ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಓಮರ್ ಅಬ್ದುಲ್ ಮೇಲೆ ಶೂ ಎಸೆದ ಸಬ್ ಇನ್ಸ್‌ಪೆಕ್ಟರ್! (Omar Abdullah | Shoe hurled | Jammu | Kashmir | I-Day function)
ಬಿಗಿ ಬಂದೋಬಸ್ತ್ ನಡುವೆ ಇಲ್ಲಿನ ಸ್ಟೇಡಿಯಂನಲ್ಲಿ ಸ್ವಾತಂತ್ರ್ಯೋತ್ಸವದ ಸಮಾರಂಭ ನಡೆಯುತ್ತಿದ್ದ ವೇಳೆ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ ಮೇಲೆ ಸಬ್ ಇನ್ಸ್‌ಪೆಕ್ಟರ್‌ರೊಬ್ಬರು ಕಂದು ಬಣ್ಣದ ಶೂ ಎಸೆದ ಆಘಾತಕಾರಿ ಘಟನೆ ಭಾನುವಾರ ನಡೆದಿದೆ.
64ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಬೆನ್ನಲ್ಲೇ ಓಮರ್ ಮೇಲೆ ಈ ಶೂ ಎಸೆಯಲಾಗಿದೆ. ಆದರೆ ಅದೃಷ್ಟವಶಾತ್ ಶೂ ಓಮರ್ ಅವರ ಮೈಮೇಲೆ ಬೀಳಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿ ಓಮರ್ ಮೇಲೆ ಶೂ ಎಸೆದ ವ್ಯಕ್ತಿ ಕರ್ತವ್ಯ ನಿರತ ಸಬ್ ಇನ್ಸ್‌ಪೆಕ್ಟರ್. ಕೂಡಲೇ ಆತನನ್ನು ಅಬ್ದುಲ್ ಅವರ ಭದ್ರತಾ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಸರಕಾರದ ಕಾರ್ಯವೈಖರಿ ವಿರೋಧಿಸಿ ಸಬ್ ಇನ್ಸ್‌ಪೆಕ್ಟರ್ ಶೂ ಎಸೆದಿದ್ದಾನೆ ಎಂದು ಮಾಧ್ಯಮದ ವರದಿಯೊಂದು ಹೇಳಿದೆ.
ಇತ್ತೀಚೆಗಷ್ಟೇ ದೇಶದಲ್ಲಿ ಪ್ರವಾಹ ಪರಿಸ್ಥಿತಿಯಿಂದ ಜನ ಕಂಗಾಲಾಗಿದ್ದರೂ ಕೂಡ ಬ್ರಿಟನ್‌ಗೆ ಪ್ರವಾಸ ಕೈಗೊಂಡಿದ್ದನ್ನು ವಿರೋಧಿಸಿ ಪಾಕ್ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಮೇಲೆ ಶೂ ಎಸೆಯಲಾಗಿತ್ತು. ಅದೇ ರೀತಿ ಭಾರತದಲ್ಲಿಯೂ ಪ್ರಧಾನಿ ಮನಮೋಹನ್ ಸಿಂಗ್, ಗೃಹ ಸಚಿವ ಪಿ.ಚಿದಂಬರಂ, ಬಿಜೆಪಿ ಮುಖಂಡ ಎಲ್.ಕೆ.ಆಡ್ವಾಣಿಯವರ ಮೇಲೂ ಶೂ ಎಸೆದ ಘಟನೆಯನ್ನು ನೆನಪಿಸಿಕೊಳ್ಳಬಹುದಾಗಿದೆ.