ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿಗೆ ಸಿಬಿಐ ಕ್ಲೀನ್ ಚಿಟ್; ಕಾಂಗ್ರೆಸ್-ಬಿಜೆಪಿ ರಾಜಿ? (Congress | BJP | Nuclear liability bill | Narendra Modi)
Bookmark and Share Feedback Print
 
ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಪಾಲ್ಗೊಂಡಿರುವ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಸಿಬಿಐ ಹೇಳಿಕೆ ನೀಡಿದ ಬೆನ್ನಿಗೆ ಲೋಕಸಭೆಯಲ್ಲಿ ಕೋಲಾಹಲ ಉಂಟಾಗಿದೆ.

ಬೆಲೆಯೇರಿಕೆ ದಾಳಿಯಿಂದ ಪಾರಾಗುವುದು ಮತ್ತು ಪರಮಾಣು ಬಾಧ್ಯತಾ ಮಸೂದೆಯನ್ನು ಅಂಗೀಕರಿಸುವ ನಿಟ್ಟಿನಲ್ಲಿ ಯುಪಿಎ ಸರಕಾರವು ಬಿಜೆಪಿ ಜತೆ ಒಪ್ಪಂದ ಮಾಡಿಕೊಂಡಿರುವುದರ ಫಲಿತಾಂಶವಿದು ಎಂದು ಕಾಂಗ್ರೆಸ್-ಬಿಜೆಪಿಯೇತರ ಪಕ್ಷಗಳು ಆರೋಪಿಸಿವೆ.

ಮೋದಿಗೆ ಸಿಬಿಐ ಕ್ಲೀನ್ ಚಿಟ್...
ಲಷ್ಕರ್ ಉಗ್ರ ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣದಲ್ಲಿ ಗುಜರಾತ್ ಮಾಜಿ ಗೃಹಸಚಿವ ಅಮಿತ್ ಶಾ ಅವರನ್ನು ಬಂಧಿಸಿದ ನಂತರ ನರೇಂದ್ರ ಮೋದಿಯವರನ್ನೂ ವಿಚಾರಣೆ ನಡೆಸುವ ಇಂಗಿತ ವ್ಯಕ್ತಪಡಿಸಿದ್ದ ಸಿಬಿಐ ಮಹತ್ವದ ಬೆಳವಣಿಗೆಯೊಂದರಲ್ಲಿ ಗುಜರಾತ್ ಮುಖ್ಯಮಂತ್ರಿಗೆ ಕ್ಲೀನ್ ಚಿಟ್ ನೀಡಿದೆ.

2005ರಲ್ಲಿ ನಡೆದಿದ್ದ ಎನ್‌ಕೌಂಟರ್ ಪ್ರಕರಣದಲ್ಲಿ ಮೋದಿಯವರ ಪಾತ್ರದ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಟ್ ಅಧಿಕಾರಿಗಳನ್ನು ಮೋದಿ ವರ್ಗ ಮಾಡಿಸಿದ್ದರು ಎಂಬುದನ್ನು ಯಾರು ಕೂಡ ಪ್ರಶ್ನಿಸದೇ ಇರುವುದರಿಂದ ಮತ್ತು ಅವರ ವಿರುದ್ಧ ಹೇಳಿಕೆ ನೀಡದೇ ಇರುವುದರಿಂದ ಅವರನ್ನು ಈ ಕುರಿತು ವಿಚಾರಣೆ ನಡೆಸುವುದು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಗದ್ದಲ...
ಸೊಹ್ರಾಬುದ್ದೀನ್ ಪ್ರಕರಣದಲ್ಲಿ ನರೇಂದ್ರ ಮೋದಿಯವರನ್ನು ಬಚಾವ್ ಮಾಡುವ ಸಲುವಾಗಿ ಕಾಂಗ್ರೆಸ್ ಮತ್ತು ಬಿಜೆಪಿಗಳು ಒಪ್ಪಂದ ಮಾಡಿಕೊಂಡಿವೆ ಎಂದು ರಾಷ್ಟ್ರೀಯ ಜನತಾದಳ (ಆರ್‌‌ಜೆಡಿ) ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ಸಂಸದರು ಆರೋಪಿಸಿ ಲೋಕಸಭೆಯಲ್ಲಿ ಕೋಲಾಹಲ ಸೃಷ್ಟಿಸಿದ್ದಾರೆ.

ಎನ್‌ಕೌಂಟರ್ ಪ್ರಕರಣದಲ್ಲಿ ಮೋದಿಯವರನ್ನು ರಕ್ಷಿಸುವ ಸಲುವಾಗಿ ಬೆಲೆಯೇರಿಕೆ ವಿವಾದವನ್ನು ತಣ್ಣಗಾಗಿಸುವುದು ಮತ್ತು ಪರಮಾಣು ಬಾಧ್ಯತಾ ಮಸೂದೆಯನ್ನು ಅಂಗೀಕರಿಸುವ ಒಪ್ಪಂದ ಆಡಳಿತ ಪಕ್ಷ ಮತ್ತು ಬಿಜೆಪಿ ನಡುವೆ ನಡೆದಿದೆ ಎಂದು ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಮತ್ತು ಆರ್‍ಜೆಡಿಯ ಲಾಲೂ ಪ್ರಸಾದ್ ಯಾದವ್ ಆರೋಪಿಸಿದ್ದಾರೆ.

ಸೊಹ್ರಾಬುದ್ದೀನ್ ಪ್ರಕರಣದಲ್ಲಿ ಮೋದಿಯವರ ಒಪ್ಪಿಗೆಯಿಲ್ಲದೆ ಯಾವುದೇ ನಿರ್ಧಾರಗಳನ್ನೂ ಅಮಿತ್ ಶಾ ಅವರು ಸ್ವತಂತ್ರವಾಗಿ ಕೈಗೊಂಡಿರುವ ಸಾಧ್ಯತೆಗಳಿಲ್ಲ. ಆದರೂ ಸಣ್ಣ ಮೀನು ಶಾ ಅವರನ್ನು ಮಾತ್ರ ಸಿಬಿಐ ವಿಚಾರಣೆ ನಡೆಸಿದೆ. ಶಾರ್ಕ್‌ಗಳನ್ನು ಸುಮ್ಮನೆ ಬಿಟ್ಟು ಬಿಡಲಾಗಿದೆ ಎಂದು ಲಾಲೂ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.

ಬೆಲೆಯೇರಿಕೆ ವಿಚಾರದಲ್ಲಿ ಆರಂಭದಿಂದಲೂ ಹೋರಾಟ ಮಾಡುತ್ತಾ ಬಂದಿದ್ದ ಮತ್ತು ಪರಮಾಣು ಬಾಧ್ಯತಾ ಮಸೂದೆಯು ದೇಶಕ್ಕೆ ಆಪತ್ತು ತರುವಂತಹ ಅಪಾಯಕಾರಿ ಕಾಯ್ದೆ ಎಂದಿದ್ದ ಬಿಜೆಪಿಯು ಇದೀಗ ತಣ್ಣಗಾಗಿರುವುದು ಹಾಗೂ ಈ ವಿಚಾರಗಳಲ್ಲಿ ಸರಕಾರವನ್ನು ಬೆಂಬಲಿಸಲು ನಿರ್ಧರಿಸಿರುವುದರ ಹಿಂದೆ ಒಪ್ಪಂದವೊಂದು ನಡೆದಿದೆ ಎನ್ನುವುದು ಕಾಂಗ್ರೆಸ್-ಬಿಜೆಪಿಯೇತರ ಪ್ರತಿಪಕ್ಷಗಳ ಆರೋಪ.

ಸ್ಪೀಕರ್ ಮೀರಾ ಕುಮಾರ್ ಅವರು ಎಷ್ಟೇ ಮನವಿ ಮಾಡಿಕೊಂಡರೂ ಸಂಸದರು ಆಸೀನರಾಗದೆ, ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದುದರಿಂದ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.

ಕಲಾಪದ ನಂತರ ಸಂಸತ್ತಿನ ಹೊರಗಡೆ ಮಾತನಾಡುತ್ತಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ, ತಾನು ಹಾಗೂ ತನ್ನ ಪಕ್ಷವು ಈ ವಿಚಾರದ ಕುರಿತು ಲೋಕಸಭೆ ಮತ್ತು ಸಂಸತ್ತಿನ ಹೊರಗಡೆ ಧರಣಿಯನ್ನು ಮುಂದುವರಿಸಲಿದೆ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ