ನಕ್ಸಲರು ಕೇವಲ ಕ್ರಾಂತಿಕಾರಿಗಳಾಗಿ ಉಳಿದಿಲ್ಲ, ತಾವು ಕೆಂಪು ಉಗ್ರರೆಂದು ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಿದ್ದ ಅವರೀಗ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಮತ್ತು ಭೂಗತದೊರೆ ಛೋಟಾ ಶಕೀಲ್ ಜತೆ ಸಂಬಂಧ ಹೊಂದಿರುವ ಬಗ್ಗೆ ಪೊಲೀಸರಿಗೆ ಮಹತ್ವದ ಸುಳಿವುಗಳು ಲಭಿಸಿವೆ.
ಛೋಟಾ ಶಕೀಲ್ ನೆರವಿನೊಂದಿಗೆ ನಕ್ಸಲರನ್ನು ಸಂಪರ್ಕಿಸಲು ಐಎಸ್ಐ ಯತ್ನಿಸುತ್ತಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಕಾರ್ಯಾಚರಣೆ ನಡೆಸುತ್ತಿದ್ದ ಆರು ಮಂದಿಯನ್ನು ಕರ್ನಾಟಕ ಮತ್ತು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಕೇಂದ್ರೀಯ ತನಿಖಾ ದಳಗಳ ನೆರವಿನಿಂದ ಆಂಧ್ರಪ್ರದೇಶದಿಂದ ನಾಲ್ವರು ಮತ್ತು ಬೆಂಗಳೂರಿನಿಂದ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆಂಧ್ರಪ್ರದೇಶದಲ್ಲಿನ ನಕ್ಸಲರಿಗೆ ಪೂರೈಸಲೆಂದು ತಂದಿದ್ದ 25 ಲಕ್ಷ ರೂಪಾಯಿ ನಗದು ಹಣವನ್ನೂ ಅವರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ ಪಾಕಿಸ್ತಾನದ ಕುಖ್ಯಾತ ಬೇಹುಗಾರಿಕಾ ಸಂಸ್ಥೆ ಐಎಸ್ಐ, ಅದೇ ದೇಶದಲ್ಲಿರುವ ಮತ್ತು ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಛೋಟಾ ಶಕೀಲ್ ಮೂಲಕ ನಕ್ಸಲರ ಜತೆ ಸಂಪರ್ಕ ಸಾಧಿಸಲು ಯತ್ನಿಸುತ್ತಿದೆ. ಆ ಮೂಲಕ ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವುದು ಐಎಸ್ಐ ಯೋಜನೆ.
ಅದರಂತೆ ಛೋಟಾ ಶಕೀಲ್, ಕರ್ನಾಟಕ ನಿವಾಸಿಯಾಗಿರುವ ಆಲ್ತಾಫ್ ಯಾನೆ ರಾಕೇಶ್ ಎಂಬಾತನಿಗೆ ಆಂಧ್ರ ಮತ್ತು ಕರ್ನಾಟಕದಲ್ಲಿನ ನಕ್ಸಲರ ಜತೆ ಸಂಪರ್ಕ ಸಾಧಿಸುವ ಜವಾಬ್ದಾರಿಯನ್ನು ವಹಿಸಿದ್ದ.
ಆಲ್ತಾಫ್ ಆಲಿಯಾಸ್ ರಾಕೇಶ್ ಎಂಬಾತ ವಿನಯ್ ಎಂಬ ಮತ್ತೊಬ್ಬ ವ್ಯಕ್ತಿಯ ಜತೆ ಸಂಪರ್ಕಕ್ಕೆ ಬಂದಿದ್ದ. ಆಲ್ತಾಫ್‌ನನ್ನು ಆಂಧ್ರಪ್ರದೇಶದ ಕುಖ್ಯಾತ ನಕ್ಸಲ್ ನಾಯಕನಿಗೆ ತಾನು ಪರಿಚಯ ಮಾಡಿಸುವುದಾಗಿ ವಿನಯ್ ಭರವಸೆ ನೀಡಿದ್ದ.
ಈ ಹೊತ್ತಿಗೆ ಜಾಗೃತರಾದ ಪೊಲೀಸರು ವಿನಯ್ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟು, ತನಿಖೆಯನ್ನು ತೀವ್ರಗೊಳಿಸಿದ್ದರು. ಆ ಹೊತ್ತಿಗೆ ಅತ್ತ ಆಲ್ತಾಫ್ ದುಬೈ ಮೂಲಕ 25 ಲಕ್ಷ ರೂಪಾಯಿ ಹವಾಲಾ ಹಣವನ್ನು ಸ್ವೀಕರಿಸಿದ್ದ.
ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ ಪೊಲೀಸರು ವಿನಯ್ ಮತ್ತು ಆತನ ಸಹಚರರನ್ನು ಕರ್ನಾಟಕದಲ್ಲಿ ಬಂಧಿಸಿದರೆ, ಶ್ರೀಧರ್ ಮತ್ತು ಇತರ ಮೂವರು ವ್ಯಕ್ತಿಗಳನ್ನು ಆಂಧ್ರದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಎಲ್ಲಾ ಆರು ಮಂದಿಯನ್ನು ತೀವ್ರವಾಗಿ ವಿಚಾರಣೆ ನಡೆಸಲಾಗುತ್ತಿದೆ.
ಪ್ರಾಥಮಿಕ ತನಿಖೆಯಲ್ಲಿ ಐಎಸ್ಐ ಮತ್ತು ನಕ್ಸಲರು ಸಂಘಟಿತವಾಗಿ ಕುಕೃತ್ಯಗಳನ್ನು ನಡೆಸಲು ಯೋಜನೆ ರೂಪಿಸಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.