ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಳ್ಳಾರಿ ರೆಡ್ಡಿಗಳ ನಿಯಂತ್ರಣಕ್ಕೆ ಕೇಂದ್ರದ ಅಸ್ತ್ರ ಸಿದ್ಧ (commission to check illegal mining | Mines Ministry | Karnataka | Reddy brothers, India)
Bookmark and Share Feedback Print
 
ಇತ್ತೀಚೆಗಷ್ಟೇ ಬಳ್ಳಾರಿಯಲ್ಲಿ ಕಾಂಗ್ರೆಸ್ ನಾಯಕರು ಘೋಷಿಸಿದಂತೆ ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಯೋಗವೊಂದನ್ನು ರಚಿಸುವ ಪ್ರಸ್ತಾಪಕ್ಕೆ ಯುಪಿಎ ಸರಕಾರ ಒಪ್ಪಿಗೆ ಸೂಚಿಸಿದೆ. ಈ ಆಯೋಗವು 18 ತಿಂಗಳುಗಳೊಳಗೆ ತನ್ನ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಿದೆ.

ದೇಶದ ಸಂಪತ್ತನ್ನು ಲೂಟಿ ಮಾಡುತ್ತಿರುವ ಬಳ್ಳಾರಿ ಗಣಿ ರೆಡ್ಡಿಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕೆಲ ದಿನಗಳ ಹಿಂದಷ್ಟೇ ಕಾನೂನು ಸಚಿವ ವೀರಪ್ಪ ಮೊಯ್ಲಿ ಮತ್ತು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಹೇಳಿದ್ದರು. ಅದರಂತೆ ಸರಕಾರವು ಈ ಸಂಬಂಧ ಆಯೋಗವೊಂದನ್ನು ರಚಿಸಲು ಮುಂದಾಗಿದೆ.

ರಾಷ್ಟ್ರೀಯ ಗಣಿ ನಿಯಂತ್ರಣಾ ಪ್ರಾಧಿಕಾರ ಎಂದು ಈ ಆಯೋಗವನ್ನು ಹೆಸರಿಸಲಾಗಿದ್ದು, ಇದು ಅಕ್ರಮ ಗಣಿಗಾರಿಕೆ ನಡೆಸುವವರ ವಿರುದ್ಧ ತನಿಖೆ, ಬಂಧನ ಮತ್ತು ಶಿಕ್ಷೆ ನೀಡುವ ಅಧಿಕಾರವನ್ನು ಹೊಂದಿದೆ ಎಂದು ಗಣಿ ಸಚಿವ ಬಿ.ಕೆ. ಹಂಡಿಕ್ ರಾಜ್ಯಸಭೆಗೆ ತಿಳಿಸಿದ್ದಾರೆ.

ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರ ಪರವಾನಗಿಗಳನ್ನು ರದ್ದುಗೊಳಿಸುವ ಅಧಿಕಾರವನ್ನು ರಾಜ್ಯಗಳು ಹೊಂದಿಲ್ಲ. ಹಾಗಾಗಿ ಈ ಪ್ರಾಧಿಕಾರವು ಜಾರಿಗೆ ಬರುತ್ತಿದ್ದಂತೆ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರ ಪರವಾನಗಿಯನ್ನು ರದ್ದುಪಡಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

ದೇಶದಾದ್ಯಂತ ನಡೆಯುವ ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟುವ ಹೊಣೆಗಾರಿಕೆ ಹೊಂದಲಿರುವ ಈ ಆಯೋಗ ರಚನೆಯ ಕುರಿತು ಪ್ರಧಾನ ಮಂತ್ರಿಯವರ ಕಾರ್ಯಾಲಯವು ಗಣಿ ಸಚಿವಾಲಯದ ಹಿರಿಯ ಅಧಿಕಾರಿಗಳ ಜತೆ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿತ್ತು.

ಕರ್ನಾಟಕ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿನ ಅಕ್ರಮ ಗಣಿಗಾರಿಕೆ ಕುರಿತು ವರದಿಗಳನ್ನು ಈ ಆಯೋಗವು 18 ತಿಂಗಳುಗಳ ಒಳಗೆ ಕೇಂದ್ರಕ್ಕೆ ಒಪ್ಪಿಸಬೇಕು ಎಂದು ಸರಕಾರ ಸೂಚಿಸಿದೆ ಎಂದು ಮೂಲಗಳು ಹೇಳಿವೆ.

ದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ತಡೆಯುವ ಸಲುವಾಗಿ ಆಯೋಗವೊಂದನ್ನು ರಚಿಸಲು ಕೇಂದ್ರ ಸಚಿವ ಸಂಪುಟವು ಅಂಗೀಕಾರ ನೀಡಿದೆ. ಈ ಆಯೋಗವು ಕರ್ನಾಟಕ ಮತ್ತು ಇತರ ಖನಿಜ ಶ್ರೀಮಂತ ರಾಜ್ಯಗಳ ಅಕ್ರಮ ಗಣಿಗಾರಿಕೆಯನ್ನು ಕೇಂದ್ರೀಕರಿಸಿ ಕಾರ್ಯ ನಿರ್ವಹಿಸಲಿದೆ ಎಂದು ಮೂಲ ವಿವರಣೆ ನೀಡಿದೆ.

ಪ್ರಸಕ್ತ ಕರ್ನಾಟಕ, ಒರಿಸ್ಸಾ ಮತ್ತು ಜಾರ್ಖಂಡ್‌ಗಳಲ್ಲಿ ಭಾರೀ ಪ್ರಮಾಣದ ಖನಿಜಗಳು ಭೂಗರ್ಭದಿಂದ ಹೊರಗೆಳೆಯಲ್ಪಟ್ಟು ವಿದೇಶಗಳಿಗೆ ರಫ್ತಾಗುತ್ತಿವೆ. ಇದರಲ್ಲಿ ಅಕ್ರಮದ ಪಾಲೇ ಹೆಚ್ಚು ಎಂದು ಆರೋಪಿಸುತ್ತಾ ಬರಲಾಗುತ್ತಿದೆ.

ಕರ್ನಾಟಕ ರಾಜ್ಯ ಸರಕಾರದಲ್ಲಿನ ಸಚಿವರುಗಳಾದ ಕರುಣಾಕರ ರೆಡ್ಡಿ, ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ. ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದರೂ, ಅದನ್ನು ಸಾಚಾಗೊಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಂಗದ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸುತ್ತಾ ಬಂದಿದೆ.

ಅಕ್ರಮ ಗಣಿಗಾರಿಕೆ ಹಗರಣವನ್ನು ಸಿಬಿಐಗೆ ಒಪ್ಪಿಸಬೇಕೆಂಬ ಕಾಂಗ್ರೆಸ್ ಬೇಡಿಕೆಯನ್ನೂ ಸರಕಾರ ತಳ್ಳಿ ಹಾಕಿತ್ತು. 2009ರ ನವೆಂಬರ್ ತಿಂಗಳಿನಿಂದೀಚೆಗೆ ಕೇಂದ್ರ ಗಣಿ ಸಚಿವ ಬಿ.ಕೆ. ಹಂಡಿಕ್ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ನಾಲ್ಕು ಬಾರಿ ಪತ್ರ ಬರೆದು, ಸಿಬಿಐ ತನಿಖೆ ನಡೆಸುವಂತೆ ಸಲಹೆ ನೀಡಿದ್ದರು. ಆದರೆ ಇದಕ್ಕೂ ಬಿಜೆಪಿ ಸರಕಾರ ನಕಾರಾತ್ಮಕ ಪ್ರತಿಕ್ರಿಯೆ ನೀಡಿತ್ತು.

ಈ ನಡುವೆ ಕೇಂದ್ರ ಸರಕಾರವು ನೂತನ ಗಣಿ ಕಾನೂನೊಂದರ ಸಿದ್ಧತೆಯಲ್ಲಿದೆ. ಪ್ರಸಕ್ತ ಕರಡು ತಯಾರಿಯಾಗುತ್ತಿದ್ದು, ಅದು ಜಾರಿಗೆ ಬಂದಲ್ಲಿ ಅಕ್ರಮ ಗಣಿಗಾರಿಕೆಯನ್ನು ತಡೆಯುವುದು ಸುಲಭವಾಗುತ್ತದೆ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ