ದೇಶದ ಶ್ರೀಮಂತ ಪಕ್ಷ ಕಾಂಗ್ರೆಸ್, 2ನೇ ಸ್ಥಾನದಲ್ಲಿ ಬಿಜೆಪಿ
ನವದೆಹಲಿ, ಗುರುವಾರ, 19 ಆಗಸ್ಟ್ 2010( 11:24 IST )
ಭಾರತದ ಅತಿ ಹಿರಿಯ ಪಕ್ಷ ಯಾವುದು ಎಂದಾಗ ತಟ್ಟನೆ ಬರುವ ಉತ್ತರ 'ಕಾಂಗ್ರೆಸ್'. ಕಾಂಚಾಣದಿಂದ ಮುಳುಗೇಳುತ್ತಿರುವ ಪಕ್ಷ ಯಾವುದೆಂಬ ಪ್ರಶ್ನೆಗೂ ಇದೇ ಉತ್ತರ. ನಂತರದ ಸ್ಥಾನದಲ್ಲಿ ಕೇಸರಿ ಪಕ್ಷ ಹಾಗೂ ಮೂರನೇ ಸ್ಥಾನದಲ್ಲಿ ಮಾಯಾವತಿಯವರ ಬಿಎಸ್‌ಪಿಯಿದೆ.
ಕಳೆದ ಆರು ವರ್ಷಗಳಿಂದ ಕೇಂದ್ರದಲ್ಲಿ ಆಡಳಿತದ ಸವಿ ಅನುಭವಿಸುತ್ತಿರುವ ಕಾಂಗ್ರೆಸ್‌ನ 2009-10ರ ಸಾಲಿನ ಆದಾಯ 497 ಕೋಟಿ ರೂಪಾಯಿಗಳು. ಇದರೊಂದಿಗೆ 2002ರಿಂದ 2009ರ ನಡುವೆ ಕಾಂಗ್ರೆಸ್‌ನ ಆದಾಯ 1,518 ಕೋಟಿ ರೂಪಾಯಿಗಳಿಗೆ ಏರಿಕೆ ಕಂಡಿದೆ. ಜತೆಗೆ ಆಸ್ತಿಯಲ್ಲೂ ಶೇ.42ರ ಹೆಚ್ಚಳವಾಗಿದೆ. 2002-03ರ ಅವಧಿಯಲ್ಲಿ ಕಾಂಗ್ರೆಸ್ಸಿಗಿದ್ದ ವಾರ್ಷಿಕ ಆದಾಯ 69.56 ಕೋಟಿ ರೂಪಾಯಿಗಳು!
ಪ್ರಮುಖ ಪ್ರತಿಪಕ್ಷ ಬಿಜೆಪಿಯ 2009-10ರ ಆದಾಯ 220 ಕೋಟಿ ರೂಪಾಯಿಗಳು. ಪ್ರಸಕ್ತ ಕೇಸರಿ ಪಕ್ಷದ ಒಟ್ಟು ಆದಾಯ 754 ಕೋಟಿ ರೂಪಾಯಿಗಳು. ಈ ಪಕ್ಷ ಹೊಂದಿರುವ ಆಸ್ತಿಯ ಮೌಲ್ಯ ಕೂಡ 81.41 ಕೋಟಿ ರೂಪಾಯಿಗಳಿಂದ 261 ಕೋಟಿ ರೂಪಾಯಿಗಳಿಗೆ ಏರಿಕೆ ಕಂಡಿದೆ.
2002-03ರಲ್ಲಿ ಕೇವಲ ಆರು ಕೋಟಿ ರೂಪಾಯಿಗಳ ವಾರ್ಷಿಕ ಆದಾಯ ಹೊಂದಿದ್ದ ಬಿಎಸ್‌ಪಿ 2009-10ರ ಹೊತ್ತಿಗೆ ವಾರ್ಷಿಕ ಆದಾಯವನ್ನು 182 ಕೋಟಿ ರೂಪಾಯಿಗಳಿಗೆ ಏರಿಸಿಕೊಳ್ಳುವಲ್ಲಿ ಸಫಲವಾಗಿದೆ. ಪ್ರಸಕ್ತ ಬಿಎಸ್‌ಪಿ ಹೊಂದಿರುವ ಒಟ್ಟು ಆದಾಯ 358 ಕೋಟಿ ರೂಪಾಯಿಗಳು.
ಕೇವಲ ಉತ್ತರ ಪ್ರದೇಶದಲ್ಲಿ ಮಾತ್ರ ಅಧಿಕಾರದಲ್ಲಿರುವ ದಲಿತರ ಪಕ್ಷ ಎಂದು ಬಿಂಬಿತವಾಗಿರುವ ಮಾಯಾವತಿಯವರ ಪಕ್ಷವು ಇಷ್ಟೊಂದು ಆದಾಯವನ್ನು ಗಳಿಸಿದ್ದಾದರೂ ಹೇಗೆ ಎಂಬುದು ಅಚ್ಚರಿಗೆ ಕಾರಣವಾಗಿದೆ.
ಉಳಿದಂತೆ ಇತರ ಪಕ್ಷಗಳತ್ತ ಗಮನ ಹರಿಸಿದರೆ, 2009-10ರ ಸಾಲಿನಲ್ಲಿ ಸಿಪಿಐ ಆದಾಯ ಒಂದು ಕೋಟಿ ರೂಪಾಯಿ, ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾದಳದ (ಆರ್‌ಜೆಡಿ) ಆದಾಯ ನಾಲ್ಕು ಕೋಟಿ ರೂ., ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷದ್ದು 39 ಕೋಟಿ ರೂ., ಶರದ್ ಪವಾರ್ ಅವರ ಎನ್‌ಸಿಪಿಯದ್ದು 40 ಕೋಟಿ ರೂ., ಸಿಪಿಎಂ 63 ಕೋಟಿ ರೂಪಾಯಿಗಳೆಂದು ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಕೇಳಿದ ಪ್ರಶ್ನೆಗೆ ಆದಾಯ ತೆರಿಗೆ ಇಲಾಖೆ ಉತ್ತರಿಸಿದೆ.
ಅದೇ ರೀತಿ ಒಟ್ಟು ಆದಾಯದ (2002ರಿಂದ 2003ರ ನಡುವಿನ) ಲೆಕ್ಕಾಚಾರಕ್ಕೆ ತೊಡಗಿದಾಗ ಸಿಪಿಐ ಏಳು ಕೋಟಿ, ಆರ್‌ಜೆಡಿ 15 ಕೋಟಿ, ಎನ್‌ಸಿಪಿ 109 ಕೋಟಿ, ಸಮಾಜವಾದಿ 263 ಕೋಟಿ ಮತ್ತು ಸಿಪಿಎಂ 339 ಕೋಟಿ ರೂಪಾಯಿಗಳು ಕ್ರೋಢೀಕರಣಗೊಂಡಿರುವುದು ತಿಳಿದು ಬಂದಿದೆ.
ತಮ್ಮ ಆದಾಯಗಳಿಗೆ ಪಕ್ಷಗಳು ನೀಡಿರುವ ಮೂಲ ಉದಾರ ಕೊಡುಗೆಗಳು. ಕಾಂಗ್ರೆಸ್‌ಗೆ 549 ಕೋಟಿ, ಬಿಎಸ್‌ಪಿಗೆ 286 ಕೋಟಿ ಹಾಗೂ ಬಿಜೆಪಿಗೆ 246 ಕೋಟಿ ರೂಪಾಯಿಗಳು ರಾಜಕೀಯ ನಿಧಿಗಳ ಮೂಲಕ ಲಭಿಸಿದೆ ಎಂದು ಆದಾಯ ತೆರಿಗೆ ಇಲಾಖೆಗೆ ಪಕ್ಷಗಳು ತಿಳಿಸಿವೆ.