ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭೋಪಾಲ್ ದುರಂತ; ಭಾರತಕ್ಕೆ ಅಮೆರಿಕಾ ಬ್ಲ್ಯಾಕ್‌ಮೇಲ್? (America | Bhopal Gas tragedy | DOW Chemicals | Montek Singh Ahluwalia)
Bookmark and Share Feedback Print
 
ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗೆ ನೂರಾರು ಕೋಟಿ ರೂಪಾಯಿಗಳನ್ನು ಪರಿಹಾರ ರೂಪದಲ್ಲಿ ನೀಡುವ ಸಲುವಾಗಿ ಯೂನಿಯನ್ ಕಾರ್ಬೈಡ್ ಹೊಸ ರೂಪ 'ಡೋ ಕೆಮಿಕಲ್ಸ್'ನಿಂದ ಭಾರತವು ಹೆಚ್ಚುವರಿ ಪರಿಹಾರ ಪಡೆಯುವ ಯತ್ನಕ್ಕೆ ಕೈ ಹಾಕಿರುವಂತೆಯೇ ಅತ್ತ ಅಮೆರಿಕಾವು ಭಾರತವನ್ನು ಬ್ಲ್ಯಾಕ್‌ಮೇಲ್ ಮಾಡಿರುವ ಅಂಶ ಬೆಳಕಿಗೆ ಬಂದಿದೆ.

ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗೆ ವಿತರಿಸಲೆಂದು 1,500 ಕೋಟಿ ರೂಪಾಯಿಗಳ ಹೆಚ್ಚುವರಿ ಪರಿಹಾರವನ್ನು ಡೋ ಕೆಮಿಕಲ್ಸ್‌ನಿಂದ ಪಡೆಯುವ ಸಂಬಂಧ ಭಾರತ ಯೋಜನೆ ರೂಪಿಸುತ್ತಿರುವ ಸಂದರ್ಭದಲ್ಲಿ ಅಮೆರಿಕಾ ತನ್ನ ತಂತ್ರಗಾರಿಕೆ ಬಳಸಿದೆ.

ವಿಶ್ವಬ್ಯಾಂಕ್ ಆರ್ಥಿಕ ಸಹಕಾರದಲ್ಲಿ ಭಾರತವನ್ನು ಬೆಂಬಲಿಸಬೇಕು ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು ಕಳೆದ ತಿಂಗಳು ಅಮೆರಿಕಾದ ರಾಷ್ಟ್ರೀಯ ಭದ್ರತಾ ಉಪ ಸಲಹೆಗಾರ ಹಾಗೂ ಭಾರತ-ಅಮೆರಿಕಾ ಆರ್ಥಿಕ ಮಾತುಕತೆ ವೇದಿಕೆಯ ಮುಖ್ಯಸ್ಥ ಮೈಕೆಲ್ ಫ್ರಾಮನ್ ಅವರಿಗೆ ಇ-ಮೇಲ್ ಮಾಡಿದ್ದರು.

ಇದಕ್ಕೆ ಜುಲೈ 30ರಂದು ಪ್ರತಿಕ್ರಿಯೆ ನೀಡಿದ್ದ ಫ್ರಾಮನ್, ಈ ವಿಚಾರ ನನ್ನ ಗಮನದಲ್ಲಿದೆ; ಆದರೆ ನಿಮ್ಮಲ್ಲಿ ಡೋ ಕೆಮಿಕಲ್ಸ್ ಬಗ್ಗೆ ಸಾಕಷ್ಟು ಕಳವಳಗಳು ವ್ಯಕ್ತವಾಗುತ್ತಿವೆ. ನಮ್ಮ ಹೂಡಿಕೆಯ ಸಂಬಂಧಗಳ ಮೇಲೆ ಇದರ ದುಷ್ಪರಿಣಾಮ ಬೀರದು ಎಂದು ನಾವು ನಂಬಿಕೊಂಡಿದ್ದೇವೆ ಎಂದು ಪರೋಕ್ಷವಾಗಿ ಭಾರತಕ್ಕೆ ಎಚ್ಚರಿಕೆ ನೀಡಿದ್ದರು.

'ವಿಶ್ವಬ್ಯಾಂಕ್ ಕುರಿತ ವಿಚಾರ ನಮ್ಮ ಗಮನದಲ್ಲಿದೆ. ಆದರೆ ಅದೇ ಹೊತ್ತಿಗೆ ಡೋ ಕೆಮಿಕಲ್ಸ್ ವಿಚಾರದ ಬಗ್ಗೆ ನಾನು ಸಾಕಷ್ಟು ತಕರಾರುಗಳನ್ನು ಕೇಳುತ್ತಿದ್ದೇನೆ. ನೀವಿದನ್ನು ಜಾಗರೂಕತೆಯಿಂದ ಗಮನಿಸುತ್ತಿದ್ದೀರಿ ಎಂದು ನಂಬಿದ್ದೇನೆ. ಈ ಕುರಿತು ಹೆಚ್ಚಿನ ವಿವರಗಳನ್ನು ನೀಡಲು ಹೋಗುತ್ತಿಲ್ಲ. ಆದರೆ ನಮ್ಮ ಹೂಡಿಕೆ ಸಂಬಂಧದ ಮೇಲೆ ದುಷ್ಪರಿಣಾಮ ಬೀರುವ ಬೆಳವಣಿಗೆಗಳನ್ನು ನಾವು ತಪ್ಪಿಸಬೇಕು ಎಂದು ನಾನು ಬಯಸುತ್ತಿದ್ದೇನೆ' ಎಂದು ಎಚ್ಚರಿಕೆ ನೀಡಲಾಗಿತ್ತು.

ಸಂತ್ರಸ್ತರಿಗೆ 470 ಮಿಲಿಯನ್ ಡಾಲರ್ ಪರಿಹಾರ ನೀಡುವ ಬಗ್ಗೆ ಯೂನಿಯನ್ ಕಾರ್ಬೈಡ್ ಕಂಪನಿಯ ಜತೆ 1989ರಲ್ಲಿ ಸರಕಾರ ಒಪ್ಪಂದವೊಂದಕ್ಕೆ ಬಂದಿರುವುದಕ್ಕೆ ಸುಪ್ರೀಂ ಕೋರ್ಟ್ ಅಸ್ತು ಎಂದಿತ್ತು. ಆದರೆ ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಲು ಭಾರತ ಇದೀಗ ತಯಾರಿ ನಡೆಸುತ್ತಿದೆ. ಇನ್ನಷ್ಟು ಪರಿಹಾರಕ್ಕಾಗಿ ಬೇಡಿಕೆ ಮುಂದಿಡುವುದೇ ಭಾರತದ ಯೋಜನೆ.

ಆದರೆ ಅತ್ತ ಡೋ ಕೆಮಿಕಲ್ಸ್ ಬೇರೆಯೇ ರೀತಿಯಲ್ಲಿ ವಾದಿಸುತ್ತಿದೆ. ಭೋಪಾಲ್ ಅನಿಲ ದುರಂತಕ್ಕೂ ತನಗೂ ಯಾವುದೇ ಸಂಬಂಧವಿಲ್ಲ. ದುರಂತ ನಡೆದ ನಂತರ ಯೂನಿಯನ್ ಕಾರ್ಬೈಡ್ ಕಂಪನಿಯನ್ನು 'ಎವೆರಿಡೆ' ಎಂಬ ಕಂಪನಿ ಖರೀದಿಸಿತ್ತು. ನಂತರವಷ್ಟೇ ತಾನು ಖರೀದಿ ಮಾಡಿದ್ದೇನೆ. ಹಾಗಾಗಿ ದುರಂತದ ಹಣಕಾಸು ಪರಿಹಾರ ಜವಾಬ್ದಾರಿ ತನ್ನದಲ್ಲ ಎನ್ನುತ್ತಿದೆ.

ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಹ್ಲುವಾಲಿಯಾ, ತಾನು ಅಮೆರಿಕಾದ ಜತೆ ಇಂತಹ ಪತ್ರ ವ್ಯವಹಾರ ನಡೆಸಿರುವುದು ನೆನಪಿಲ್ಲ ಎಂದಷ್ಟೇ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ