ಹೆಚ್ಚು ಪರಿಹಾರ ನೀಡಬೇಕೆಂದು ಭೂಸಂತ್ರಸ್ತ ರೈತರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪೊಲೀಸರ ಗುಂಡಿಗೆ ಮೂವರು ಬಲಿಯಾಗಿರುವ ಪ್ರಕರಣ ಸಂಸತ್ತಿನಲ್ಲೂ ಪ್ರತಿಧ್ವನಿಸಿದೆ. ಈ ಕುರಿತು ಚರ್ಚೆ ನಡೆಯಬೇಕೆಂದು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಪ್ರಮುಖ ಪ್ರತಿಪಕ್ಷ ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳು ಆಗ್ರಹಿಸಿವೆ.
ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಮತ್ತು ಸಮಾಜವಾದಿ ಸದಸ್ಯರು ಯುಪಿಎ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸ್ಪೀಕರ್ ಬಾವಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು.
ಪರಿಸ್ಥಿತಿಯನ್ನು ನಿಯಂತ್ರಿಸಲು ಸ್ಪೀಕರ್ ಮೀರಾ ಕುಮಾರ್ ಯತ್ನಿಸಿದರೂ ಫಲ ನೀಡಲಿಲ್ಲ. ನಂತರ ಸದನವನ್ನು ಅಪರಾಹ್ನಕ್ಕೆ ಮುಂದೂಡಲಾಯಿತು.
ಅತ್ತ ರಾಜ್ಯಸಭೆಯಲ್ಲೂ ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳು ರೈತರ ಪ್ರತಿಭಟನೆ ಕುರಿತು ಪ್ರಶ್ನೋತ್ತರ ವೇಳೆಯಲ್ಲಿ ಚರ್ಚಿಸಬೇಕು ಎಂದು ಆಗ್ರಹಿಸಿದವು. ಆದರೆ ಇದಕ್ಕೆ ಉತ್ತರ ಪ್ರದೇಶದ ಆಡಳಿತ ಪಕ್ಷ ಬಿಎಸ್‌ಪಿ ತೀವ್ರವಾಗಿ ವಿರೋಧ ವ್ಯಕ್ತಪಡಿಸಿತು. ಇದು ರಾಜ್ಯಕ್ಕೆ ಸಂಬಂಧಪಟ್ಟ ವಿಚಾರವಾಗಿರುವ ಕಾರಣ ಸದನದಲ್ಲಿ ಚರ್ಚಿಸಲಾಗದು ಎಂದು ವಾದ ಮಂಡಿಸಿತು.
ಇಂದು ಕಲಾಪ ಆರಂಭವಾಗುತ್ತಿದ್ದಂತೆ ಪ್ರಶ್ನೋತ್ತರ ವೇಳೆಯನ್ನು ಅಮಾನತುಗೊಳಿಸಬೇಕು ಎಂದು ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ ಒತ್ತಾಯಿಸಿದ್ದರು. ಉತ್ತರ ಪ್ರದೇಶದಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಪೊಲೀಸರು ಕೈಗೊಂಡಿರುವ ಕ್ರಮಗಳ ಕುರಿತು ಚರ್ಚೆ ನಡೆಯಬೇಕು ಎನ್ನುವುದು ಅವರ ಆಗ್ರಹವಾಗಿತ್ತು.
ಮೂವರು ಬಲಿಯಾಗಿದ್ದರು... ನಿನ್ನೆ ಉತ್ತರ ಪ್ರದೇಶದ ಆಲಿಗಡದಲ್ಲಿ ಪೊಲೀಸರು ನಡೆಸಿದ ಗೋಲಿಬಾರ್‌ಗೆ ಇಬ್ಬರು ರೈತರು ಸೇರಿದಂತೆ ಮೂವರು ಬಲಿಯಾಗಿದ್ದರು.
ಟೌನ್‌ಶಿಪ್‍ಗಾಗಿ ವಶಪಡಿಸಿಕೊಳ್ಳಲಾಗಿರುವ ತಮ್ಮ ಜಮೀನಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಜಿಕಾರ್ಪುರ್ ಗ್ರಾಮದ ರೈತರು ಪ್ರತಿಭಟನೆ ಆರಂಭಿಸಿದ್ದರು. ಇದು ಪೊಲೀಸ್ ಔಟ್‌ಪೋಸ್ಟ್ ಧ್ವಂಸ, ವಾಹನಗಳಿಗೆ ಬೆಂಕಿ ಹಚ್ಚುವ ತನಕ ತಲುಪಿದ್ದರಿಂದ ಹಿಂಸಾಚಾರ ರೂಪ ಪಡೆದುಕೊಂಡಿತ್ತು.
ಈ ಹೊತ್ತಿನಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದ್ದರು. ಘಟನೆಯಲ್ಲಿ ಇಬ್ಬರು ರೈತರು ಹಾಗೂ ಪೊಲೀಸ್ ಪೇದೆ ಸಾವನ್ನಪ್ಪಿದ್ದಾರೆ.