ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕ್ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕೊಟ್ಟ ಗೂಗಲ್ (Pakistan occupied Kashmir | Pakistan | Google Insights | India)
Bookmark and Share Feedback Print
 
ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಭಾರತದಿಂದ ಕಿತ್ತು, ಪಾಕಿಸ್ತಾನದ ಭೂಪಟದಲ್ಲಿ ತೋರಿಸುವ ಮೂಲಕ ಜಗತ್ ವಿಖ್ಯಾತ ಸರ್ಚ್ ಇಂಜಿನ್ ಗೂಗಲ್ ಮತ್ತೆ ಪ್ರಮಾದವೆಸಗಿದೆ. 'ಗೂಗಲ್ ಇನ್‌ಸೈಟ್ಸ್' ಎಂಬ ಸರ್ಚ್ ವಿಭಾಗದಲ್ಲಿ ಇಂತಹ ಅಪಭ್ರಂಶವಿರುವುದು ಕಂಡು ಬಂದಿದೆ.

ಪಾಕ್ ಆಕ್ರಮಿತ ಕಾಶ್ಮೀರವು ಪಾಕಿಸ್ತಾನದ ವಶದಲ್ಲಿದ್ದರೂ, ಅಧಿಕೃತವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದು ಭಾರತದ ಭೂಪಟದೊಂದಿಗೆ ಗುರುತಿಸಲ್ಪಡುತ್ತಿದೆ. ಇದನ್ನು ಸ್ವತಃ ಪಾಕಿಸ್ತಾನವೇ ಒಪ್ಪಿಕೊಂಡಿದೆ.
PR

ಆದರೂ ಗೂಗಲ್ ತಪ್ಪೆಸಗಿದೆ. ಇದೇ ಮೊದಲ ಬಾರಿ ಗೂಗಲ್ ಈ ರೀತಿ ನಡೆದುಕೊಳ್ಳುತ್ತಿರುವುದಲ್ಲ. ಈ ಹಿಂದೆ ವೆಬ್‌ಸೈಟ್‌ಗಳ ಅಂಕಿ-ಅಂಶಗಳನ್ನು ವಿವರಿಸುವ ಟೂಲ್ ಆಗಿರುವ 'ಗೂಗಲ್ ಅನಾಲಿಟಿಕ್ಸ್' ವಿಭಾಗವು ಕೂಡ ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನದ ಭಾಗವೆಂದು ಬಿಂಬಿಸಿತ್ತು.

ಅಲ್ಲದೆ 2005ರಲ್ಲಿ 'ಗೂಗಲ್ ಅರ್ಥ್' ಕೂಡ ಇದೇ ಕಾರಣಕ್ಕೆ ಸುದ್ದಿಯಾಗಿತ್ತು. ಉಪಖಂಡದ ರಾಜಕೀಯ ನಕ್ಷೆಯಲ್ಲಿ ಅದು ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಿ, ಪಾಕಿಸ್ತಾನದ ನಕ್ಷೆಗೆ ಅಂಟಿಸಿತ್ತು.

ಇದು ಪಿಒಕೆ ಮತ್ತು ಪಾಕಿಸ್ತಾನಕ್ಕೆ ಮಾತ್ರ ಸೀಮಿತವಲ್ಲ. ವರ್ಷದ ಹಿಂದೆ ಗೂಗಲ್‌ನ ಸ್ಯಾಟಲೈಟ್ ಮ್ಯಾಪುಗಳಲ್ಲಿ ಅರುಣಾಚಲ ಪ್ರದೇಶವನ್ನು ಚೀನಾಕ್ಕೆ ಸೇರಿಸಿ ನಗೆಪಾಟಲಿಗೀಡಾಗಿತ್ತು. ಬಳಿಕ ವಿಷಾದ ವ್ಯಕ್ತಪಡಿಸಿದ್ದ ಸೈಟ್, ತಪ್ಪನ್ನು ಸರಿಪಡಿಸಿಕೊಂಡಿತ್ತು.

ಭಾರತೀಯ ಸರ್ವೇಕ್ಷಣಾ ಇಲಾಖೆಯು ಪ್ರಕಟಿಸುವ ನಕಾಶೆಯನ್ನು ಉಲ್ಲಂಘಿಸಿ ಗೂಗಲ್ ತನ್ನದೇ ಆದ ನಕ್ಷೆಗಳನ್ನು ಪ್ರಕಟಿಸುತ್ತಿರುವುದು ಸ್ಪಷ್ಟ. ಈ ಕುರಿತು ಪ್ರತಿಕ್ರಿಯೆ ನೀಡಿರುವ 'ಸರ್ವೇ ಆಫ್ ಇಂಡಿಯಾ', ಭಾರತದ ನಕ್ಷೆಯಲ್ಲಿ 1947ರ ನಂತರ ಯಾವುದೇ ಬದಲಾವಣೆಗಳಾಗಿಲ್ಲ; ಹಾಗೊಂದು ವೇಳೆ ಯಾವುದಾದರೂ ಅಂತರ್ಜಾಲ ತಾಣವು ಭಾರತದ ನಕ್ಷೆಯನ್ನು ವಿರೂಪಗೊಳಿಸಿರುವುದು ನಮ್ಮ ಗಮನಕ್ಕೆ ಬಂದಲ್ಲಿ, ಸೂಕ್ತ ಕ್ರಮವನ್ನು ಅವರ ವಿರುದ್ಧ ತೆಗೆದುಕೊಳ್ಳಲಾಗುತ್ತದೆ ಎಂದಿದೆ.

ಈ ಕುರಿತು ಪತ್ರಿಕೆಯೊಂದು ಗೂಗಲ್ ಇಂಡಿಯಾ ಕಚೇರಿಯನ್ನು ಸಂಪರ್ಕಿಸಿದಾಗ, ನಾವು ಈ ವಿಚಾರವನ್ನು ಪರಿಶೀಲನೆ ನಡೆಸುತ್ತೇವೆ ಮತ್ತು ಸಂಬಂಧಪಟ್ಟ ವಿಭಾಗಕ್ಕೆ ಸೂಕ್ತ ಸೂಚನೆಯನ್ನು ನೀಡುತ್ತೇವೆ ಎಂದಿದೆ.

ಪಾಕ್ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನದ ಭಾಗವೆಂದು ಗೂಗಲ್ ತೋರಿಸಿರುವುದು ತಪ್ಪು ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯ ಕಾರ್ಯದರ್ಶಿ ವಿಜಯ್ ಬಾಕಾಯಾ ತಿಳಿಸಿದ್ದಾರೆ.

ಗೂಗಲ್‌ಗೆ ಪಿಒಕೆಯನ್ನು ಭಾರತದ ಭಾಗವೆಂದು ತೋರಿಸುವುದು ಇಷ್ಟವಿಲ್ಲದೇ ಇದ್ದರೆ, ಅದನ್ನು ವಿವಾದಿತ ಭೂ ಪ್ರದೇಶ ಎಂದು ತೋರಿಸಲಿ. ಅದು ಬಿಟ್ಟು ಪಾಕಿಸ್ತಾನದ ಭಾಗವೆಂದು ತೋರಿಸುವುದು ಸರಿಯಲ್ಲ. ಪಾಕ್ ಆಕ್ರಮಿತ ಕಾಶ್ಮೀರವು ಪಾಕಿಸ್ತಾನದ ಭಾಗವೆಂದು ಸ್ವತಃ ಪಾಕಿಸ್ತಾನದ ಸಂವಿಧಾನವೇ ಅಂಗೀಕರಿಸಿಲ್ಲ. ಅಲ್ಲದೆ ಜಮ್ಮು-ಕಾಶ್ಮೀರ ವಿಧಾನಸಭೆಯ ಪಿಒಕೆಗಾಗಿ 25 ವಿಧಾನಸಭಾ ಕ್ಷೇತ್ರಗಳನ್ನು ಮೀಸಲಿಟ್ಟಿದೆ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ