ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಬಿಜೆಪಿ ನಾಯಕರಾದ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್ ಮತ್ತು ಎಂ. ವೆಂಕಯ್ಯ ನಾಯ್ಡುರವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಸಿಬಿಐಯನ್ನು ದುರ್ಬಳಕೆ ಮಾಡುತ್ತಿರುವುದರ ವಿರುದ್ಧ ರಾಜ್ಯದ ವಿವಿಧೆಡೆಗಳಲ್ಲಿ ಸಾರ್ವಜನಿಕ ಸಮಾವೇಶಗಳನ್ನು ನಡೆಸಲಿದ್ದಾರೆ.
ಅಹಮದಾಬಾದ್‌ನ ಸಭಾಂಗಣವೊಂದರಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಅಭಿಲಾಷಿಗಳನ್ನು ಉದ್ದೇಶಿಸಿ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ ಇಂದು ಭಾಷಣ ಮಾಡಲಿದ್ದರೆ, ಪಕ್ಷದ ಇಬ್ಬರು ಮಾಜಿ ಅಧ್ಯಕ್ಷರುಗಳಾದ ನಾಯ್ಡು ಮತ್ತು ಸಿಂಗ್ ಕ್ರಮವಾಗಿ ಸೂರತ್ ಮತ್ತು ಬರೋಡಾಗಳಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸುವರು.
ಸಂಸತ್ತಿನ ಮುಂಗಾರಿನ ಅಧಿವೇಶನ ಮುಕ್ತಾಯವಾಗುತ್ತಿದ್ದಂತೆ ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅಹಮದಾಬಾದ್‌ನಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ.
ಅತ್ತ ಉತ್ತರ ಪ್ರದೇಶದಲ್ಲೂ ಇಂತಹುದೇ ಸಭೆಗಳು ನಡೆಯಲಿವೆ. ಸಿಬಿಐಯನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಲಕ್ನೋದಲ್ಲಿ ಇಂದು ಪ್ರತಿಭಟನೆ ಆಯೋಜಿಸಲಾಗಿದೆ.
ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ನಕಲಿ ಎಂಬ ಆರೋಪಕ್ಕೊಳಗಾಗಿರುವ ಮೋದಿ ಆಪ್ತ, ಗುಜರಾತ್ ಮಾಜಿ ಗೃಹಸಚಿವ ಆಮಿತ್ ಶಾ ಅವರನ್ನು ಇತ್ತೀಚೆಗಷ್ಟೇ ಸಿಬಿಐ ಬಂಧಿಸಿತ್ತು.
ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ಸಿಬಿಐಗೆ ನೇರವಾಗಿ ಆದೇಶ ನೀಡಿದ ನಂತರ ಇದೀಗ ತನಿಖೆ ಉನ್ನತ ಮಟ್ಟದಲ್ಲಿ ನಡೆಯುತ್ತಿರುವುದರಿಂದ ಇದರ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಬಿಜೆಪಿ ಆರೋಪಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಮೋದಿಯವರನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ರಕ್ಷಣಾ ತಂತ್ರಗಳನ್ನು ಅನುಸರಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದರ ಅಂಗವಾಗಿ ಆಸಗ್ಟ್ 9ರಿಂದ 14ರವರೆಗೆ ದೇಶದಾದ್ಯಂತ ಸಾರ್ವಜನಿಕ ಸಮಾರಂಭ ಮತ್ತು ರ‌್ಯಾಲಿಗಳನ್ನು ನಡೆಸುವುದಾಗಿ ಬಿಜೆಪಿ ಈ ಹಿಂದೆ ಘೋಷಿಸಿತ್ತು. ಆಗಸ್ಟ್ 9ರಂದು ಬಿಜೆಪಿ ಕಾರ್ಯದರ್ಶಿ ಕಿರೀಟ್ ಸೋಮಯ್ಯ ಅವರು ಬಿಜೆಪಿ ಬೆಂಬಲಿಗರೊಂದಿಗೆ ಮುಂಬೈಯಲ್ಲಿನ ಸಿಬಿಐ ಕಚೇರಿಗೆ ರ‌್ಯಾಲಿ ಕೈಗೊಂಡಿದ್ದರು.