ವಿಶ್ವದ ಅತಿ ಶ್ರೀಮಂತ ದೇವರು ಎಂಬ ಖ್ಯಾತಿ ಪಡೆದಿರುವ ಸಪ್ತಗಿರಿವಾಸ ಶ್ರೀನಿವಾಸನ ಕ್ಷೇತ್ರದಲ್ಲಿ ಕನ್ನಡವನ್ನು ಕುಲಗೆಡಿಸಲಾಗುತ್ತಿದೆ. ದರ್ಶನ-ಪೂಜೆಯ ಟಿಕೆಟುಗಳನ್ನು ಬೇಕಾದಂತೆ ಮಾರಾಟ ಮಾಡಿ ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು ಹಣ ಮಾಡಿಕೊಳ್ಳುತ್ತಿದ್ದಾರೆ. ಇಷ್ಟೇ ಅಲ್ಲದೆ, ತಿರುಮಲ ಬೆಟ್ಟದಲ್ಲಿ ನಿಷಿದ್ಧವಾಗಿರುವ ವೇಶ್ಯಾವಾಟಿಕೆ ಮತ್ತು ಬಾಡೂಟದಂತಹ ಅನಾಚಾರಗಳು ಎಗ್ಗಿಲ್ಲದೆ ನಡೆಯುತ್ತಾ ಬಂದಿವೆ!
WD
ಇದು ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು. ಆದರೂ 'ತಿರುಮಲ ತಿರುಪತಿ ದೇವಸ್ಥಾನಂ' (ಟಿಟಿಡಿ) ತಲೆ ಕೆಡಿಸಿಕೊಳ್ಳುತ್ತಿಲ್ಲ. ಟಿಟಿಡಿ ಮುಖ್ಯಸ್ಥ ಡಿ.ಕೆ. ಆದಿಕೇಶವುಲು ನಾಯ್ಡು ಯಾರನ್ನೂ ಕ್ಯಾರ್ ಮಾಡುತ್ತಿಲ್ಲ.
ಅಸಲಿಗೆ ಈ ಆದಿಕೇಶವುಲು ಎಂಬ ವ್ಯಕ್ತಿ ಓರ್ವ ಮದ್ಯ ದೊರೆ. ಅಲ್ಲದೆ ದೇವರಲ್ಲಿ ನಂಬಿಕೆಯೇ ಇಲ್ಲದ ನಾಸ್ತಿಕ. ಇದೇ ಕಾರಣದಿಂದ ಆತ ದೇವಸ್ಥಾನದ ಉದ್ಯೋಗಳಲ್ಲಿ ದೇವರಲ್ಲಿ ನಂಬಿಕೆಯನ್ನು ಹೊಂದಿರದೇ ಇರುವವರನ್ನು ಕೂಡ ನೇಮಕ ಮಾಡಿಕೊಳ್ಳುತ್ತಿದ್ದಾನೆ. ದೇವಳದ ದರ್ಶನದ ಟಿಕೆಟುಗಳಲ್ಲಿ ಭಾರೀ ಅವ್ಯವಹಾರ ನಡೆಯುತ್ತಿದೆ ಎಂಬ ಆರೋಪಗಳೂ ಇವೆ.
ಈ ಹಿಂದೆ ವೈ.ಎಸ್. ರಾಜಶೇಖರ ರೆಡ್ಡಿಯವರು ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿದ್ದಾಗ, ತಿರುಪತಿಯನ್ನು ಕ್ರಿಶ್ಚನೀಕರಣ ನಡೆಸಲಾಗುತ್ತಿದೆ; ತಿರುಪತಿಯಲ್ಲಿ ಕ್ರೈಸ್ತ ಧರ್ಮದ ಪ್ರಚಾರ ಬೇರೆಬೇರೆ ರೀತಿಯಲ್ಲಿ ನಡೆಯುತ್ತಿದೆ ಎಂಬ ಆರೋಪಗಳೂ ಕೇಳಿ ಬಂದಿದ್ದವು.
ಕನ್ನಡ ಮರೆತೇ ಹೋಗಬಹುದು... ತಿರುಪತಿಗೂ ಕರ್ನಾಟಕಕ್ಕೂ ಆಜನ್ಮ ನಂಟು. ಆದರೆ ಅದು ಕನ್ನಡಕ್ಕಲ್ಲ. ಅಲ್ಲಿರುವ ಸಾಕಷ್ಟು ಬೋರ್ಡುಗಳಲ್ಲಿರುವ ಕನ್ನಡವನ್ನು ನೋಡಿದರೆ ಕನ್ನಡ ಮರೆತೇ ಹೋಗುವ ಭೀತಿ ಎದುರಾಗುತ್ತದೆ.
WD
ಕಳ್ಳರಿದ್ದಾರೆ ಎಚ್ಚರಿಕೆ, ಶೌಚಾಲಯ, ಬಸ್ ನಿಲ್ದಾಣಕ್ಕೆ ದಾರಿ, ಶುಚಿತ್ವ ಕಾಪಾಡಿ.. ಹೀಗೆ ತಿರುಪತಿಯಲ್ಲಿ ಹತ್ತು ಹಲವು ಕಡೆ ಕನ್ನಡದ ನಾಮಫಲಕಗಳಿವೆ. ಆದರೆ ಇವೆಲ್ಲವೂ ತೆಲುಗು ಶೈಲಿಯಲ್ಲಿರುವುದು ದುರದೃಷ್ಟಕರ. ಇಲ್ಲಿರುವ ಬೋರ್ಡುಗಳಲ್ಲಿ ಶುದ್ಧ ಕನ್ನಡ ಲಿಪಿಯನ್ನು ಹುಡುಕುವುದು ಕಷ್ಟ. ಇದಕ್ಕಿರುವ ಒಂದಷ್ಟು ಉದಾಹರಣೆಗಳಿಗೆ ಚಿತ್ರಗಳನ್ನು ಗಮನಿಸಿ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ವಿ.ಎಸ್. ಆಚಾರ್ಯ ಸೇರಿದಂತೆ ಕರ್ನಾಟಕದ ಸಚಿವರುಗಳು ವರ್ಷಕ್ಕೆ ಕನಿಷ್ಠ ನಾಲ್ಕೈದು ಬಾರಿ ತಿರುಪತಿಗೆ ಹೋಗುತ್ತಾರಾದರೂ, ಇಂತಹ ಅಪಭ್ರಂಶಗಳನ್ನು ಸರಿಪಡಿಸಬೇಕೆಂಬುದು ಅವರ ಮನಸ್ಸಿಗೆ ಬಾರದೇ ಇರುವುದು ದುರದೃಷ್ಟವೆನ್ನದೆ ಮತ್ತೇನೆಂದು ಹೇಳಲಿ?
ಕರ್ನಾಟಕ ಭವನ ಕನ್ನಡಿಗರಿಗಲ್ಲ... ಇಲ್ಲಿ ಕನ್ನಡಿಗ ಯಾತ್ರಾರ್ಥಿಗಳಿಗೆ ತಂಗಲೆಂದು ಕರ್ನಾಟಕ ಭವನ ಎಂಬ ಅತಿಥಿ ಗೃಹವೊಂದಿದೆ. ಆದರೆ ಇಲ್ಲಿ ಸಾಮಾನ್ಯ ಕನ್ನಡಿಗರಿಗೆ ವಾಸ್ತವ್ಯಕ್ಕೆ ಕೊಠಡಿ ದೊರೆತ ಉದಾಹರಣೆಗಳೇ ಇಲ್ಲ. ಕೇಳಿದರೆ, ಫುಲ್ ಆಗಿದೆ ಸಾರ್ ಅಂತಾರೆ.
ಕರ್ನಾಟಕ ಭವನದಲ್ಲಿ ಕೊಠಡಿ ಬೇಕೆಂದರೆ ಶಾಸಕರು, ಸಚಿವರಿಂದ ಶಿಫಾರಸು ಪತ್ರಗಳನ್ನು ತಂದಿರಬೇಕು. ಕನಿಷ್ಠ ಗಣ್ಯ ವ್ಯಕ್ತಿಗಳಿಂದ ಫೋನ್ ಮಾಡಿಸುವ ತಾಕತ್ತಾದರೂ ಹೊಂದಿದ್ದರೆ ರೂಮ್ ಪಡೆಯಬಹುದು. ಅದೇನೂ ಇಲ್ಲದಿದ್ದರೆ, ಫುಟ್‌ಪಾತೇ ಗತಿ.
ಈ ನಡುವೆ ಯಾತ್ರಿಕರಿಗೆ 'ಇನ್ನಷ್ಟು' ಸೌಲಭ್ಯ ನೀಡುವ ನಿಟ್ಟಿನಲ್ಲಿ ಕರ್ನಾಟಕ ಸರಕಾರವು ಅತಿಥಿ ಗೃಹ ನಿರ್ಮಿಸಲು ಹೊರಟಿದೆ. ಸುಮಾರು 130 ಕೋಟಿ ರೂಪಾಯಿ ವೆಚ್ಚದಲ್ಲಿ 500 ಕೊಠಡಿಗಳ ಕಟ್ಟಡ ನಿರ್ಮಿಸುವ ಕುರಿತು ಈ ಹಿಂದೆ ಟಿಟಿಡಿ ಜತೆ ಸರಕಾರ ಮಾತುಕತೆ ನಡೆಸಿತ್ತು. ಇದು ಎಲ್ಲಿಗೆ ತಲುಪಿದೆ ಎನ್ನುವುದು ಸದ್ಯಕ್ಕಂತೂ ನಿಗೂಢ.
ಟಿಕೆಟುಗಳಲ್ಲಿ ಅವ್ಯವಹಾರ.... ಶ್ರೀನಿವಾಸನ ದರ್ಶನಕ್ಕೆ ಹಲವು ಮಾರ್ಗಗಳಿವೆ. ಜನಸಾಮಾನ್ಯರಿಗಾದರೆ ಉಚಿತ ದರ್ಶನ. 300 ರೂಪಾಯಿ ಕೊಡಲು ಸಿದ್ಧರಾಗಿದ್ದವರಿಗೆ ಶೀಘ್ರ ದರ್ಶನ. ವಿಐಪಿಗಳಾದರೆ ತ್ವರಿತ ದರ್ಶನ ಹಾಗೂ ವಿವಿಐಪಿಗಳಾದರೆ ನೇರ ದರ್ಶನ.
WD
ಇಲ್ಲಿ ಅಕ್ರಮಗಳು ನಡೆಯುತ್ತಿರುವುದು 300 ರೂಪಾಯಿ ಟಿಕೆಟುಗಳ ವಿಭಾಗದಲ್ಲಿ. ಕಾಳಸಂತೆಯಲ್ಲಿ ಟಿಕೆಟುಗಳನ್ನು ಮಾರಾಟ ಮಾಡುವ ಮೂಲಕ ಸರಕಾರಕ್ಕೆ ಕೋಟ್ಯಂತರ ರೂಪಾಯಿಗಳನ್ನು ವಂಚಿಸಲಾಗುತ್ತಿದೆ. ಇದು ಪೂಜೆಯ ಟಿಕೆಟುಗಳಲ್ಲೂ ನಡೆಯುತ್ತಿದೆ. ದೇವಸ್ಥಾನದ ಆಡಳಿತ ಮಂಡಳಿಯಲ್ಲಿರುವವರು ತಮ್ಮ ಸಂಬಂಧಿಗಳಿಗೆ ಸರದಿ ತಪ್ಪಿಸಿ ದುಬಾರಿ ಬೆಲೆಗೆ ಟಿಕೆಟುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಧೂಮಪಾನ, ಮದ್ಯಪಾನ ನಿಷೇಧ.... ತಿರುಮಲ ಬೆಟ್ಟಕ್ಕೆ ಪ್ರವೇಶಿಸುವಾಗಲೇ ವಾಹನ ಮತ್ತು ಯಾತ್ರಿಕರನ್ನು ಸಂಪೂರ್ಣ ತಪಾಸಣೆಗೊಳಪಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಯಾತ್ರಿಗಳಲ್ಲಿ ಬೀಡಿ-ಸಿಗರೇಟು, ಗುಟ್ಕಾ ಪ್ಯಾಕೇಟುಗಳು ಅಥವಾ ಮದ್ಯದ ಬಾಟಲಿಗಳೇನಾದರೂ ಇದ್ದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗುತ್ತದೆ.
ಆದರೆ ಬೆಟ್ಟದಲ್ಲಿ ಬೇಕೆಂದವರಿಗೆ ಎಲ್ಲವೂ ಲಭ್ಯ. ದೇವಸ್ಥಾನದ ಸುತ್ತಲಿರುವ ಅಂಗಡಿಗಳಲ್ಲಿ ಮಾರಾಟಕ್ಕೆ ಇಲ್ಲದೇ ಇದ್ದರೂ, ಟ್ಯಾಕ್ಸಿ ಚಾಲಕರು ಮತ್ತು ಅತಿಥಿ ಗೃಹಗಳಲ್ಲಿನ ರೂಮ್ ಬಾಯ್‌ಗಳು ಇವುಗಳನ್ನೆಲ್ಲ ಒದಗಿಸುತ್ತಾರೆ ಎಂಬ ಆರೋಪಗಳಿವೆ.
ಇವುಗಳಿಗೆಲ್ಲ ಪುಷ್ಠಿ ನೀಡುವಂತಹ ವರದಿಗಳು ಇತ್ತೀಚೆಗಷ್ಟೇ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬಂದಿರುವುದನ್ನು ಸ್ಮರಿಸಬಹುದಾಗಿದೆ. ಬಾಡೂಟ, ಮದ್ಯಾರಾಧನೆ, ಅನೈತಿಕ ಚಟುವಟಿಕೆಗಳು ರೆಡ್ ಹ್ಯಾಂಡಾಗಿ ಕ್ಯಾಮರಾ ಕಣ್ಣುಗಳಿಗೆ ಸಿಕ್ಕಿದ್ದವು.
ಇಷ್ಟೆಲ್ಲ ನಡೆಯುತ್ತಿದ್ದರೂ, ಆಂಧ್ರದಲ್ಲಿನ ಕಾಂಗ್ರೆಸ್ ಸರಕಾರವು ಯಾವುದೇ ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ. ಭ್ರಷ್ಟಾಚಾರಿಗಳನ್ನು ಪೋಷಿಸುತ್ತಿದೆ ಎಂದು ಇದೀಗ ತೆಲುಗು ದೇಶಂ ಪಕ್ಷದ ನಾಯಕ ಎನ್. ಚಂದ್ರಬಾಬು ನಾಯ್ಡು ಮತ್ತು ಪ್ರಜಾರಾಜ್ಯಂ ಪಕ್ಷದ ನಾಯಕ ಚಿರಂಜೀವಿ ಮುಂತಾದವರು ತಿರುಪತಿಗೆ ಹೋಗಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಸರಕಾರವನ್ನು ಆಗ್ರಹಿಸಿದ್ದಾರೆ.