ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮದನಿ ಸೆರೆ ಅನಿವಾರ್ಯ: ಕೊಲ್ಲಂನಲ್ಲಿ ನಿಷೇಧಾಜ್ಞೆ (Abdul Nasar Madani | Bangalore Serial Blast | PDP | Terror | Karnataka | Kerala Police)
ಬೆಂಗಳೂರು ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಆರೋಪಿಗಳಲ್ಲೊಬ್ಬನಾಗಿರುವ ಕೇರಳದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥ, ಅಬ್ದುಲ್ ನಾಸಿರ್ ಮದನಿಯ ಬಂಧನ ಅನಿವಾರ್ಯವಾಗಿರುವ ಹಿನ್ನೆಲೆಯಲ್ಲಿ, ಬೆಂಗಳೂರು ಪೊಲೀಸರಿಂದ ಆತನನ್ನು ರಕ್ಷಿಸಲು ಕೊಲ್ಲಂನ ಆತನ ನಿವಾಸದ ಸುತ್ತ ಪಿಡಿಪಿ ಕಾರ್ಯಕರ್ತರು ಜಮಾಯಿಸಿದ್ದಾರೆ.
ನಿಷೇಧಾಜ್ಞೆ ಮದನಿ ಬಂಧನಕ್ಕೆ ಬೆಂಗಳೂರು ಪೊಲೀಸರು ಕೇರಳದ ಕೊಲ್ಲಂಗೆ ತೆರಳಿದ್ದು, ಬಂಧನ ಖಚಿತ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ, ಮದನಿಯ ಊರಾಗಿರುವ ಅನ್ವಶ್ಶೇರಿಯಲ್ಲಿ ಭಾರಿ ಸಂಖ್ಯೆಯಲ್ಲಿ ಆತನ ಹಿಂಬಾಲಕರು ಜಮಾಯಿಸಿದ್ದಾರೆ. ಆತನ ಮನೆಯ ಒಂದು ಕಿಲೋ ಮೀಟರ್ ಸುತ್ತಮುತ್ತ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನೂ ನಿಯೋಜಿಸಲಾಗಿದೆ. ಅಲ್ಲಿ ನೆರೆದಿದ್ದ ಮಾಧ್ಯಮದ ಮಂದಿ ಹಾಗೂ ಪೊಲೀಸರತ್ತ ಕೆಲವು ಪಿಡಿಪಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದರಿಂದಾಗಿ ಪ್ರದೇಶದಲ್ಲಿ ನಿಷೇಧಾಜ್ಞೆ ಹೇರಲಾಗಿದೆ.
1998ರಲ್ಲಿ 58 ಮಂದಿಯನ್ನು ಬಲಿತೆಗೆದುಕೊಂಡಿದ್ದ ಕೊಯಮತ್ತೂರು ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಧಾನ ಆರೋಪಿಯಾಗಿದ್ದ ಮದನಿಯನ್ನು ಈ ಹಿಂದೆ ಬಂಧಿಸಿ, ಖುಲಾಸೆಗೊಳಿಸಲಾಗಿತ್ತು. ಇದೇ ವೇಳೆ, ತಾನು ಬಂಧನಕ್ಕೆ ಸಹಕರಿಸುವುದಾಗಿ ಮತ್ತು ಕಾನೂನು ಹೋರಾಟ ಮುಂದುವರಿಸುವುದಾಗಿ ಮದನಿ ಹೇಳಿದ್ದಾರೆ.
ಐದಾರು ದಿನಗಳಿಂದ ಕೇರಳದಲ್ಲಿ ಬೀಡುಬಿಟ್ಟಿರುವ ಕರ್ನಾಟಕ ಪೊಲೀಸರು, ಮದನಿ ಬಂಧನಕ್ಕೆ ಕೇರಳ ಪೊಲೀಸರ ಅನುಮತಿಗಾಗಿ ಕಾಯುತ್ತಿದ್ದಾರೆ. ಇದಕ್ಕೆ ಮೊದಲು, ಆತ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿತ್ತು.
ಮದನಿಯನ್ನು ಬಂಧಿಸಿದರೆ ಕಾನೂನು-ಸುವ್ಯವಸ್ಥೆಗೆ ಭಂಗವಾದೀತು ಎಂಬ ಆತಂಕದಲ್ಲಿರುವ ಕೇರಳ ಪೊಲೀಸರು, ಬಂಧನಕ್ಕೆ ಒಪ್ಪಿಗೆ ನೀಡಲು ಹಿಂಜರಿಯುತ್ತಿದ್ದಾರೆ. ಇದೇ ವೇಳೆ, ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ದೇವಸ್ಥಾನ ಉದ್ಘಾಟನೆಗಾಗಿ ಆಗಮಿಸುತ್ತಿದ್ದಾರೆ. ಅವರ ಭದ್ರತೆಗಾಗಿಯೂ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಬೇಕಾಗುತ್ತದೆ. ಹೀಗಾಗಿ ಪ್ರತಿಭಾ ಪಾಟೀಲ್ ಬಂದು ಹೋದ ಬಳಿಕ ಬಂಧನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಕೇರಳ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಅವರು ಕರ್ನಾಟಕ ಗೃಹ ಸಚಿವ ವಿ.ಎಸ್.ಆಚಾರ್ಯ ಅವರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಯಾವುದೇ ಕ್ಷಣದಲ್ಲಿ ಮದನಿಯ ಬಂಧನವಾಗಬಹುದಾಗಿದೆ.