ಹೌದು, ಸತತ ನಾಲ್ಕನೇ ಬಾರಿಯೂ ನರೇಂದ್ರ ಮೋದಿ ನಂಬರ್ ವನ್ ಮುಖ್ಯಮಂತ್ರಿಯಾಗಿ ಹೊರ ಹೊಮ್ಮಿದ್ದಾರೆ. ಅದೂ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ. ಇತ್ತ ಕರ್ನಾಟಕ ಮುಖ್ಯಮಂತ್ರಿಯಾಗಿ ಎರಡು ವರ್ಷ ಪೂರೈಸಿರುವ ಬಿ.ಎಸ್. ಯಡಿಯೂರಪ್ಪನವರೂ ಈ ಬಾರಿ ಸ್ಥಾನ ಪಡೆದುಕೊಂಡಿದ್ದಾರೆ.
'ಇಂಡಿಯಾ ಟುಡೇ' ಆಂಗ್ಲ ನಿಯತಕಾಲಿಕ ನಡೆಸಿರುವ ವಾರ್ಷಿಕ ಸಮೀಕ್ಷೆಯಿದು. ಪ್ರತಿ ವರ್ಷದಂತೆ ಈ ವರ್ಷವೂ ರಾಷ್ಟ್ರವ್ಯಾಪಿ ಸಮೀಕ್ಷೆ ನಡೆಸಿರುವ ಪತ್ರಿಕೆಯು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯೇ ನಂ.1 ಎಂದು ಪ್ರಕಟಿಸಿದೆ.
ಆ ಮೂಲಕ ಮಾಧ್ಯಮಗಳು ಎಷ್ಟೇ ಅಪಪ್ರಚಾರ ಮಾಡಿದರೂ, ಎದುರಾಳಿ ರಾಜಕಾರಣಿಗಳು-ಪಕ್ಷಗಳು ಯಾವುದೇ ಕುಟಿಲ ರೀತಿಯಲ್ಲಿ ರಾಜಕೀಯ ನಡೆಸಿದರೂ, ತನ್ನ ಜನಪ್ರಿಯತೆಯನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಮೋದಿ ಮತ್ತೊಮ್ಮೆ ನಿರೂಪಿಸಿ ತೋರಿಸಿದ್ದಾರೆ.
19 ರಾಜ್ಯಗಳ 98 ಲೋಕಸಭಾ ಕ್ಷೇತ್ರಗಳ 12,392 ವಯಸ್ಕ ಮತದಾರರನ್ನು ಸಂದರ್ಶಿಸಲಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ಎಲ್ಲಾ ವಯೋಮಾನಗಳ ಮತ್ತು ಲಿಂಗ ಭೇದವಿಲ್ಲದೆ ಈ ಸಮೀಕ್ಷೆಯನ್ನು ನಡೆಸಲಾಗಿದೆ ಎಂದು ನಿಯತಕಾಲಿಕ ಹೇಳಿಕೊಂಡಿದೆ.
ನರೇಂದ್ರ ಮೋದಿಯವರ ಜನಪ್ರಿಯತೆ ರೇಟಿಂಗ್ (20) ರಾಷ್ಟ್ರದಲ್ಲಿ ಯಾವ ಪರಿಯಲ್ಲಿದೆ ಎಂದರೆ, ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ (11) ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (9) ಅವರಿಬ್ಬರ ಒಟ್ಟು ಜನಪ್ರಿಯತೆಗಿಂತಲೂ ಹೆಚ್ಚು.
ತಮ್ಮ ಮುಖ್ಯಮಂತ್ರಿಯವರ ಕಾರ್ಯನಿರ್ವಹಣೆ ಹೇಗಿದೆ, ಸರಕಾರದಲ್ಲಿ ಅವರ ಪಾತ್ರ ಹೇಗಿದೆ, ರಾಷ್ಟ್ರಮಟ್ಟದಲ್ಲಿ ನಿರ್ದಿಷ್ಟ ಮುಖ್ಯಮಂತ್ರಿಯೊಬ್ಬರಿಗೆ ಯಾವ್ಯಾವ ಸ್ಥಾನವನ್ನು ನೀಡುತ್ತೀರಿ ಮುಂತಾದ ಪ್ರಶ್ನೆಗಳನ್ನು ಅರ್ಹ ಮತದಾರರಿಗೆ ಕೇಳಲಾಗಿತ್ತು.
ಅದರ ಪ್ರಕಾರ ನರೇಂದ್ರ ಮೋದಿಯವರು ರಾಷ್ಟ್ರಮಟ್ಟ ಹಾಗೂ ರಾಜ್ಯಮಟ್ಟ, ಎರಡರಲ್ಲೂ ನಂ.1 ಮುಖ್ಯಮಂತ್ರಿಯಾಗಿ ಪುನರಾಯ್ಕೆಯಾಗಿದ್ದಾರೆ. ಈ ರೀತಿ ಸತತವಾಗಿ ಎರಡೂ ವಿಭಾಗಗಳಲ್ಲೂ ನಂ.1 ಪಟ್ಟವನ್ನು ಉಳಿಸಿಕೊಂಡಿರುವುದು ಮೂರನೇ ಬಾರಿ ಎಂಬುದು ವಿಶೇಷ.
ಅವರ ನಂತರದ ಸ್ಥಾನ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರದ್ದು. 2009ರ ಸಮೀಕ್ಷೆಯಲ್ಲೂ ಅವರು ಎರಡನೇ ಸ್ಥಾನದಲ್ಲಿದ್ದರು. ಅದಕ್ಕಿಂತ ಹಿಂದಿನ ವರ್ಷ ಅವರ ಸ್ಥಾನ ಐದರಲ್ಲಿತ್ತು. ಆದರೆ ರಾಜ್ಯಮಟ್ಟದಲ್ಲಿ ಇವರ ಬಗ್ಗೆ ಹೆಚ್ಚಿನ ಒಲವು ಕಂಡು ಬಂದಿಲ್ಲ. ಅವರಿಗೆ ದೆಹಲಿಯ ನಾಗರಿಕರು 17ನೇ ಸ್ಥಾನವನ್ನಷ್ಟೇ ನೀಡಿದ್ದಾರೆ.
2008ರಲ್ಲಿ ನಾಲ್ಕನೇ ಸ್ಥಾನ ಹಾಗೂ 2009ರಲ್ಲಿ ಮೂರನೇ ಸ್ಥಾನ ಪಡೆದಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಜನಪ್ರಿಯತೆ ಕಳೆದುಕೊಂಡಿಲ್ಲ. ಬಿಹಾರಿಗಳ ಅಭಿಪ್ರಾಯದಲ್ಲಿ ನಿತೀಶ್ ಏಳನೇ ಸ್ಥಾನ ಪಡೆದಿದ್ದಾರೆ.
ಕಳೆದ ಸಮೀಕ್ಷೆಗಳಲ್ಲಿ ಸ್ಥಾನವನ್ನೇ ಪಡೆದಿರದ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಬಾರಿ 13ನೇ ಸ್ಥಾನಕ್ಕೇರಿದ್ದಾರೆ. ಆದರೆ ರಾಜ್ಯಮಟ್ಟದಲ್ಲಿ ಕನ್ನಡಿಗರನ್ನು ಪ್ರಶ್ನಿಸಿದಾಗ ಅವರಿಗೆ ನೀಡಿರುವ ಸ್ಥಾನ 15ನೇಯದ್ದು. ಹಲವು ವಿವಾದಗಳ ಹೊರತಾಗಿಯೂ ಬಿಜೆಪಿ ಸರಕಾರವನ್ನು ಮುನ್ನಡೆಸುತ್ತಿರುವ ಯಡಿಯೂರಪ್ಪ ಈ ಸ್ಥಾನವನ್ನಾದರೂ ಪಡೆದಿರುವುದು ಪಕ್ಷಕ್ಕೆ ಸಂತಸ ತಂದಿರಬಹುದು.
ಉಳಿದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಯಥಾ ಪ್ರಕಾರವಾಗಿ ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ರಾಜ್ಯ ಮಟ್ಟದಲ್ಲಿ ಅವರು 10ನೇ ಸ್ಥಾನ ಪಡೆದಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ 5 (ರಾಜ್ಯಮಟ್ಟದಲ್ಲಿ 6), ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌಹಾನ್ 6 (ರಾಜ್ಯಮಟ್ಟದಲ್ಲಿ 9), ಆಂಧ್ರಪ್ರದೇಶದ ಕೆ. ರೋಸಯ್ಯ 7 (ರಾಜ್ಯಮಟ್ಟದಲ್ಲಿ 13), ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾನ್ 8 (ರಾಜ್ಯಮಟ್ಟದಲ್ಲಿ 5), ಹರ್ಯಾಣದ ಭೂಪೀಂದರ್ ಸಿಂಗ್ ಹೂಡಾ 9 (ರಾಜ್ಯಮಟ್ಟದಲ್ಲಿ 18), ಒರಿಸ್ಸಾದ ನವೀನ್ ಪಟ್ನಾಯಕ್ 10ನೇ (ರಾಜ್ಯಮಟ್ಟದಲ್ಲಿ 2) ಸ್ಥಾನಗಳಲ್ಲಿದ್ದಾರೆ.
11ನೇ ಸ್ಥಾನದಲ್ಲಿ (ರಾಜ್ಯಮಟ್ಟದಲ್ಲಿ 3) ಅಸ್ಸಾಂನ ತರುಣ್ ಕುಮಾರ್ ಗೊಗೊಯ್, 12ನೇ ಸ್ಥಾನದಲ್ಲಿ (ರಾಜ್ಯಮಟ್ಟದಲ್ಲಿ 4) ಛತ್ತೀಸ್‌ಗಢದ ರಮಣ್ ಸಿಂಗ್, 14ನೇ ಸ್ಥಾನದಲ್ಲಿ (ರಾಜ್ಯಮಟ್ಟದಲ್ಲಿ 11) ಕೇರಳದ ವಿ.ಎಸ್. ಅಚ್ಯುತ್ತಾನಂದನ್, 15ನೇ ಸ್ಥಾನದಲ್ಲಿ (ರಾಜ್ಯಮಟ್ಟದಲ್ಲಿ 12) ಪಂಜಾಬ್‌ನ ಪ್ರಕಾಶ್ ಸಿಂಗ್ ಬಾದಲ್, 16ನೇ ಸ್ಥಾನದಲ್ಲಿ (ರಾಜ್ಯಮಟ್ಟದಲ್ಲಿ 16) ರಾಜಸ್ತಾನದ ಅಶೋಕ್ ಗೆಹ್ಲೋಟ್, 17ನೇ ಸ್ಥಾನದಲ್ಲಿ (ರಾಜ್ಯಮಟ್ಟದಲ್ಲಿ 14) ಪಶ್ಚಿಮ ಬಂಗಾಲದ ಬುದ್ಧದೇವ್ ಭಟ್ಟಾಚಾರ್ಯ ಮತ್ತು 18ನೇ ಸ್ಥಾನದಲ್ಲಿ (ರಾಜ್ಯಮಟ್ಟದಲ್ಲಿ 8) ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಇದ್ದಾರೆ.