ಲಷ್ಕರ್ ಇ ತೋಯ್ಬಾ ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿದ ಸುಪ್ರೀಂ ಕೋರ್ಟ್ ಆದೇಶವನ್ನೇ ಪ್ರಶ್ನಿಸಿರುವ ಖ್ಯಾತ ನ್ಯಾಯವಾದಿ ರಾಮ್ ಜೇಠ್ಮಲಾನಿ, ಆದೇಶ ನೀಡಿದ್ದ ಪೀಠದ ನ್ಯಾಯಮೂರ್ತಿಯೊಬ್ಬರು ಸ್ವತಃ ಕ್ರಿಮಿನಲ್ ಪ್ರಕರಣದಲ್ಲಿ ಸಿಬಿಐಯಿಂದ ವಿಚಾರಣೆಗೊಳಗಾಗಿದ್ದರು ಎಂದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದಾರೆ.
ಗುಜರಾತ್ ಮಾಜಿ ಗೃಹಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಮುಗಿಸಲು ಹೆಣೆಯಲಾದ ವ್ಯವಸ್ಥಿತ ಪಿತೂರಿ ಸಿಬಿಐ ತನಿಖೆ ಎಂದು ಆರೋಪಿಸುವ ಮೂಲಕ ಪ್ರಕರಣಕ್ಕೆ ಜೇಠ್ಮಲಾನಿ ಹೊಸ ತಿರುವು ನೀಡಿದ್ದಾರೆ.
ಸೊಹ್ರಾಬುದ್ದೀನ್ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದ್ದ ಸುಪ್ರೀಂ ಕೋರ್ಟ್‌ನ ಪೀಠದ ನೇತೃತ್ವ ವಹಿಸಿದ್ದ, ಪ್ರಸಕ್ತ ನಿವೃತ್ತಿಯಾಗಿರುವ ನ್ಯಾಯಮೂರ್ತಿ ತರುಣ್ ಚಟರ್ಜಿಯವರು ಕ್ರಿಮಿನಲ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಿಬಿಐಯಿಂದ ಸ್ವತಃ ತನಿಖೆಗೊಳಗಾಗಿದ್ದರು. ಸಿಬಿಐಯಿಂದ ನ್ಯಾಯಾಧೀಶರೊಬ್ಬರು ತನಿಖೆಗೊಳಗಾಗುತ್ತಿರುವಾಗಲೇ, ಇಂತಹ ಆದೇಶ ನೀಡಿರುವುದು ಸೂಕ್ತವೆನಿಸಿಲ್ಲ ಎಂದು ಅಮಿತ್ ಶಾ ಪ್ರಕರಣದಲ್ಲಿ ವಕೀಲರಾಗಿರುವ ಜೇಠ್ಮಲಾನಿ ಸುಪ್ರೀಂ ಕೋರ್ಟಿನಲ್ಲಿ ಅಭಿಪ್ರಾಯಪಟ್ಟರು.
ಆದರೆ ಜೇಠ್ಮಲಾನಿ ವಾದವನ್ನು ಸುಪ್ರೀಂ ಕೋರ್ಟ್ ಪೀಠ ಮತ್ತು ಸಾಲಿಸಿಟರ್ ಜನರಲ್ ಗೋಪಾಲ ಸುಬ್ರಹ್ಮಣ್ಯಂ ಆಕ್ಷೇಪಿಸಿದರು. ಒಬ್ಬ ಮಾಜಿ ನ್ಯಾಯಾಧೀಶರ ವಿರುದ್ಧ ಇಂತಹ ಆರೋಪಗಳನ್ನು ಮಾಡಲಾಗದು ಮತ್ತು ತಾನು ಅವರನ್ನು ರಕ್ಷಿಸಬೇಕಾಗುತ್ತದೆ ಎಂದು ಸುಬ್ರಹ್ಮಣ್ಯಂ ಪ್ರತಿಕ್ರಿಯಿಸಿದರು.
ಹಾಗೊಂದು ವೇಳೆ ಅಂತಹ ಆರೋಪಗಳಿದ್ದರೆ, ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಾಗಲೇ ಗುಜರಾತ್ ಸರಕಾರವು ಬೆಟ್ಟು ಮಾಡಿ ತೋರಿಸಬೇಕಿತ್ತು. ಆಗ ಸುಮ್ಮನಿದ್ದು, ಈಗ ನೀವು ಆರೋಪ ಮಾಡುವುದು ಸರಿಯಲ್ಲ ಎಂದು ಪೀಠವು ಸೂಚನೆ ನೀಡಿತು.
ಅಷ್ಟಕ್ಕೇ ಬಿಡದ ಜೇಠ್ಮಲಾನಿ, ನ್ಯಾಯಾಧೀಶ ಚಟರ್ಜಿಯವರು ಸಿಬಿಐ ಪರಿಧಿಯ ತನಿಖೆಯಲ್ಲಿದ್ದಾರೆ ಎಂಬ ವಾಸ್ತವಾಂಶ ಆಗ ಗುಜರಾತ್ ಸರಕಾರದ ಅರಿವಿಗೆ ಬಂದಿರಲಿಲ್ಲ ಎಂದು ಪ್ರತಿವಾದ ಮಂಡಿಸಿದರು.
ಈ ಸಂದರ್ಭದಲ್ಲಿ ನ್ಯಾಯಾಧೀಶರು ಮತ್ತು ನ್ಯಾಯವಾದಿ ಜೇಠ್ಮಲಾನಿ ನಡುವೆ ವಾಗ್ವಾದ ನಡೆಯಿತು. ನ್ಯಾಯಮೂರ್ತಿ ಅಫ್ತಾಬ್ ಆಲಂ ಮತ್ತು ಆರ್.ಎಂ. ಲೋಧಾ ಅವರನ್ನೊಳಗೊಂಡ ಪೀಠವು ವಕೀಲರನ್ನು ಸಮಾಧಾನಗೊಳಿಸಲು ಯತ್ನಿಸಿತು. ಆದರೆ ಈ ರೀತಿಯಾಗಿ ನಿವೃತ್ತ ನ್ಯಾಯಮೂರ್ತಿಯೊಬ್ಬರ ಹೆಸರನ್ನು ಎಳೆದು ತಂದಿರುವುದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.
ಪೀಠದ ಸದಸ್ಯರ ಕುರಿತು ನೀವು ಮಾತನಾಡಕೂಡದು. ಇದು ಸರಿಯಲ್ಲ. ನಿಮ್ಮ ಹೇಳಿಕೆ ನಮಗೆ ನೋವು ತಂದಿದೆ. ಇದು ನಿಮಗೂ ಶೋಭೆಯಲ್ಲ. ನೀವು ಹೊಂದಿರುವ ಶ್ರೇಷ್ಠ ಗೌರವಕ್ಕೆ ಇದರಿಂದ ಚ್ಯುತಿ ಬರಬಹುದು ಎಂದು ಪೀಠವು ಹೇಳಿದ್ದಕ್ಕೆ ಮತ್ತೆ ಪ್ರತಿದಾಳಿ ನಡೆಸಿದ ಜೇಠ್ಮಲಾನಿ, 'ನಾನು ಪ್ರಸಿದ್ಧಿ ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಹಾಗೆ ಕಳೆದುಕೊಳ್ಳುವುದಾದರೆ, ಐ ಡೋಂಟ್ ಕೇರ್' ಎಂದರು.
ಜೇಠ್ಮಲಾನಿಯವರ ವಾದಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಪೀಠವು, ನೀವು ಹೀಗೆ ಮುಂದುವರಿಸಿದಲ್ಲಿ ನಾವು ವಿಚಾರಣೆಯನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ನೀವು ಹೇಳುತ್ತಿರುವುದನ್ನು ಮೌನ ಪ್ರೇಕ್ಷಕರಾಗಿ ನೋಡಲು ಸಾಧ್ಯವಿಲ್ಲ. ಇಂತಹ ವಾತಾವರಣದಲ್ಲಿ ವಿಚಾರಣೆ ನಡೆಯುವುದು ಅಸಾಧ್ಯ. ಇದು ಸ್ವೀಕಾರಾರ್ಹವಲ್ಲ ಎಂದು ಪೀಠ ಹೇಳಿತು.