ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಿಂದೂ ದೇವರ ಬೆತ್ತಲೆ ಚಿತ್ರ ವಿರೋಧಕ್ಕೆ ಕಾರ್ನಾಡ್ ಕಿಡಿ (Girish Karnad | Goa | Sanskrit | Jose Pereira)
Bookmark and Share Feedback Print
 
ಹಿಂದೂ ದೇವತೆಗಳ ಬೆತ್ತಲೆ ಚಿತ್ರ ಬಿಡಿಸಿದ್ದ ಆರೋಪ ಹೊತ್ತಿರುವ ಕಲಾವಿದ ಜೋಸ್ ಪಿರೇರಾ ವಿರುದ್ಧ ಹಿಂದೂ ಸಂಘಟನೆಗಳು ಪ್ರತಿರೋಧ ವ್ಯಕ್ತಪಡಿಸಿದ್ದಕ್ಕೆ ಗೋವಾ ಸರಕಾರ ಮೌನವಾಗಿದ್ದುದನ್ನು ವಿರೋಧಿಸಿರುವ ಖ್ಯಾತ ರಂಗಕರ್ಮಿ ಹಾಗೂ ನಿರ್ದೇಶಕ ಗಿರೀಶ್ ಕಾರ್ನಾಡ್, ಸ್ವರ್ಣ ಮಹೋತ್ಸವ ಅಭಿವೃದ್ಧಿ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಸಂಸ್ಕೃತ ವಿದ್ವಾಂಸ ಮತ್ತು ಕಲಾವಿದ, ಅಮೆರಿಕಾ ಮೂಲದ ಜೋಸ್ ಪಿರೇರಾ ಅವರ ಕಲಾಕೃತಿಗಳನ್ನು ಪ್ರದರ್ಶಿಸಲು ಅವಕಾಶ ನೀಡಬಾರದೆಂಬ ಹಿಂದೂ ಸಂಘಟನೆಗಳ ಒತ್ತಡಕ್ಕೆ ಗೋವಾ ಸರಕಾರವು ಮಣಿದಿತ್ತು.
PR

ಈ ಸಂಬಂಧ ಗೋವಾ ಮುಖ್ಯಮಂತ್ರಿ ದಿಗಂಬರ ಕಾಮತ್ ಅವರಿಗೆ ಪತ್ರವೊಂದನ್ನು ಬರೆದಿರುವ ಕಾರ್ನಾಡ್, ಮೇರು ಕಲಾವಿದ ಹಾಗೂ ವಿದ್ವಾಂಸರಾಗಿರುವ ಜೋಸ್ ಪಿರೇರಾ ಅವರ ಕಲಾಕೃತಿಗಳ ಮೇಲೆ ಹಿಂದೂ ಸಂಸ್ಕೃತಿಯ ಸ್ವಘೋಷಿತ ರಕ್ಷಕರು ದಾಳಿ ನಡೆಸಿರುವುದು ನನಗೆ ಆಘಾತ ತಂದಿದೆ ಎಂದಿದ್ದಾರೆ.

ವಿಜ್ಞಾನಿ ಡಾ. ರಘುನಾಥ್ ಮಶೇಲ್ಕರ್ ನೇತೃತ್ವದ ಸ್ವರ್ಣ ಮಹೋತ್ಸವ ಅಭಿವೃದ್ಧಿ ಪರಿಷತ್ ಎಂಬ ಉನ್ನತ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದ ಕಾರ್ನಾಡ್, ಕಲಾವಿದನೊಬ್ಬನ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದಿರುವ ದಾಳಿಯ ಕುರಿತು ಸರಕಾರದ ಮೌನ ಗಾಬರಿ ತಂದಿದೆ ಎಂದು ತನ್ನ ಪತ್ರದಲ್ಲಿ ತಿಳಿಸಿದ್ದಾರೆ.

ನೈತಿಕ ಗುಂಪುಗಳು ಈ ರೀತಿ ಕಾನೂನನ್ನು ಕೈಗೆತ್ತಿಕೊಳ್ಳುವಾಗ ರಾಜ್ಯ ಸರಕಾರವು ಸುಮ್ಮನೆ ಕುಳಿತಿರುವುದು ಮತ್ತು ಪೊಲೀಸರು ಪಿರೇರಾ ಅವರ ಕಲಾಕೃತಿಗಳಿಗೆ ರಕ್ಷಣೆ ಒದಗಿಸಲು ವಿಫಲರಾಗಿರುವುದು ನನಗೆ ಭೀತಿ ತಂದಿದೆ. ನಾನು ಆಚರಿಸಬೇಕೆಂದುಕೊಂಡಿದ್ದ ಸಂಸ್ಕೃತಿಯಲ್ಲಿನ ಸ್ವತಂತ್ರತೆಯು ನನಗೆ ಕಂಡು ಬರುತ್ತಿಲ್ಲವಾದ್ದರಿಂದ ನಾನು ಉನ್ನತ ಮಟ್ಟದ ಸಮಿತಿಯಿಂದ ಹಿಂದಕ್ಕೆ ಸರಿಯುತ್ತಿದ್ದೇನೆ ಎಂದಿದ್ದಾರೆ.

ಮೂರು ಬೆತ್ತಲೆ ಚಿತ್ರಗಳಿದ್ದವು...
ಗೋವಾದ ಪೊರ್ವೊರಿಮ್ ಎಂಬಲ್ಲಿನ ಕ್ಸೇವಿಯರ್ ರಿಸರ್ಚ್ ಇನ್ಸ್‌ಟಿಟ್ಯೂಟ್‌ನಲ್ಲಿ ಜೋಸ್ ಪಿರೇರಾ ಅವರ ಕಲಾಕೃತಿಗಳ ಪ್ರದರ್ಶನದಲ್ಲಿ ಈ ವಿವಾದಿತ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿತ್ತು.

ಶಿವ, ಕೃಷ್ಣ ಸೇರಿದಂತೆ ಮೂರು ಹಿಂದೂ ದೇವತೆಗಳ ನಗ್ನ ಚಿತ್ರಗಳನ್ನು ಬಿಡಿಸಿದ್ದ ಪಿರೇರಾ, ಇದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಪ್ರದರ್ಶನಕ್ಕೆ ಮುಂದಾಗಿದ್ದರು. ಆದರೆ ಇದನ್ನು ಹಿಂದೂ ಜನಜಾಗೃತಿ ಸಮಿತಿ ತೀವ್ರವಾಗಿ ವಿರೋಧಿಸಿತ್ತು.

ಹಲವು ಹಿಂದೂ ಸಂಘಟನೆಗಳು ಈ ಸಂಬಂಧ ಸಂಬಂಧಪಟ್ಟವರ ಗಮನ ಸೆಳೆದು, ಪೊಲೀಸರಿಗೂ ದೂರು ನೀಡಿದ್ದರು. ಅದರಂತೆ ಕೋಮು ಸೌಹಾರ್ದತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಿವಾದಿತ ಕಲಾಕೃತಿಗಳನ್ನು ಪ್ರದರ್ಶಿಸದಂತೆ ಪೊಲೀಸರು ಸೂಚನೆ ನೀಡಿದ್ದರು.

ಆರು ಬೆತ್ತಲೆ ಕನ್ಯಾಮಣಿಯರ ಜತೆ ಬೆತ್ತಲೆಯಾಗಿ ನರ್ತಿಸುವ ಶಿವ, ಹಲವು ಯುವತಿಯರ ಜತೆ ಲೈಂಗಿಕ ಪರಾಕಾಷ್ಠೆಯಲ್ಲಿರುವ ಕೃಷ್ಣನ ಚಿತ್ರಗಳನ್ನು ಬಿಡಿಸಿದ್ದ ಪಿರೇರಾ, ಇದಕ್ಕೆ ಹಿಂದೂ ಪುರಾಣಗಳನ್ನು ಉದಾಹರಿಸಿ ಸಮರ್ಥಿಸಿಕೊಂಡಿದ್ದರು. ಆ ಮೂಲಕ ಮತ್ತೊಬ್ಬ ಎಂ.ಎಫ್. ಹುಸೇನ್ ಆಗಲು ಹೊರಟಿದ್ದರು ಎಂದು ವರದಿಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ