ಭಯೋತ್ಪಾದಕರನ್ನು ಮಟ್ಟಹಾಕುವಲ್ಲಿ ಆಡಳಿತಾರೂಢ ಯುಪಿಎ ಸರಕಾರ ಹೆಚ್ಚಿನ ಕಾಳಜಿ ವಹಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿರುವ ನಡುವೆಯೇ, ಬುಧವಾರ ಬಿಡುಗಡೆ ಮಾಡಿರುವ 28 ಪಾಕಿಸ್ತಾನಿ ಕೈದಿಗಳಲ್ಲಿ ಕಂದಾಹಾರ್ ವಿಮಾನ ಅಪಹರಣಕ್ಕೆ ಸಹಕರಿಸಿದ್ದ ಇಬ್ಬರು ಸೇರಿದ್ದರು ಎಂಬ ಅಂಶ ಬಯಲಾಗಿದೆ.
ಭಾರತ ಎರಡು ದಿನಗಳ ಹಿಂದಷ್ಟೇ 28 ಪಾಕಿಸ್ತಾನಿ ಕೈದಿಗಳನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಅಟ್ಟಾರಿ-ವಾಘಾ ಗಡಿ ಮೂಲಕ ಪಾಕ್‌ಗೆ ತೆರಳಿರುವ ಈ ಕೈದಿಗಳಲ್ಲಿ ಕಂದಹಾರ್ ವಿಮಾನ ಅಪಹರಣಕ್ಕೆ ಸಹಕರಿಸಿದ್ದ ಇಬ್ಬರು ಕೈದಿಗಳು ಸೇರಿದ್ದಾರೆ.
ಹಾಜಿ ಇಕ್ಬಾಲ್ ಅಹ್ಮದ್ ಮತ್ತು ಮೊಹಮ್ಮದ್ ಆಸಿಫ್ ಬಂಧಮುಕ್ತಗೊಂಡಿರುವ ಕೈದಿಗಳಾಗಿದ್ದಾರೆ!.ಇವರಿಬ್ಬರೂ ಮುಂಬೈನಲ್ಲಿ ಬ್ಯಾಂಕ್ ದರೋಡೆ ಮಾಡಿದ್ದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ವಿಮಾನ ಅಪಹರಣ ಮಾಡಲು ಹಣಕಾಸಿನ ನೆರವು ನೀಡಲು ದರೋಡೆ ಮಾಡಿದ್ದರು.
ಸುಮಾರು ಎಂಟು ವರ್ಷಗಳಿಂದ ಮಹಾರಾಷ್ಟ್ರ ಜೈಲಿನಲ್ಲಿದ್ದ ಅಹ್ಮದ್ ಮತ್ತು ಆಸಿಫ್‌ನನ್ನು ಬುಧವಾರ ಇತರ ಕೈದಿಗಳ ಜತೆ ಬಿಡುಗಡೆ ಮಾಡಿ ವಾಘಾ ಗಡಿ ದಾಟಿಸಿ ಬಿಡಲಾಗಿತ್ತು. ಇದೀಗ ಇವರಿಬ್ಬರ ಬಿಡುಗಡೆ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.