ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಕ್ರಮ ಗಣಿಗಾರಿಕೆ; ಸಂಸತ್ತಲ್ಲಿ ಅನಂತ್-ಎಚ್‌ಡಿಕೆ ವಾಗ್ವಾದ (Illegal mining | HD Deve Gowda | HD Kumaraswamy | Anant Kumar)
Bookmark and Share Feedback Print
 
ಅಕ್ರಮ ಗಣಿಗಾರಿಕೆ ಕುರಿತು ಲೋಕಸಭೆಯಲ್ಲಿ ಮಂಗಳವಾರ ಚರ್ಚೆ ನಡೆದಿದ್ದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಸಂಸದ ಅನಂತ್ ಕುಮಾರ್ ಮತ್ತು ಎಚ್.ಡಿ. ಕುಮಾರಸ್ವಾಮಿ ಪಾಲ್ಗೊಂಡು ಪರಸ್ಪರ ಆರೋಪಗಳನ್ನು ಮಾಡಿದ್ದಾರೆ.

ನಿಯಮ 193ರಡಿಯಲ್ಲಿ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತು ಚರ್ಚೆಗೆ ಸಂಸದರಾದ ಬಸುದೇವ ಆಚಾರ್ಯ ಮತ್ತು ಎಚ್.ಡಿ. ದೇವೇಗೌಡ ಮನವಿ ಮಾಡಿಕೊಂಡಿದ್ದರು.

ಈ ಸಂಬಂಧ ಅನಂತ್ ಕುಮಾರ್ ಚರ್ಚೆಯಲ್ಲಿ ಪಾಲ್ಗೊಂಡು, ಕರ್ನಾಟಕದ ಬಿಜೆಪಿ ಸರಕಾರವನ್ನು ಬಲವಾಗಿ ಸಮರ್ಥಿಸಿಕೊಂಡರು. ಬಿ.ಎಸ್. ಯಡಿಯೂರಪ್ಪನವರು ಅಧಿಕಾರಕ್ಕೆ ಬಂದ ಮೇಲೆ ಕಬ್ಬಿಣದ ಅದಿರು ಗಣಿಗಾರಿಕೆಗೆ ಯಾವುದೇ ಪರವಾನಗಿಯನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ನ ಎಸ್.ಎಂ. ಕೃಷ್ಣ ಮತ್ತು ಧರಂ ಸಿಂಗ್ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ಗಣಿಗಾರಿಕೆ ನಡೆದಿತ್ತು ಎಂದು ಆರೋಪಿಸಿದ ಅನಂತ್ ಕುಮಾರ್, ತನ್ನದು ಆರೋಪವಲ್ಲ; ಇದು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರು ನೀಡಿರುವ ವರದಿ ಎಂದು ಸಮರ್ಥಿಸಿಕೊಂಡರು.

ಕುಮಾರಸ್ವಾಮಿ ಸವಾಲ್....
ಈ ನಡುವೆ ಎಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಕೊನೆಯ ಕ್ಷಣದಲ್ಲಿ ಗಣಿಗಾರಿಕೆಗೆ ಹಲವು ಪರವಾನಗಿಗಳನ್ನು ನೀಡಿದ್ದರು ಎಂದು ಆರೋಪಿಸಿದ್ದಕ್ಕೆ ಕುಪಿತಗೊಂಡ ಜೆಡಿಎಸ್ ನಾಯಕ, ಆರೋಪ ಸಾಬೀತುಪಡಿಸಿದರೆ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಸವಾಲು ಹಾಕಿದ ಪ್ರಸಂಗವೂ ನಡೆಯಿತು.

ಸವಾಲು ಹಾಕಿದ್ದನ್ನು ಸ್ವೀಕರಿಸಿ ಈ ಕುರಿತು ವಿವರಣೆ ನೀಡಿದ ಅನಂತ್ ಕುಮಾರ್, ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಈ ಸಂದರ್ಭದಲ್ಲಿ ಸರಕಾರದಿಂದ ಬಿಜೆಪಿ ಬೆಂಬಲ ಹಿಂತೆಗೆದುಕೊಂಡಾಗ, ಸರಕಾರ ಬೀಳುವ ಕೊನೆಯ ಕ್ಷಣದಲ್ಲಿ ಅಂದರೆ ಅಕ್ಟೋಬರ್ ಮೊದಲ ವಾರದಲ್ಲಿ ವೆಂಕಟೇಶ ಸ್ವಾಮಿ, ರಮೇಶ್ ಕುಮಾರ್, ಮೊಹಮ್ಮದ್, ರಾಮಮೂರ್ತಿ, ಬಾಬಣ್ಣ, ಆರ್.ಎನ್. ಅಶೋಕ್ ಹೀಗೆ ಹತ್ತು ಹಲವು ಮಂದಿಗೆ ಕುಮಾರಸ್ವಾಮಿಯವರು ಗಣಿ ಪರವಾನಗಿ ನೀಡಿದ್ದರು ಎಂದು ಲೋಕಾಯುಕ್ತರು ನೀಡಿರುವ ವರದಿಯನ್ನು ಉಲ್ಲೇಖಿಸಿದರು.

ಆದರೆ ಕುಮಾರಸ್ವಾಮಿ ತನ್ನ ಹಿಂದಿನ ನಿಲುವನ್ನೇ ಪುನರುಚ್ಛರಿಸುತ್ತಾ, ಇದು ಸುಳ್ಳು; ಹಾಗೇನಾದರೂ ಆಗಿದ್ದಲ್ಲಿ ನಾನು ರಾಜಕೀಯ ನಿವೃತ್ತಿ ಪಡೆಯಲು ಸಿದ್ಧ. ನಾನು ಕೇವಲ ಶಿಫಾರಸು ಮಾಡಲಷ್ಟೇ ಸಾಧ್ಯವಿತ್ತು. ಆದರೆ ಪರವಾನಗಿ ನಿರ್ಧಾರ ಕೈಗೊಳ್ಳುವುದು ಕೇಂದ್ರ ಸರಕಾರಕ್ಕೆ ಬಿಟ್ಟದ್ದು ಎಂದರು.

ಈ ಸಂದರ್ಭದಲ್ಲಿ ದೇವೇಗೌಡರು ಎದ್ದು ನಿಂತು, ನಾನು ಈಗೇನೂ ಮಾತನಾಡುವುದಿಲ್ಲ. ಸುಮ್ಮನೆ ಕಲಾಪವನ್ನು ವೀಕ್ಷಿಸುತ್ತಿದ್ದೇನೆ. ನನ್ನ ಸರದಿ ಬಂದಾಗ ಮಾತನಾಡುತ್ತೇನೆ ಎಂದರು.

ಅಧಿಕಾರವಿರುವುದು ಕೇಂದ್ರದಲ್ಲಿ...
ಗಣಿಗಾರಿಕೆ ಪರವಾನಗಿ ನೀಡುವ ಮತ್ತು ಅಕ್ರಮ ಗಣಿಗಾರಿಕೆಯನ್ನು ನಿಯಂತ್ರಿಸುವ ಸಂಪೂರ್ಣ ಅಧಿಕಾರವಿರುವುದು ಕೇಂದ್ರ ಸರಕಾರದ ಬಳಿಯೇ ಹೊರತು ರಾಜ್ಯ ಸರಕಾರದಲ್ಲಿ ಅಲ್ಲ ಎಂದು ಅನಂತ್ ಕುಮಾರ್ ಹೇಳಿದ್ದಾರೆ.

ಗಣಿಗಾರಿಕೆಯ ಕುರಿತ ಸಂಪೂರ್ಣ ಅಧಿಕಾರ ಗಣಿ ಸಚಿವಾಲಯದ ಅಡಿಯಲ್ಲಿರುವ ಮೈನಿಂಗ್ ಬ್ಯೂರೋ ಕೈಯಲ್ಲಿರುತ್ತದೆ. ಅವರು ನೀಡಿರುವ ಅಂದಾಜಿನ ಮೇಲೆ ಮಾತ್ರ ಗಣಿಗಾರಿಕೆ ನಡೆಸುವವರು ಕಾರ್ಯಾಚರಣೆ ನಡೆಸಬೇಕಾಗುತ್ತದೆ. ಗಣಿಗಾರಿಕೆಗೆ ಅನುಮತಿ ನೀಡುವಾಗ ಪರಿಸರ ಸಚಿವಾಲಯವೂ ಅನುಮತಿ ನೀಡಬೇಕಾಗುತ್ತದೆ. ಇಲ್ಲಿ ರಾಜ್ಯ ಸರಕಾರ ಕೇವಲ ಶಿಫಾರಸು ಮಾಡಲು ಮಾತ್ರ ಸಾಧ್ಯ ಎಂದು ಅವರು ತಿಳಿಸಿದರು.

ಅಲ್ಲದೆ ಅದಿರು ರಫ್ತು ಮಾಡುವ ಬಂದರುಗಳಲ್ಲಿ ಇರುವುದು ರಾಜ್ಯ ಸರಕಾರದ ಅಧಿಕಾರಿಗಳಲ್ಲ, ಅಲ್ಲಿರುವುದು ಕೇಂದ್ರ ಸರಕಾರದ ಸುಂಕ ಅಧಿಕಾರಿಗಳು. ಹಾಗಾಗಿ ಅಕ್ರಮ ಗಣಿಗಾರಿಕೆಯಲ್ಲಿ ರಾಜ್ಯ ಸರಕಾರಗಳನ್ನು ದೂಷಿಸುವುದು ಸರಿಯಲ್ಲ ಎಂದು ಅನಂತ್ ಕುಮಾರ್ ಸಲಹೆ ನೀಡಿದ್ದಾರೆ.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ...
ಯಡಿಯೂರಪ್ಪ ಸರಕಾರವನ್ನು ಸಮರ್ಥಿಸಿಕೊಂಡಿರುವ ಅನಂತ್ ಕುಮಾರ್, ಕಾಂಗ್ರೆಸ್ ವಿರುದ್ಧ ವಾಕ್ ಪ್ರಹಾರ ನಡೆಸಿದರು. ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆಯ ಕುರಿತು ಸಿಬಿಐ ತನಿಖೆಗೆ ಒಪ್ಪಿಸಬೇಕೆಂಬುದರಲ್ಲಿ ಯಾವುದೇ ಅರ್ಥವಿಲ್ಲ. ಸಿಬಿಐ ಎಂದರೆ ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಆಗಿರುವುದು ಇಡೀ ದೇಶಕ್ಕೆ ತಿಳಿದಿರುವ ವಿಚಾರ ಎಂದು ಟೀಕಿಸಿದರು.

ಸಿಬಿಐ ವಿವಿಧ ರಾಜ್ಯಗಳಲ್ಲಿ ಹೇಗೆ ನಡೆದುಕೊಂಡಿದೆ ಎಂದು ಎಲ್ಲರಿಗೂ ಗೊತ್ತು. ಆ ತನಿಖಾ ಸಂಸ್ಥೆಯು ಒಂದು ಪಕ್ಷದ ಅಥವಾ ರಾಜಕೀಯ ಉದ್ದೇಶಗಳಿಗೆ ಬಳಕೆಯಾಗಬಾರದಿತ್ತು. ಆದರೆ ಇದೀಗ ಬಳಕೆಯಾಗುತ್ತಿದೆ. ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರಿಗೆ ಹೋಲಿಸಿದರೆ, ಸಿಬಿಐ ಏನೂ ಅಲ್ಲ ಎಂದರು.

ಅಲ್ಲದೆ ನಾವು 2008ರವರೆಗಿನ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿ ಎಂದು ಹೇಳಿಲ್ಲ, 2010ರ ವರೆಗಿನ ಅಕ್ರಮಗಳೆಲ್ಲವನ್ನೂ ತನಿಖೆ ನಡೆಸಿ ಎಂದು ಕರ್ನಾಟಕ ಸರಕಾರ ಲೋಕಾಯುಕ್ತರಿಗೆ ಹೇಳಿದೆ ಎಂದ ಅನಂತ್, ಒಂದು ಹಂತದಲ್ಲಿ ಕರ್ನಾಟಕದ ಈ ಹಿಂದಿನ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಅವರನ್ನು ರಕ್ಷಿಸಿದರು ಎಂದು ಆರೋಪಿಸಿದರು.

ರಫ್ತು ನಿಷೇಧ ಮಸೂದೆ ಬರಲಿ...
ದೇಶೀಯ ಉಪಯೋಗಗಳಿಗಾಗಿ ಮಾತ್ರ ಕಬ್ಬಿಣದ ಅದಿರನ್ನು ತೆಗೆಯಬೇಕು ಮತ್ತು ರಫ್ತು ನಿಷೇಧಿಸಬೇಕೆಂದು ಹಲವು ವರ್ಷಗಳ ಹಿಂದೆಯೇ ನಾನು ಸದಸ್ಯನಾಗಿದ್ದ ಸಮಿತಿಯೊಂದು ಶಿಫಾರಸು ಮಾಡಿತ್ತು. ಈಗಲೂ ಕಾಲ ಮಿಂಚಿಲ್ಲ. ಸ್ಥಳೀಯ ಉಪಯೋಗ ಹೊರತುಪಡಿಸಿ, ಅದಿರು ರಫ್ತಿನ ಮೇಲೆ ನಿಷೇಧ ಹೇರಿ ಎಂದು ಸರಕಾರಕ್ಕೆ ಸಲಹೆ ಮಾಡಿದರು.

ಕೇವಲ ವ್ಯಾಲ್ಯೂ ಎಡಿಷನ್‌ಗೆ ಮಾತ್ರ ಅದಿರು ಗಣಿಗಾರಿಕೆಗೆ ಪರವಾನಗಿ ನೀಡಿ, ರಫ್ತು ನಿಷೇಧಿಸುವ ಮಸೂದೆಯನ್ನು ಯುಪಿಎ ಸರಕಾರ ಸದನದಲ್ಲಿ ಮಂಡಿಸಿದಲ್ಲಿ ಅದನ್ನು ಬಿಜೆಪಿ ಸೇರಿದಂತೆ, ಎಲ್ಲಾ ಪಕ್ಷಗಳೂ ಒಕ್ಕೊರಲಿನಿಂದ ಬೆಂಬಲಿಸಲಿವೆ ಎಂದೂ ಅವರು ಭರವಸೆ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಾಯಕರ ಹೆಸರಿಗೆ ಆಕ್ಷೇಪ...
ಲೋಕಾಯುಕ್ತರು ನೀಡಿರುವ ವರದಿಯನ್ನು ಆಧರಿಸಿ ಅನಂತ್ ಕುಮಾರ್ ಅವರು ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ನಾಯಕರ ಹೆಸರನ್ನು ಹೇಳಲು ಮುಂದಾಗುತ್ತಿದ್ದಂತೆ ಸ್ಪೀಕರ್ ಆಕ್ಷೇಪ ವ್ಯಕ್ತಪಡಿಸಿದರು.

ಬಿಜೆಪಿ ಸಚಿವರು ಮತ್ತು ನಾಯಕರ ವಿರುದ್ಧ ಮಾಡಲಾಗುತ್ತಿರುವ ಅಕ್ರಮ ಗಣಿಗಾರಿಕೆ ಆರೋಪಗಳಿಗೆ ತಿರುಗೇಟು ನೀಡುತ್ತಿದ್ದ ಅವರು, ಲೋಕಾಯುಕ್ತರ ವರದಿಯಲ್ಲಿಲ್ಲ ಹಲವು ಕಾಂಗ್ರೆಸ್ ನಾಯಕರ ಹೆಸರುಗಳನ್ನು ಸದನದಲ್ಲಿ ಹೇಳಲು ಮುಂದಾಗಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್, ಅನುಮತಿಯಿಲ್ಲದೆ ಹಾಗೆ ಹೆಸರನ್ನು ಹೇಳುವಂತಿಲ್ಲ. ನೀವು ಅನುಮತಿ ಪಡೆದುಕೊಂಡು ನಂತರ ಮುಂದುವರಿಯಿರಿ ಎಂದು ತಡೆದರು.

ಸುಗ್ಗಲಮ್ಮ ದೇವಳ ಕೆಡವಿದರು...
ಬಿಜೆಪಿಯವರು ಅಯೋಧ್ಯೆಯಲ್ಲಿ ರಾಮ ಮಂದಿರ ಬೇಕು ಎಂದು ಹೇಳುತ್ತಾರೆ. ಆದರೆ 400 ವರ್ಷಗಳ ಇತಿಹಾಸವಿರುವ ಸುಗ್ಗಲಮ್ಮ ದೇವಸ್ಥಾನವನ್ನು ಗಣಿಗಾರಿಕೆಗಾಗಿ ಕೆಡವಿ ಹಾಕಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆರೋಪಿಸಿದರು.

ಅನಂತ್ ಕುಮಾರ್ ಮಾಡುತ್ತಿದ್ದ ಆರೋಪವನ್ನು ಮೌನವಾಗಿಯೇ ಆಲಿಸಿದ ಗೌಡರು, ತನ್ನ ಸರದಿ ಬಂದಾಗ ಎದ್ದು ನಿಂತು ದಾಖಲೆಗಳ ಮಹಾಪೂರವನ್ನೇ ಸದನದಲ್ಲಿ ಮಂಡಿಸಿದರು. ಈ ಸಂದರ್ಭದಲ್ಲಿ ಹಲವು ಪತ್ರಿಕೆಗಳಲ್ಲಿ ಬಂದಿರುವ ವರದಿಗಳನ್ನು ಕೂಡ ಅವರು ಪ್ರದರ್ಶಿಸಿದರು.

ಅಕ್ರಮ ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ರಾಷ್ಟ್ರೀಯ ಗಣಿ ಪ್ರಾಧಿಕಾರವನ್ನು ತರಲು ಉದ್ದೇಶಿಸಿರುವುದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿ, ಇದು ಕಣ್ಣೊರೆಸುವ ತಂತ್ರವೇ ಹೊರತು ಬೇರೇನಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ