ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮತ್ತೆ ಬರುತ್ತಿದೆ ಹಂದಿಜ್ವರ; ಮರೆತುಬಿಟ್ಟೀರಾ ಜೋಕೆ..! (swine flu | Kerala | Karnataka | India)
Bookmark and Share Feedback Print
 
ಕಳೆದ ವರ್ಷ ಇಡೀ ವಿಶ್ವವನ್ನೇ ಹಿಂಡಿ ಹಿಪ್ಪೆ ಮಾಡಿದ್ದ ಹಂದಿಜ್ವರ ಎಂಬ ಮಾರಣಾಂತಿಕ ಸೋಂಕು ಹೊರಟೇ ಹೋಯಿತು ಎಂದು ಕೊಳ್ಳುವಾಗಲೇ ಮತ್ತೆ ವಕ್ಕರಿಸಿದ್ದು, ವಾರವೊಂದರಲ್ಲೇ ತನ್ನ ಬಲಿಯ ಸಂಖ್ಯೆಯನ್ನು ಶತಕದ ಸನಿಹಕ್ಕೆ ಸರಿಸಿದೆ.

ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಕಳೆದ (ಆಗಸ್ಟ್ 2ರಿಂದ 8ರ ನಡುವೆ) ವಾರವೊಂದರಲ್ಲೇ 84 ಮಂದಿ ಹಂದಿಜ್ವರದಿಂದ ಸಾವನ್ನಪ್ಪಿದ್ದಾರೆ ಮತ್ತು 1,155 ಪ್ರಕರಣಗಳು ವರದಿಯಾಗಿವೆ.

ಅತಿ ಕಡಿಮೆ ಬಾಧೆಗೊಳಗಾಗಿರುವ ರಾಜ್ಯ ಕೇರಳ. ಇಲ್ಲಿ ಕೇವಲ 20 ಪ್ರಕರಣಗಳಷ್ಟೇ ವರದಿಯಾಗಿದೆ. ಆದರೆ ಮಹಾರಾಷ್ಟ್ರದಲ್ಲಿ 507 ಹಂದಿಜ್ವರ ಪ್ರಕರಣಗಳು ಖಚಿತವಾಗಿದ್ದು, 51 ಮಂದಿ ಸಾವನ್ನಪ್ಪಿದ್ದಾರೆ.

ಕರ್ನಾಟಕ ಕೂಡ ಅಪಾಯಕಾರಿ ಮಟ್ಟದತ್ತ ಸಾಗುತ್ತಿದೆ. 200 ಪ್ರಕರಣಗಳು ಇಲ್ಲಿ ಆಗಸ್ಟ್ ಮೊದಲ ವಾರದಲ್ಲಿ ದಾಖಲಾಗಿದೆ. ಕನಿಷ್ಠ ಹನ್ನೆರಡು ಮಂದಿ ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲಿ 107 ಪ್ರಕರಣಗಳು ಪತ್ತೆಯಾಗಿವೆ.

ದಕ್ಷಿಣ ಭಾರತ ಮತ್ತು ನೈರುತ್ಯ ರಾಜ್ಯಗಳಿಗೆ ಹರಡಿದ ನಂತರ ಈ ಬಾರಿ ದೆಹಲಿಯತ್ತ ಸೋಂಕು ಹರಡಿದೆ. ಅಷ್ಟರಲ್ಲೇ 125 ಪ್ರಕರಣಗಳನ್ನು ಕಂಡಿರುವ ರಾಜಧಾನಿಯಲ್ಲಿ ಏಳು ಸಾವುಗಳೂ ಸಂಭವಿಸಿವೆ.

ಆಂಧ್ರಪ್ರದೇಶ, ಗೋವಾ, ಗುಜರಾತ್, ಉತ್ತರ ಪ್ರದೇಶ, ಒರಿಸ್ಸಾ, ರಾಜಸ್ತಾನ, ಮಧ್ಯಪ್ರದೇಶ, ಪಶ್ಚಿಮ ಬಂಗಾಲ, ಪಂಜಾಬ್ ಮತ್ತು ಹರ್ಯಾಣಗಳಲ್ಲೂ ಹಂದಿಜ್ವರದ ಪ್ರಕರಣಗಳು ವರದಿಯಾಗಿವೆ.

ಹಂದಿಜ್ವರದಿಂದ ಅತಿಯಾಗಿ ಬಳಲುತ್ತಿರುವವರು ಗರ್ಭಿಣಿ ಮಹಿಳೆಯರು ಮತ್ತು ವೃದ್ಧರು. ಹಾಗಾಗಿ ಈ ಸಾಲಿನಲ್ಲಿ ಬರುವವರು ಜ್ವರದಂತಹ ಲಕ್ಷಣಗಳನ್ನು ಹೊಂದಿದ್ದಲ್ಲಿ ತಕ್ಷಣವೇ ವೈದ್ಯರನ್ನು ಕಾಣಬೇಕು ಎಂದು ಆರೋಗ್ಯ ಸಚಿವಾಲಯವು ಸಲಹೆ ನೀಡಿದೆ.

ಈ ವರ್ಷದ ಏಪ್ರಿಲ್ ತಿಂಗಳಿನಿಂದ ಆಗಸ್ಟ್ ತಿಂಗಳಿನವರೆಗೆ ಮಹಾರಾಷ್ಟ್ರವೊಂದರಲ್ಲೇ 276 ಸಾವುಗಳು ಸಂಭವಿಸಿವೆ. ರಾಜ್ಯದ ಪುಣೆಯಲ್ಲೇ ಅತಿ ಹೆಚ್ಚು ಬಾಧೆ ಮುಂದುವರಿದಿದೆ. ಪುಣೆಯಲ್ಲಿ 135 ಸಾವಿನ ಪ್ರಕರಣಗಳು ಈ ಅವಧಿಯಲ್ಲಿ ನಡೆದಿದೆ ಎಂದು ವರದಿಗಳು ಹೇಳಿವೆ.

ಕಳೆದ ವಾರವಷ್ಟೇ (ಆಗಸ್ಟ್ ಮೊದಲ ವಾರದ) ಸರಕಾರ ಪ್ರಕಟಿಸಿರುವ ಪ್ರಕಾರ ದೇಶದಲ್ಲಿ ಇದುವರೆಗೆ ಹಂದಿಜ್ವರದಿಂದ ಸತ್ತವರ ಸಂಖ್ಯೆ 1833. ಇದರಲ್ಲಿ ಕರ್ನಾಟಕದ ಪಾಲು 198. ಗರಿಷ್ಠ ಸಾವುಗಳನ್ನು ದಾಖಲಿಸಿಕೊಂಡಿರುವುದು ಮಹಾರಾಷ್ಟ್ರ. ಇಲ್ಲಿ 612 ಮಂದಿ ಹಂದಿ ಜ್ವರದಿಂದ ಸಾವನ್ನಪ್ಪಿದ್ದಾರೆ.

ನಂತರದ ಸ್ಥಾನದಲ್ಲಿ ಗುಜರಾತ್ 323, ರಾಜಸ್ತಾನ 198, ಕೇರಳ 114, ದೆಹಲಿ 100, ತಮಿಳುನಾಡು 7, ಆಂಧ್ರಪ್ರದೇಶ 73 ಮಂದಿ ಬಲಿಯಾಗಿದ್ದಾರೆ ಎಂದು ಸರಕಾರ ಹೇಳಿದೆ.

ಇಡೀ ವಿಶ್ವದಲ್ಲಿ ಇದುವರೆಗೆ ಹಂದಿ ಜ್ವರಕ್ಕೆ ಆಹುತಿಯಾದವರ ಸಂಖ್ಯೆ 19,150.
ಸಂಬಂಧಿತ ಮಾಹಿತಿ ಹುಡುಕಿ