ಆಗಸ್ಟ್ 15, ಭಾನುವಾರ. ದೇಶಕ್ಕೆ ದೇಶವೇ ಸಂಭ್ರಮ ಪಟ್ಟ ದಿನ. ಅತ್ತ ಕೆಂಪು ಕೋಟೆಯಲ್ಲಿ ತಿರಂಗವನ್ನು ಎತ್ತರೆತ್ತರಕ್ಕೆ ಹಾರಿಸಿದಾಗ ಅದು ಅಲೆ-ಅಲೆಯಾಗಿ ತೇಲುತ್ತಿದ್ದುದನ್ನು ಕಂಡು ಸಂತಸದಿಂದಲೇ ಗುಂಡು ನಿರೋಧಕ ಗಾಜಿನ ಗೂಡಿನೊಳಗೆ ಮುದುಡಿಕೊಂಡು ಪ್ರಧಾನಿಯವರು ಭಾಷಣ ಮಾಡುತ್ತಿದ್ದರು. ಅದೇ ಹೊತ್ತಿಗೆ ಮತ್ತೊಂದು ಕಡೆ ತಮಗೆ 'ಉಣ್ಣಲು ಅನ್ನ ಕೊಡಿ' ಎಂದು ಗೋಗರೆದು ಸರಿಸುಮಾರು ಅವರಷ್ಟೇ ವಯಸ್ಸಾಗಿರುವ ವಿಧವೆಯರು, ದೇವದಾಸಿಯರು ಅರೆ ಬೆತ್ತಲೆ ಪ್ರತಿಭಟನೆ ನಡೆಸಿದರು.
ತಮ್ಮ ಪರಿಸ್ಥಿತಿ ಹೇಗಿದೆ ಎಂಬುದನ್ನು ಸಂಬಂಧಪಟ್ಟವರ ಗಮನ ಸೆಳೆಯಲು ಅನಿವಾರ್ಯ ನಡೆಯನ್ನು ಮಹಾರಾಷ್ಟ್ರದ ಈ ದೇವದಾಸಿ ಮಹಿಳೆಯರು ಅನುಸರಿಸಿದ್ದರು. ದೇವದಾಸಿ ಪದ್ಧತಿಯನ್ನು ನಿಷೇಧಿಸಿದ್ದೀರಿ, ಭಿಕ್ಷೆಯೆಂದರೆ ಎಲ್ಲರಿಗೂ ಕಷ್ಟ, ವೇಶ್ಯಾವಾಟಿಕೆ ನಮ್ಮ ವಯಸ್ಸಿಗೆ ಆಗದ ಕಾಯಕ. ನಮ್ಮ ಕಷ್ಟಗಳಿಗೆ ಸ್ಪಂದಿಸಿ ಎನ್ನುವುದಷ್ಟೇ ಆ ರೀತಿ ನಡೆದುಕೊಂಡವರ ಅಳಲಾಗಿತ್ತು.
PR
ಇತ್ತೀಚೆಗಷ್ಟೇ ಕರ್ನಾಟಕದ ಸವಣೂರಿನಲ್ಲಿ ಭಂಗಿ ಜನಾಂಗದವರು ತಮ್ಮ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ಅಮೇಧ್ಯ ಸುರಿದುಕೊಂಡು ಪ್ರತಿಭಟನೆ ನಡೆಸಿದ್ದರು. ನಮ್ಮ ಮೇಲೆ ಭಾರತೀಯ ಸೇನೆ ಅತ್ಯಾಚಾರ ನಡೆಸಿದೆ ಎಂದು ಕೆಲ ವರ್ಷಗಳ ಹಿಂದೆ ಮಣಿಪುರಿ ಮಹಿಳೆಯರು ಬೆತ್ತಲೆಯಾಗಿ ರ‌್ಯಾಲಿ ನಡೆಸಿದರು. ನನಗೆ ವರದಕ್ಷಿಣೆ ಕಿರುಕುಳ ನೀಡಲಾಗುತ್ತಿದೆ ಎಂದು ಗುಜರಾತಿನ ರಾಜ್‌ಕೋಟ್‌ನ ಪೂಜಾ ಚೌಹಾನ್ ಅರೆ ಬೆತ್ತಲೆಯಾಗಿ ಪೊಲೀಸ್ ಠಾಣೆಗೆ ಹೋದಳು.
ಆದರೆ ಇವರೆಲ್ಲ ಆ ರೀತಿಯಾಗಿ ವಿಕ್ಷಿಪ್ತ ಪ್ರತಿಭಟನೆ ಕೈಗೊಳ್ಳಬೇಕಾದರೆ, ತಮ್ಮ ಆತ್ಮಸಾಕ್ಷಿಯನ್ನೇ ಪಣಕ್ಕಿಡಬೇಕಾದರೆ ಅದೆಷ್ಟು ನೋವನ್ನು ಉಂಡಿರಬಹುದು ಎಂದು ನಮ್ಮ ವ್ಯವಸ್ಥೆಗೆ ಅರ್ಥವಾಗುತ್ತಿಲ್ಲ; ಗಾಜಿನ ಗೂಡಿನೊಳಗೆ ಕೂತು ದೇಶ ಸಮೃದ್ಧಿಯಿಂದಿದೆ ಎಂದು ಹೇಳುವವರ ಕಿವಿಗಳಿಗೆ ತಲುಪುತ್ತಿಲ್ಲ.
ಅವರು 'ಮಹಾರಾಷ್ಟ್ರ ನಿರಾಧಾರ ದೇವದಾಸಿ ಮಹಿಳಾ ಸಂಘಟನೆ'ಯ ಸದಸ್ಯೆಯರು. ಬಹುತೇಕರು ಬಡ ವಿಧವೆಯರು ಮತ್ತು ದೇವದಾಸಿಗಳು. ಪ್ರಸಕ್ತ ಸರಕಾರದಿಂದ ಸಂಜಯ್ ಗಾಂಧಿ ನಿರಾಧಾರ್ ಯೋಜನೆಯಡಿ ತಿಂಗಳಿಗೆ 500 ರೂಪಾಯಿ ಪಿಂಚಣಿ ಪಡೆಯುತ್ತಿದ್ದಾರೆ. ಆದರೆ ನಮ್ಮಲ್ಲೇ ಇರುವ ಹಿಜಿಡಾಗಳಿಗೆ ಈ ಸೌಲಭ್ಯ ಸಿಗುತ್ತಿಲ್ಲ, ಸಿಕ್ಕರೂ ಅದು ಬದುಕು ಸಾಗಿಸುವಷ್ಟಲ್ಲ ಎನ್ನುವುದು ಅವರ ವಾದ.
ನಮಗೆ ಬಿಪಿಎಲ್ ಪಡಿತರ ಚೀಟಿ ನೀಡಬೇಕು, ತಿಂಗಳಿಗೆ 2,000 ರೂಪಾಯಿ ನೀಡಬೇಕು. ನಮಗೆ ಬೇರೆ ಯಾವುದೇ ಆದಾಯದ ಮೂಲಗಳಿಲ್ಲ ಎಂದು ಒತ್ತಾಯಿಸಿ ಬೃಹನ್ಮುಂಬೈ ಮಹಾನಗರ ಪಾಲಿಕೆಯ ಆಜಾದ್ ಮೈದಾನದಲ್ಲಿ ತಮ್ಮ ವಿಲಕ್ಷಣ ಪ್ರತಿಭಟನೆ ನಡೆಸಿದರು. ನಂತರ ಆ ಎಂಟೂ ಮಹಿಳೆಯರನ್ನು ಬಂಧಿಸಲಾಯಿತು.
ನಮ್ಮ ಬೇಡಿಕೆಗಳನ್ನು ಈಡೇರಿಸಿ ಎಂದು ಹಲವು ವರ್ಷಗಳಿಂದ ಪ್ರತಿಭಟನೆಗಳನ್ನು ನಡೆಸುತ್ತಾ, ಮನವಿಗಳನ್ನು ಸಲ್ಲಿಸುತ್ತಾ ಬಂದಿದ್ದೇವೆ. ಆದರೆ ಸರಕಾರಗಳು ನಮ್ಮ ಕೂಗಿಗೆ ಓಗೊಟ್ಟಿಲ್ಲ. ಹಾಗಾಗಿ ಈ ರೀತಿಯಾಗಿ ಅರೆ ಬೆತ್ತಲೆಯಾಗಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಯಿತು ಎಂದು ಸಂಘಟನೆಯ ಅಧ್ಯಕ್ಷೆ ಆಶಾ ಪವಾರ್ ಸಮರ್ಥಿಸಿಕೊಂಡಿದ್ದಾರೆ.
ನಾವು ಈ ಹಿಂದೆ ರಸ್ತೆ ತಡೆ, ರೈಲು ರೋಕೋ, ಸಚಿವರುಗಳಿಗೆ ಘೇರಾವ್ ಹಾಕುವುದು, ಮಹಿಳಾ ದಿನದಂದು ತಲೆ ಬೋಳಿಸುವುದು ಸೇರಿದಂತೆ ವಿವಿಧ ರೀತಿಯ ಪ್ರತಿಭಟನೆಗಳನ್ನು ನಡೆಸಿದ್ದೇವೆ. ಆದರೆ ಸರಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನು ಬಿಟ್ಟರೆ ನಮಗೆ ಬೇರೆ ಆಯ್ಕೆಗಳಿರಲಿಲ್ಲ ಎಂದು ಮತ್ತೊಬ್ಬ ದೇವದಾಸಿ ಮಹಿಳೆ ತನ್ನ ನೋವನ್ನು ಹಂಚಿಕೊಂಡರು.
ಈಗ ನಡೆಸಿರುವ ಅರೆ ಬೆತ್ತಲೆ ಪ್ರತಿಭಟನೆಗೆ ಸಂಬಂಧಪಟ್ಟವರು ಜಗ್ಗದೇ ಇದ್ದಲ್ಲಿ, ನಮ್ಮ ಬೇಡಿಕೆಗಳನ್ನು ಈಡೇರಿಸದೇ ಇದ್ದಲ್ಲಿ ಮುಂದಿನ ನಮ್ಮ ಪ್ರತಿಭಟನಾ ವಿಧಾನ ಸಂಪೂರ್ಣವಾಗಿ ಬೆತ್ತಲೆಯಾಗುವುದು. ನಾವು ಯಾವುದಕ್ಕೂ ಹೇಸುವುದಿಲ್ಲ, ಒಂದು ತಿಂಗಳವರೆಗೆ ಕಾಯುತ್ತೇವೆ. ಯಾವುದೇ ಪ್ರತಿಕ್ರಿಯೆ ಬರದೇ ಇದ್ದರೆ, ಸಂಪೂರ್ಣ ಬೆತ್ತಲೆಯಾಗಿ ಪ್ರತಿಭಟನೆ ಮಾಡುತ್ತೇವೆ. ಆಗ ಸೋನಿಯಾ ಗಾಂಧಿಯವರ ಮುಖ ಕವಚವನ್ನು ನಾವು ತೊಡುತ್ತೇವೆ ಎಂದು ವೃದ್ಧೆಯರು ಬೆದರಿಕೆ ಹಾಕಿದ್ದಾರೆ.