ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಜೆಪಿಯ ಹುಸೇನ್ ಇಫ್ತಾರ್ ಕೂಟಕ್ಕೆ ಪ್ರಧಾನಿ, ಅಡ್ವಾಣಿ (BJP | Shahnawaz Hussain | Iftar party | L K Advani)
Bookmark and Share Feedback Print
 
ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಶಹನವಾಜ್ ಹುಸೇನ್ ಅವರು ಇಂದು ಆಯೋಜಿಸಿದ್ದ ಇಫ್ತಾರ್ ಕೂಟಕ್ಕೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಮತ್ತು ಇತರ ಕಾಂಗ್ರೆಸ್ ನಾಯಕರು ಆಗಮಿಸಿದ್ದರು.

ಹುಸೇನ್ ಅವರ ನಿವಾಸದಲ್ಲಿ ನಡೆದ ಈ ಭೋಜನ ಕೂಟಕ್ಕೆ ಲೋಕಸಭಾ ಸ್ಪೀಕರ್ ಮೀರಾ ಕುಮಾರ್, ಕೇಂದ್ರ ಸಚಿವರುಗಳು ಮತ್ತು ಕಾಂಗ್ರೆಸ್‌ನ ಹಿರಿಯ ಸಂಸದರು ಬಂದಿದ್ದರು.

ಎಲ್.ಕೆ. ಅಡ್ವಾಣಿ, ಸುಷ್ಮಾ ಸ್ವರಾಜ್ ಸೇರಿದಂತೆ ಬಿಜೆಪಿಯ ಹಲವು ನಾಯಕರು ಕೂಡ ಭಾಗವಹಿಸಿದ್ದಾರೆ. ಆದರೆ ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಮತ್ತು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ ಕಾಣಿಸಿಕೊಂಡಿಲ್ಲ.

ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷೀದ್ ಮತ್ತು ಆರೋಗ್ಯ ಸಚಿವ ಗುಲಾಮ್ ನಬೀ ಆಜಾದ್ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡ ಪ್ರಮುಖ ಸಚಿವರು. ಮೂಲಗಳ ಪ್ರಕಾರ ಬಿಜೆಪಿ ನಾಯಕರಿಗಿಂತ ಕಾಂಗ್ರೆಸ್ ನಾಯಕರನ್ನು ಹೆಚ್ಚು ಆಹ್ವಾನಿಸುವಂತೆ ಖುರ್ಷೀದ್ ಸಲಹೆ ನೀಡಿದ್ದರು ಎಂದು ಹೇಳಲಾಗಿದೆ.

ಹುಸೇನ್ ಅವರ ಬಿಹಾರದ ರಾಜಕೀಯ ಎದುರಾಳಿಗಳಾದ ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ಎಲ್‌ಜೆಪಿ ಮುಖಂಡ ರಾಮ್ ವಿಲಾಸ್ ಪಾಸ್ವಾನ್ ಮತ್ತು ಸಮಾಜವಾದಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಕೂಡ ಭಾಗವಹಿಸಿದ್ದರು.

ಮೂಲಗಳ ಪ್ರಕಾರ ಪರಮಾಣು ಬಾಧ್ಯತಾ ಮಸೂದೆಯನ್ನು ಅಂಗೀಕರಿಸಲು ಬಿಜೆಪಿಯ ಮನವೊಲಿಸುವಲ್ಲಿ ಪ್ರಮುಖ ಪಾತ್ರವಹಿಸಿರುವುದು ಪ್ರಧಾನಿ ಕಚೇರಿಯ ರಾಜ್ಯ ಸಚಿವ ಪೃಥ್ವಿರಾಜ್ ಚೌಹಾನ್. ಇಫ್ತಾರ್ ಕೂಟಕ್ಕೂ ಎಲ್ಲರಿಗಿಂತ ಮೊದಲು ಆಗಮಿಸಿದ್ದು ಚೌಹಾನ್ ಎಂದು ಹೇಳಲಾಗಿದೆ.

ಪರಮಾಣು ಬಾಧ್ಯತಾ ಮಸೂದೆಯ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಈ ಸಂದರ್ಭದಲ್ಲಿ ಉತ್ತರಿಸಲು ಪ್ರಧಾನಿ ನಿರಾಕರಿಸಿದ್ದಾರೆ. ಮಸೂದೆ ಅಂಗೀಕಾರಗೊಳ್ಳುವವರೆಗೆ ಕಾಯಿರಿ ಎಂದಷ್ಟೇ ಅವರು ಉತ್ತರಿಸಿದ್ದಾರೆ ಎಂದು ವರದಿಗಳು ಹೇಳಿವೆ.

ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲೇ ಮಸೂದೆಯನ್ನು ಅಂಗೀಕರಿಸಲಾಗುತ್ತದೆಯೇ ಎಂಬ ಪ್ರಶ್ನೆಗೂ ಪ್ರತಿಕ್ರಿಯೆ ನೀಡಲು ಸಿಂಗ್ ನಿರಾಕರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ