ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗೋಹತ್ಯೆ ನಿಷೇಧ ಕಾಯ್ದೆ ತಿರಸ್ಕರಿಸಿ: ರಾಷ್ಟ್ರಪತಿಗೆ ಕಾಂಗ್ರೆಸ್
(Congress | Cow Slaughter Bill | Karnataka | Pratibha Singh Patil)
ಗೋಹತ್ಯೆ ನಿಷೇಧ ಕಾಯ್ದೆ ತಿರಸ್ಕರಿಸಿ: ರಾಷ್ಟ್ರಪತಿಗೆ ಕಾಂಗ್ರೆಸ್
ನವದೆಹಲಿ, ಸೋಮವಾರ, 16 ಆಗಸ್ಟ್ 2010( 15:18 IST )
ಕರ್ನಾಟಕದ ಬಿಜೆಪಿ ಸರಕಾರ ಜಾರಿಗೆ ತರಲು ಯತ್ನಿಸುತ್ತಿರುವ ಗೋಹತ್ಯಾ ನಿಷೇಧ ಮಸೂದೆಗೆ ಅಂಕಿತ ಹಾಕಬೇಡಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಿಯೋಗ ರಾಷ್ಟ್ರಪತಿಯವರನ್ನು ಒತ್ತಾಯಿಸಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್, ತೇಜಸ್ವಿನಿ, ರಮಾನಾಥ ರೈ, ಬಿ.ಸಿ. ಪಾಟೀಲ್, ರೋಷನ್ ಬೇಗ್, ಅಭಯಚಂದ್ರ ಜೈನ್ ಸೇರಿದಂತೆ ಸಂಸದರು, ಶಾಸಕರು, ಮುಖಂಡರಿದ್ದ 50 ಮಂದಿಯ ಕಾಂಗ್ರೆಸ್ ನಿಯೋಗ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಇಂದು ಬೆಳಿಗ್ಗೆ ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಬಿಜೆಪಿ ಸರಕಾರವು ಕೋಮು ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಗೋಹತ್ಯಾ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಯತ್ನಿಸುತ್ತಿದೆ. ಹಾಗೇನಾದರೂ ಮಸೂದೆಗೆ ಅಂಕಿತ ದೊರೆತಲ್ಲಿ ಕೋಮು ಸಂಘರ್ಷಗಳು ಸಂಭವಿಸುವ ಸಾಧ್ಯತೆಗಳಿವೆ. ಬಡವರ, ಹಿಂದುಳಿದವರ ಆಹಾರ ಪದ್ಧತಿಯ ಮೇಲೆ ಸರಕಾರ ಸವಾರಿ ಮಾಡಲು ಹೊರಟಿದೆ ಎಂದು ಕಾಂಗ್ರೆಸ್ ನಾಯಕರು ಮುಂದೆ ಎದುರಾಗಬಹುದಾದ ದುಷ್ಪರಿಣಾಮಗಳ ಕುರಿತು ರಾಷ್ಟ್ರಪತಿಯವರ ಮನವರಿಕೆ ಮಾಡಿದರು ಎಂದು ವರದಿಗಳು ಹೇಳಿವೆ.
ಹಾಗಾಗಿ ಇಂತಹ ಅಪಾಯಕಾರಿ ಕಾಯ್ದೆಯನ್ನು ರಾಷ್ಟ್ರಪತಿಯವರು ತಿರಸ್ಕರಿಸಬೇಕು. ಯಾವುದೇ ಕಾರಣಕ್ಕೂ ಜಾರಿಯಾಗಲು ಅವಕಾಶ ನೀಡಬಾರದು. ಇದರ ವಿರುದ್ದ ನಾವು ರಾಜ್ಯವ್ಯಾಪಿ ಹೋರಾಟ ನಡೆಸಲಿದ್ದೇವೆ ಎಂದು ಭೇಟಿಯ ನಂತರ ದೇಶಪಾಂಡೆ ಪ್ರತಿಕ್ರಿಯಿಸಿದ್ದಾರೆ.
ರಾಜ್ಯ ವಿಧಾನಸಭೆ ಮತ್ತು ಪರಿಷತ್‌ಗಳಲ್ಲಿ ಅಂಗೀಕಾರ ಪಡೆದುಕೊಂಡಿದ್ದ ಗೋಹತ್ಯಾ ನಿಷೇಧ ಮಸೂದೆಯನ್ನು ಸರಕಾರವು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಕಳುಹಿಸಿತ್ತು. ಆದರೆ ಇದಕ್ಕೆ ಸಹಿ ಹಾಕುವ ಬದಲು, ರಾಷ್ಟ್ರಪತಿಯವರ ನಿರ್ಧಾರಕ್ಕೆಂದು ಭಾರದ್ವಾಜ್ ರವಾನಿಸಿದ್ದರು.
ಮಸೂದೆಯ ವಿರುದ್ಧ ಜೆಡಿಎಸ್ ಕೂಡ ಪ್ರತಿಭಟನೆ ನಡೆಸುತ್ತಿದೆ. ಮುಸ್ಲಿಂ ಮತ್ತು ದಲಿತ ಸಮುದಾಯವೂ ಬಿಜೆಪಿ ಸರಕಾರದ ವಿವಾದಿತ ಮಸೂದೆ ಜಾರಿಯಾಗಬಾರದು ಎಂದು ಒತ್ತಾಯಿಸುತ್ತಿವೆ.