ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕ್ ನೆರೆಗೆ ಮಿಡಿದಿದೆ ಭಾರತ; 24 ಕೋಟಿ ಸಹಾಯ (Pakistan | SM Krishna | SM Qureshi | India)
Bookmark and Share Feedback Print
 
ಪಾಕಿಸ್ತಾನದಲ್ಲಿ ತಲೆದೋರಿರುವ ಭಾರೀ ಪ್ರವಾಹದಿಂದಾಗಿ ಸಾವಿರಾರು ಮಂದಿ ಸಾವನ್ನಪ್ಪಿರುವುದಕ್ಕೆ ಕಳೆದ ವಾರವಷ್ಟೇ ಸಂತಾಪ ವ್ಯಕ್ತಪಡಿಸಿದ್ದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಇದೀಗ ಶಾಹ್ ಮೆಹಮೂದ್ ಖುರೇಷಿಯವರನ್ನು ಸಂಪರ್ಕಿಸಿ 5 ಮಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕ ಸಹಾಯ ಮಾಡಲು ಸಿದ್ಧ ಎಂದು ಹೇಳಿದ್ದಾರೆ.

1,700 ಮಂದಿಯನ್ನು ಬಲಿ ಪಡೆದುಕೊಂಡ ಮತ್ತು 1.4 ಕೋಟಿ ಮಂದಿಯನ್ನು ಸಂತ್ರಸ್ತರನ್ನಾಗಿಸಿದ ಕಳೆದ ಎಂಟು ದಶಕಗಳಲ್ಲೇ ಅತಿ ಭೀಕರ ಎನಿಸಿಕೊಂಡಿರುವ ಪ್ರವಾಹವನ್ನು ಎದುರಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಜತೆ ನಾವಿದ್ದೇವೆ ಎಂದು ಪಾಕ್ ವಿದೇಶಾಂಗ ಸಚಿವರಿಗೆ ದೂರವಾಣಿ ಕರೆ ಮಾಡಿರುವ ಕೃಷ್ಣ ತಿಳಿಸಿದ್ದಾರೆ.

ಪಾಕಿಸ್ತಾನದ ಮೇಲೆ ದುರ್ಬರ ಪರಿಣಾಮ ಬೀರಿ ಭಾರೀ ಪ್ರಮಾಣದ ಪ್ರಾಣ ಹಾನಿ ಮತ್ತು ಆಸ್ತಿ ಹಾನಿಗೆ ಕಾರಣವಾಗಿರುವ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳಿಗಾಗಿ 5 ಮಿಲಿಯನ್ ಡಾಲರ್ (ಸುಮಾರು 23.4 ಕೋಟಿ) ಸಹಾಯವನ್ನು ನೀಡುವ ಪ್ರಸ್ತಾಪವನ್ನು ಭಾರತ ಸರಕಾರ ಮುಂದಿಟ್ಟಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪಾಕ್ ನಿರ್ಧಾರ ತೆಗೆದುಕೊಂಡಿಲ್ಲ...
ಭಾರತದ ಸಹಾಯಹಸ್ತದ ಪ್ರಸ್ತಾಪವನ್ನು ಪಾಕಿಸ್ತಾನ ಇನ್ನೂ ಸ್ವೀಕರಿಸಿಲ್ಲ ಎಂದು ಮೂಲಗಳು ಹೇಳಿವೆ. ಕೃಷ್ಣ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿರುವ ಬಗ್ಗೆ ಮಾತ್ರ ಪಾಕ್ ವಿದೇಶಾಂಗ ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಆದರೆ ಸಹಾಯ ಹಸ್ತ ಚಾಚಿರುವ ಬಗ್ಗೆ ಯಾವುದೇ ಮಾಹಿತಿಗಳನ್ನು ನೀಡಲಾಗಿಲ್ಲ.

ವಿದೇಶಾಂಗ ಸಚಿವಾಲಯದ ಮೂಲಗಳ ಪ್ರಕಾರ ಭಾರತದ ಸಹಾಯವನ್ನು ನಿರಾಕರಿಸಲಾಗಿಲ್ಲ, ಆದರೆ ಪ್ರಸ್ತಾಪವನ್ನು ಪರಿಶೀಲನೆ ನಡೆಸಲಾಗುತ್ತಿದೆ. ಇನ್ನಷ್ಟೇ ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ.

ಅದೇ ಹೊತ್ತಿಗೆ ಇಂದು ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರು ಪಾಕಿಸ್ತಾನಕ್ಕೆ ಭಾರತ ಶುಭ ಹಾರೈಸಿದೆ. ಪ್ರತಿಯಾಗಿ ಪಾಕಿಸ್ತಾನವೂ ಆಗಸ್ಟ್ 15ರ ಭಾರತದ ಸ್ವಾತಂತ್ರ್ಯಕ್ಕೆ ಶುಭ ಹಾರೈಸಿದೆ ಎಂದು ವರದಿಗಳು ಹೇಳಿವೆ.

ಕ್ರಿಕೆಟ್ ಪಂದ್ಯ ನಡೆಸಿ...
ಪಾಕಿಸ್ತಾನ ನೆರೆ ಸಂತ್ರಸ್ತರಿಗೆ ಆರ್ಥಿಕ ಸಹಕಾರ ನೀಡುವ ನಿಟ್ಟಿನಲ್ಲಿ ಭಾರತ ಮತ್ತು ಇತರ ರಾಷ್ಟ್ರಗಳು ಇಂಗ್ಲೆಂಡ್‌ನಲ್ಲಿ ಒಂದು ದಿನದ ಪ್ರದರ್ಶನ ಸಹಾಯಾರ್ಥ ಪಂದ್ಯ ನಡೆಸಲು ಸಹಕರಿಸಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮನವಿ ಮಾಡಿಕೊಳ್ಳಲಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಜತೆ ಈ ಕುರಿತು ಪಿಸಿಬಿ ಮಾತುಕತೆ ನಡೆಸಲಿದೆ. ಪ್ರಸಕ್ತ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಪಾಕಿಸ್ತಾನದ ಸರಣಿಯ ಮಧ್ಯೆ ಈ ಪಂದ್ಯ ನಡೆಸುವ ಪ್ರಸ್ತಾಪ ಪಾಕಿಸ್ತಾನದ್ದು ಎಂದು ಹೇಳಲಾಗಿದೆ.

ಭಾರತ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ