ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಗಂಭೀರ ಬೆದರಿಕೆಯಾಗಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಯಾವುದೇ ರಾಜ್ಯದ ಹೆಸರೆತ್ತದೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಭೀತಿ ವ್ಯಕ್ತಪಡಿಸಿದ್ದಾರೆ.
ಇಂದು ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಗಂಭೀರ ಬೆದರಿಕೆಯಾಗಿ ಪರಿಣಮಿಸಿರುವ ಅಕ್ರಮ ಗಣಿಗಾರಿಕೆಯಿಂದಾಗಿ ಬುಡಕಟ್ಟು ಪ್ರದೇಶಗಳು ತೊಂದರೆಗೊಳಗಾಗುತ್ತಿವೆ ಮತ್ತು ಎಡಪಂಥೀಯರಿಂದ ಹಿಂಸಾಚಾರಗಳು ನಡೆಯುತ್ತಿವೆ ಎಂದರು.
ನಕ್ಸಲ್ ಸಮಸ್ಯೆಯನ್ನು ಬಗೆಹರಿಸಲು ಖನಿಜ ಸಂಪನ್ಮೂಲಗಳ ಬಳಕೆ ಮತ್ತು ಅರಣ್ಯಗಳ ನಿರ್ವಹಣೆಯ ನಿಟ್ಟಿನಲ್ಲಿ ಮೂಲಭೂತ ಬದಲಾವಣೆಗಳ ಅಗತ್ಯವಿದೆ ಎಂಬ ಸಲಹೆಗಳಿಗೆ ಸೋನಿಯಾ ಇದೇ ಸಂದರ್ಭದಲ್ಲಿ ಬೆಂಬಲ ವ್ಯಕ್ತಪಡಿಸಿದರು.
ಪ್ರಬಲ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳೊಂದಿಗೆ ಹಲವು ರಾಜ್ಯಗಳಲ್ಲಿ ಅಕ್ರಮ ಗಣಿಗಾರಿಕೆಯು ಗಂಭೀರ ಸಮಸ್ಯೆಯಾಗಿ ಉದ್ಭವಿಸಿದ್ದು, ಇತ್ತೀಚೆಗಷ್ಟೇ ಲೋಕಸಭೆಯಲ್ಲೂ ಚರ್ಚೆ ನಡೆದಿದೆ ಎಂದು ತನ್ನ ಭಾಷಣದಲ್ಲಿ ಅವರು ಉಲ್ಲೇಖಿಸಿದರು.
ಈ ಕುರಿತು ಕೇಂದ್ರವು ಕೈಗೊಳ್ಳುತ್ತಿರುವ ಕ್ರಮಗಳನ್ನು ವಿವರಿಸಿದ ಸೋನಿಯಾ, ಅಕ್ರಮ ಗಣಿಗಾರಿಕೆಯನ್ನು ಪರಿಣಾಮಕಾರಿ ರೀತಿಯಲ್ಲಿ ನಿಯಂತ್ರಿಸುವುದು, ತಡೆಯುವ ನಿಟ್ಟಿನಲ್ಲಿ ತನಿಖೆ ನಡೆಸಲು ಆಯೋಗವೊಂದನ್ನು ಅಸ್ತಿತ್ವಕ್ಕೆ ತರುತ್ತಿದೆ ಎಂದರು.
ಸಿದ್ದರಾಮಯ್ಯ-ಸೋನಿಯಾ ಭೇಟಿ.. ಈ ನಡುವೆ ಕರ್ನಾಟಕ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಇಂದು ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ, ರಾಜ್ಯ ರಾಜಕೀಯ ಸ್ಥಿತಿ-ಗತಿಗಳನ್ನು ವಿವರಿಸಿದ್ದಾರೆ.
ಅಕ್ರಮ ಗಣಿಗಾರಿಕೆ ವಿರುದ್ಧ ಕಾಂಗ್ರೆಸ್ ನಡೆಸಿದ ರ‌್ಯಾಲಿ ಮತ್ತು ಸಮಾವೇಶ, ಮುಂಬರುವ ಉಪ ಚುನಾವಣೆ ಕುರಿತು ಸೋನಿಯಾರಿಗೆ ಮಾಹಿತಿ ನೀಡಿರಲಿಲ್ಲ. ಹಾಗಾಗಿ ಅವರನ್ನು ಭೇಟಿ ಮಾಡಿ, ಎಲ್ಲವನ್ನೂ ವಿವರಿಸಿದ್ದೇನೆ ಎಂದು ಮಾತುಕತೆಯ ನಂತರ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.