ್ಯಾಕ್ಟೀರಿಯಾದಲ್ಲಿ ಸೂಪರ್‌ಬಗ್ ಎನ್‌ಡಿಎಂ-1 ಒಳಗೊಂಡಿರುತ್ತದೆ. * ಇದ್ದಕ್ಕಿದ್ದಂತೆ ಅಸ್ವಸ್ಥತೆಗೊಳಗಾಗುವುದು, ಭಾರೀ ಜ್ವರ, ಕಫದಲ್ಲಿ ರಕ್ತ, ಮೂತ್ರಕೋಶ ಸೋಂಕು, ಜಠರ ಸೋಂಕು ಮುಂತಾದ ಸಾಮಾನ್ಯ ಲಕ್ಷಣಗಳನ್ನು ಕ್ಲೆಬ್ಸೆಲ್ಲಾ ನ್ಯೂಮೋನಿಯಾ ಹೊಂದಿದೆ. * ಇ.ಕೋಲಿ ಬ್ಯಾಕ್ಟೀರಿಯಾದಲ್ಲಿ ಎನ್‌ಡಿಎಂ-1 ಕಂಡು ಬಂದಿದೆ. ಇ.ಕೋಲಿ ಸೋಂಕಿನಿಂದ ಮೂತ್ರಕೋಶದ ಸೋಂಕು, ನ್ಯೂಮೋನಿಯಾ ಮತ್ತು ಇತರ ಸೋಂಕುಗಳು ಬರುತ್ತವೆ. ಅಲ್ಲದೆ ಯಾವುದೇ ಔಷಧಿಗೂ ಇದು ಬಗ್ಗುವುದಿಲ್ಲ.