ತನ್ನ ವಿಚ್ಛೇದಿತ ಪತ್ನಿಗೆ ಮರು ಮದುವೆ ಆಗುವ ತನಕ ಅವಳ ಮತ್ತು ಮಕ್ಕಳ ಯೋಗ-ಕ್ಷೇಮವನ್ನು ನೋಡಿಕೊಳ್ಳುವ ಹೊಣೆಗಾರಿಕೆ ಮುಸ್ಲಿಂ ಪತಿಯದ್ದಾಗಿರುತ್ತದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಮುಸ್ಲಿಂ ವೈಯಕ್ತಿಕ ಕಾನೂನಿನಂತೆ 'ಇದ್ದತ್' ಅವಧಿಯಲ್ಲಿ ಮಾತ್ರ ಅಂದರೆ ತಲಾಖ್ ನೀಡಿದ ಮೂರು ತಿಂಗಳವರೆಗೆ ಮಾತ್ರ ಪತ್ನಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಗಂಡನದ್ದಾಗಿರುತ್ತಾದೆಯಾದರೂ, ಕ್ರಿಮಿನಲ್ ದಂಡ ಸಂಹಿತೆಯ ಅಡಿಯಲ್ಲಿ ಪತ್ನಿಗೆ ಮರು ಮದುವೆಯಾಗುವವರೆಗೂ ಗಂಡನಿಂದ ಅಂತಹ ಸವಲತ್ತುಗಳನ್ನು ಪಡೆಯಲು ಹಕ್ಕು ಹೊಂದಿರುತ್ತಾಳೆ ಎಂದು ನ್ಯಾಯಾಲಯ ಹೇಳಿದೆ.
ಮುಸ್ಲಿಂ ಗಂಡನೊಬ್ಬನಿಂದ ಮುಸ್ಲಿಂ ಪತ್ನಿಯೊಬ್ಬಳು ವಿಚ್ಛೇದನ ಪಡೆದುಕೊಂಡರೂ, ಆಕೆಗೆ ಮರು ಮದುವೆ ಆಗುವವರೆಗೆ ಗಂಡನಾಗಿದ್ದವನು ನಿರ್ವಹಣಾ ವೆಚ್ಚವನ್ನು ನೀಡುವುದು ಕಡ್ಡಾಯ ಎನ್ನುವುದು ಸ್ಫಟಿಕದಷ್ಟೇ ಸ್ಪಷ್ಟವಾಗಿದೆ. ಇದು ವಿಚ್ಛೇದಿತ ಮುಸ್ಲಿಂ ಮಹಿಳೆಗೆ ನಮ್ಮ ನಾಗರಿಕ ಮತ್ತು ಅಪರಾಧಿ ಪ್ರಕ್ರಿಯಾ ಸಂಹಿತೆಯು ನೀಡುವ ರಕ್ಷಣೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಕುರಿತು ಮತ್ತಷ್ಟು ವಿವರಣೆ ನೀಡಿರುವ ನ್ಯಾಯಾಲಯವು, ಗಂಡನಾದವನು ತನ್ನ ಮಾಜಿ ಪತ್ನಿಯ ನಿರ್ವಹಣೆ-ಯೋಗಕ್ಷೇಮದ ಹೊಣೆ ಮಾತ್ರ ಹೊಂದಿರುವುದಲ್ಲ. ಆಕೆಯ ಜತೆಗಿರುವ ಅಪ್ರಾಪ್ತ ಮಕ್ಕಳನ್ನೂ ನೋಡಿಕೊಳ್ಳಬೇಕಾಗುತ್ತದೆ ಎಂದಿದೆ.
ತನ್ನ ಮಾಜಿ ಪತ್ನಿಯೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿರುವ ಅಪ್ರಾಪ್ತ ಮಗಳ ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು 2,000 ರೂಪಾಯಿಗಳನ್ನು ನೀಡಬೇಕೆಂಬ ಕೆಳಗಿನ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದ ಮುಸ್ಲಿಂ ವ್ಯಕ್ತಿಯೊಬ್ಬನ ಪ್ರಕರಣದಲ್ಲಿ ನ್ಯಾಯಾಲಯ ಮೇಲಿನಂತೆ ತೀರ್ಪು ನೀಡಿದೆ.
ಮುಸ್ಲಿಂ ವ್ಯಕ್ತಿಯ ವಾದವನ್ನು ತಳ್ಳಿ ಹಾಕಿರುವ ನ್ಯಾಯಾಲಯ, ನಿಮ್ಮ ಮಾಜಿ ಪತ್ನಿ ಮರು ಮದುವೆಯಾಗುವವರೆಗೆ ನೀವು ಜೀವನಾಂಶ ನೀಡುವುದು ಕಡ್ಡಾಯ. ನಿಮ್ಮ ಮಗಳು ಪ್ರಾಪ್ತ ವಯಸ್ಸಿಗೆ ಬರುವವರೆಗೆ ಅವಳಿಗೂ ನಿರ್ವಹಣಾ ವೆಚ್ಚವನ್ನು ನೀಡಬೇಕಾಗುತ್ತದೆ ಎಂದು ತೀರ್ಪು ನೀಡಿತು.