ಭಾರತದ ವಿರುದ್ಧದ ಭಯೋತ್ಪಾದನೆಯನ್ನು ಬೆಂಬಲಿಸುವುದಿಲ್ಲ ಎಂಬ ಕಠಿಣ ನಿಲುವಿಗೆ ಬದ್ಧವಾಗುವುದಾದರೆ ಮಾತ್ರ ಪಾಕಿಸ್ತಾನದ ಜೊತೆ ಮಾತುಕತೆ ಮುಂದುವರಿಸುವುದಾಗಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.
ಭಾನುವಾರ ಕೆಂಪುಕೋಟೆಯಲ್ಲಿ 64ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ನಂತರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನದ ನೆಲದಲ್ಲಿ ಭಾರತದ ವಿರುದ್ಧ ಭಯೋತ್ಪಾದನೆ ನಡೆಸಲು ಅವಕಾಶ ನೀಡುವುದಿಲ್ಲ ಎಂಬುದನ್ನು ಭಾರತ ಎದುರು ನೋಡುವುದಾಗಿ ಹೇಳಿದರು. ಆ ನಿಟ್ಟಿನಲ್ಲಿ ನಾವು ಪಾಕಿಸ್ತಾನ ಸರಕಾರದೊಂದಿಗೆ ಎಲ್ಲಾ ರೀತಿಯಲ್ಲೂ ಚರ್ಚೆ ನಡೆಸಲು ನಾವು ಸಿದ್ದ. ಆದರೆ ಉಗ್ರರನ್ನು ಮಟ್ಟಹಾಕಲು ಸಾಧ್ಯವಿಲ್ಲ, ಭಾರತದ ವಿರುದ್ಧ ಉಗ್ರರಿಗೆ ಪರೋಕ್ಷವಾಗಿ ಬೆಂಬಲ ನೀಡುವುದು ಮುಂದುವರಿದಲ್ಲಿ ಪಾಕಿಸ್ತಾನದ ಜತೆ ಮಾತುಕತೆ ಪ್ರಕ್ರಿಯೆ ಕೂಡ ಮುಂದುವರಿಯಲಾರದು ಎಂದು ಪ್ರಧಾನಿ ಸಿಂಗ್ ಸ್ಪಷ್ಟಪಡಿಸಿದ್ದಾರೆ.
'ನೆರೆಯ ರಾಷ್ಟ್ರದೊಂದಿಗೆ ಅಭ್ಯುದಯ, ಶಾಂತಿ ಮತ್ತು ಸಾಮರಸ್ಯವನ್ನು ನಾವು ಬಯಸುವುದಾಗಿ' ಹೇಳಿದ ಅವರು, ನೆರೆ ರಾಷ್ಟ್ರದ ಜೊತೆ ಏನೇ ಬಿಕ್ಕಟ್ಟು ಇದ್ದರು ಕೂಡ, ನಾವು ಪರಸ್ಪರ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಲು ಬಯಸುವುದಾಗಿ ಹೇಳಿದರು.
ಕಾಶ್ಮೀರ ಭಾರತದ ಅವಿಭಾಜ್ಯ ಅಂಗ: ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಪ್ರತಿ ವ್ಯಕ್ತಿ ಅಥವಾ ಪ್ರತ್ಯೇಕತವಾದಿ ಸಂಘಟನೆ ಜೊತೆ ಮಾತುಕತೆ ನಡೆಸಲು ಸರಕಾರ ಸಿದ್ದವಾಗಿದೆ ಎಂದು ಪ್ರಧಾನಿ ಸಿಂಗ್ ತಿಳಿಸಿದ್ದಾರೆ. ಆದರೆ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದಾಗಿ ಒತ್ತಿ ಹೇಳಿದರು. ಹಾಗಾಗಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬ ನೆಲೆಯಲ್ಲೇ ಮಾತುಕತೆ ನಡೆಯಲಿದೆ ಎಂದರು. ಈ ಹಿಂದೆ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ವಾಯತ್ತೆ ನೀಡುವುದಾಗಿ ಹೇಳುವ ಮೂಲಕ ಪ್ರಧಾನಿ ಸಾಕಷ್ಟು ಟೀಕೆಗೆ ಒಳಗಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಜಮ್ಮು-ಕಾಶ್ಮೀರದ ಸಮಸ್ಯೆ ಕುರಿತಂತೆ ಅಲ್ಲಿನ ಪ್ರಮುಖ ರಾಜಕೀಯ ಪಕ್ಷಗಳ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದ ಅವರು, ಪ್ರತ್ಯೇಕತಾವಾದಿಗಳ ಹಿಂಸಾಚಾರದಿಂದ ಯಾವುದೇ ಲಾಭವಿಲ್ಲ. ಆದರೂ ಕಣಿವೆ ಪ್ರದೇಶದಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ. ಅದಕ್ಕಾಗಿ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿದರು.
ನಕ್ಸಲಿಯರೇ ಶಸ್ತ್ರಾಸ್ತ್ರ ತ್ಯಜಿಸಿ ಮಾತುಕತೆಗೆ ಬನ್ನಿ: ಶಸ್ತ್ರಾಸ್ತ್ರ ತ್ಯಜಿಸಿ ಹಿಂಸಾಚಾರವನ್ನು ಕೈಬಿಟ್ಟು, ಮಾತುಕತೆಗೆ ಮುಂದಾಗುವ ಮೂಲಕ ಸರಕಾರದ ಜೊತೆ ಕೈಜೋಡಿಸಿ ಹಿಂದುಳಿದ ಪ್ರದೇಶಗಳ ಅಭಿವೃದ್ದಿಗೆ ಸಹಕರಿಸಬೇಕೆಂದು ಪ್ರಧಾನಿ ಸಿಂಗ್ ನಕ್ಸಲೀಯರಿಗೆ ಭಾನುವಾರ ಕರೆ ನೀಡಿದ್ದಾರೆ.
64ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ನಾನು ನಕ್ಸಲೀಯರಲ್ಲಿ ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇನೆ, ಹಿಂಸಾಚಾರ ಕೈಬಿಟ್ಟು, ಮಾತುಕತೆಗೆ ಮುಂದಾಗುವಂತೆ ಹೇಳಿದರು. ಅಷ್ಟೇ ಅಲ್ಲ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ದಿಗೆ, ಕಾನೂನು ಪರಿಪಾಲನೆಗಾಗಿ ರಾಜ್ಯ ಸರಕಾರಗಳಿಗೂ ಕೇಂದ್ರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.