ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಂಸದರಿಗೆ ಲಕ್ಷ್ಮೀ ಬಂಪರ್ 'ವರ': ಸಂಬಳ ಶೇ. 300 ಏರಿಕೆ! (MP Pay hike | Aam Admi | Cabinet Approval | UPA | Congress | Price Rise)
Bookmark and Share Feedback Print
 
ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನಸಾಮಾನ್ಯರ "ಏನಾದರೂ ಮಾಡಿ ದಯವಿಟ್ಟು ಬೆಲೆ ಇಳಿಕೆ ಮಾಡಿಸಿ" ಕೂಗು ಸರಕಾರಕ್ಕೆ ಕೇಳಿಸದಿದ್ದರೂ, ಜನತೆಯನ್ನು ಸಂಕಷ್ಟದಿಂದ ಪಾರು ಮಾಡಬೇಕಾದ ಜವಾಬ್ದಾರಿಯಿರುವ ಸಂಸದರಿಗೆ ವರಮಹಾಲಕ್ಷ್ಮೀ ಹಬ್ಬದ ಭರ್ಜರಿ ಕೊಡುಗಲಭಿಸಿದೆ. ಶೇ.300ರಷ್ಟು ವೇತನ ಏರಿಕೆಗೆ ಕೇಂದ್ರ ಸಂಪುಟವು ಶುಕ್ರವಾರ ಸಮ್ಮತಿ ನೀಡಿದೆ.

ಸಂಸದರ ವೇತನ ಹೆಚ್ಚಳಕ್ಕೆ ಜನಸಾಮಾನ್ಯರ ತೀವ್ರ ವಿರೋಧವಿದ್ದ ಹೊರತಾಗಿಯೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಈ ನಿರ್ಣಯಕ್ಕೆ ಬಂದಿದ್ದು, ಇದುವರೆಗೆ ಮಾಸಿಕ 16 ಸಾವಿರ ರೂ. ಇರುವ ಸಂಸದರ ಮೂಲ ವೇತನವು 50 ಸಾವಿರ ರೂಪಾಯಿಗೆ ಏರಿಕೆಯಾಗಿದ್ದು, ಅವರ ಕ್ಷೇತ್ರ ಭತ್ಯೆಯನ್ನು 20 ಸಾವಿರ ರೂಪಾಯಿಯಿಂದ 40 ಸಾವಿರಕ್ಕೆ ಏರಿಸಲಾಗಿದೆ. ಅಂತೆಯೇ ದಿನ ಭತ್ಯೆಯನ್ನು (ಅಧಿವೇಶನ ಅವಧಿಯಲ್ಲಿ ಕಲಾಪಕ್ಕೆ ಹಾಜರಾದರೆ) 1000 ರೂ.ಗಳಿಂದ 2 ಸಾವಿರ ರೂಪಾಯಿಗಳಿಗೆ ಏರಿಸಲಾಗಿದೆ.

ಸಂಸದರ ಹಾಲಿ ಭರ್ಜರಿ ಪೇ ಪ್ಯಾಕೇಜ್‌ನಲ್ಲಿ ಮಾಸಿಕ 20 ಸಾವಿರ ರೂಪಾಯಿಯ ಕಚೇರಿ ಭತ್ಯೆ ಈಗ 40 ಸಾವಿರಕ್ಕೆ ಏರಿದೆ. ಸಂಸದರಿಗೆ ಖಾಸಗಿ ವಾಹನ ಖರೀದಿಗೆ ನೀಡಲಾಗುವ ಬಡ್ಡಿರಹಿತ ಸಾಲದ ಮೊತ್ತವನ್ನು 1 ಲಕ್ಷದಿಂದ ನಾಲ್ಕು ಪಟ್ಚು ಹೆಚ್ಚಿಸಲಾಗಿದೆ. ಅಂತೆಯೇ, ಕಿಲೋಮೀಟರಿಗೆ 13 ಇದ್ದ ಸಂಸದರ ಪ್ರಯಾಣದ ಪ್ರತೀ ಮೈಲೇಜ್ ವೆಚ್ಚವನ್ನು 16 ರೂಪಾಯಿಗೆ ಏರಿಸಲಾಗಿದೆ. ಅದೇ ರೀತಿ ಪಿಂಚಣಿ ಭತ್ಯೆಯನ್ನು ಕೂಡ 8 ಸಾವಿರದಿಂದ ಮಾಸಿಕ 20 ಸಾವಿರ ರೂಪಾಯಿಗೆ ಏರಿಸಲಾಗಿದೆ.

ಇದರೊಂದಿಗೆ, ವರ್ಷದಲ್ಲಿ 34 ಬಾರಿ ದೇಶದೊಳಗೆ ಪತ್ನಿ/ಪತಿ, ಸಂಬಂಧಿಕರು ಅಥವಾ ಸಹಾಯಕರೊಂದಿಗೆ ಉಚಿತ ವಿಮಾನ ಯಾನ ಸೌಲಭ್ಯ, ರೈಲಿನಲ್ಲಿ ಪತ್ನಿ/ಪತಿ ಸಹಿತವಾಗಿ ಪ್ರಥಮ ದರ್ಜೆ ವಾತಾನುಕೂಲಿತ ಪ್ರಯಾಣದ ಪಾಸ್ ಕೂಡ ದೊರೆಯುತ್ತದೆ. ಈ ಪಾಸ್ ಬಳಸಿ ಭಾರತದೊಳಗೆ ಯಾವುದೇ ಸಮಯ ಯಾವುದೇ ರೈಲಿನಲ್ಲಿ ಎಲ್ಲಿಗೆ ಬೇಕಾದರೂ ಪ್ರಯಾಣಿಸಬಹುದಾಗಿದೆ.

ಸಂಸದರು ಅಧಿಕಾರದಲ್ಲಿರುವವರೆಗೂ ಉಚಿತ ಫ್ಲ್ಯಾಟ್ ಅಥವಾ ಹಾಸ್ಟೆಲ್ ವ್ಯವಸ್ಥೆ, ಬಂಗಲೆಯಾದರೆ, ಸಂಸದರು ಕನಿಷ್ಠ ಬಾಡಿಗೆ ಪಾವತಿಸಬೇಕು. ವರ್ಷಕ್ಕೆ 4000 ಕಿಲೋ ಲೀಟರ್ ನೀರು ಉಚಿತ, ವರ್ಷಕ್ಕೆ 50 ಸಾವಿರ ಯುನಿಟ್ ವಿದ್ಯುತ್ ಉಚಿತಸ 1.5 ಲಕ್ಷ ಉಚಿತ ಸ್ಥಳೀಯ ಕರೆಗಳಿರುವ ಮೂರು ದೂರವಾಣಿಗಳು ಉಚಿತ, ದೆಹಲಿಯಲ್ಲೊಂದು ಎಂಟಿಎನ್ಎಲ್ ಮೊಬೈಲ್ ಫೋನ್ ಸೇವೆ ಮತ್ತು ಕ್ಷೇತ್ರದಲ್ಲಿ ಮತ್ತೊಂದು ಮೊಬೈಲ್ ಫೋನ್ ಉಚಿತವಾಗಿ ಲಭ್ಯವಿರುತ್ತದೆ. ಮೂರು ದೂರವಾಣಿಗಳಲ್ಲೊಂದಕ್ಕೆ ಬ್ರಾಡ್‌ಬ್ಯಾಂಡ್ ಸೌಲಭ್ಯ ದೊರೆಯುತ್ತದೆ. ಇದಕ್ಕೆ ಸರಕಾರವು ಮಾಸಿಕ 1500 ರೂ. ಪಾವತಿಸುತ್ತದೆ.

ಸರಕಾರದ ಕಾರ್ಯದರ್ಶಿಗೂ ಮಾಸಿಕ 80 ಸಾವಿರ ರೂಪಾಯಿ ವೇತನವಿದೆ, ವಿದೇಶದಲ್ಲಿರುವ ಸಂಸದರಿಗೆ ಹೋಲಿಸಿದರೆ ನಮ್ಮ ವೇತನ ತೀರಾ ಕಡಿಮೆ ಎಂಬುದೆಲ್ಲಾ ಸಂಸದರು ತಮ್ಮ ವೇತನ ಹೆಚ್ಚಳ ಮಾಡಬೇಕೆಂದು ಮಾಡಿರುವ ವಾದಗಳಲ್ಲಿ ಕೇಳಿ ಬಂದ ಅಂಶ.

ಇವತ್ತಿನ ಏರಿಕೆಯ ಹೊರತಾಗಿಯೂ, ತಮಗೆ ಕಾರ್ಯದರ್ಶಿಗಿಂತ ಒಂದು ರೂಪಾಯಿಯಾದರೂ ಹೆಚ್ಚು (80,0001 ರೂ.) ವೇತನ ನೀಡಬೇಕು ಎಂಬ ಸಂಸದರ ಬೇಡಿಕೆಯನ್ನು ಈ ಒಟ್ಟು ವೇತನ ಇನ್ನೂ ತಲುಪಿಲ್ಲ. ಹೀಗಾಗಿ ಆರ್‌ಜೆಡಿ ಸಂಸದ ಲಾಲು ಪ್ರಸಾದ್ ಯಾದವ್ ನೇತೃತ್ವದಲ್ಲಿ, ಸಂಸದರು ಈ ವೇತನ ಏರಿಕೆ ಕಡಿಮೆಯಾಯಿತು ಎಂದು ಗಲಾಟೆ ಮಾಡಿದ್ದರಿಂದಾಗಿ ಲೋಕಸಭಾ ಕಲಾಪವನ್ನು ಮುಂದೂಡಲಾಯಿತು.

ಹೊಸ ವೇತನ ಹೆಚ್ಚಳದಿಂದ ದೇಶದ ಖಜಾನೆಯಿಂದ ವ್ಯಯವಾಗುವ ತೆರಿಗೆದಾರರ ಹಣ ವಾರ್ಷಿಕ ಸುಮಾರು 142 ಕೋಟಿ ರೂಪಾಯಿ. ಇದರೊಂದಿಗೆ, ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಾದರೆ, ಜನಪ್ರತಿನಿಧಿಗಳಿಗೆ ವೇತನವೇ ಏರಿಕೆಯಾಗುತ್ತಿರುವುದರಿಂದ, ಜನಸಾಮಾನ್ಯರ ಬವಣೆಯು ಅವರ ಅರಿವಿಗೆ ಬರುವ ಸಾಧ್ಯತೆಗಳು ಕಡಿಮೆ ಎಂಬುದು ಜನಾಭಿಪ್ರಾಯ.
ಸಂಬಂಧಿತ ಮಾಹಿತಿ ಹುಡುಕಿ