ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇಂದಿರಾಗಿಂತ ರಾಜೀವ್ ಸಂಬಳ ಜಾಸ್ತಿಯಿತ್ತು: ಸೋನಿಯಾ (Rajiv Gandhi | Indira Gandhi | Congress | Sonia Gandhi)
Bookmark and Share Feedback Print
 
ಇಂದಿರಾ ಗಾಂಧಿ ಭಾರತದ ಪ್ರಧಾನಿಯಾಗಿದ್ದಾಗ ಪಡೆಯುತ್ತಿದ್ದ ವೇತನಕ್ಕಿಂತ 'ಇಂಡಿಯನ್ ಏರ್‌ಲೈನ್ಸ್' ಪೈಲಟ್ ಆಗಿದ್ದ ತನ್ನ ಪತಿ ರಾಜೀವ್ ಗಾಂಧಿ ಹೆಚ್ಚು ಸಂಬಳ ಪಡೆಯುತ್ತಿದ್ದರು -- ಹೀಗೆಂದು ಹೇಳಿರುವುದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ.

ಸಂಸದರ ವೇತನ ಹೆಚ್ಚಳ ಮಾಡಬೇಕೆಂಬ ಚರ್ಚೆ ನಡೆಯುತ್ತಿರುವ ಮತ್ತು ವಿವಿಧ ದಿಕ್ಕುಗಳಿಂದ ಆಕ್ಷೇಪಗಳು ಬರುತ್ತಿರುವ ಹೊತ್ತಿನಲ್ಲಿ ಸೋನಿಯಾ ಬಾಯಿಯಿಂದ ಇಂತಹ ಹೇಳಿಕೆ ಹೊರ ಬಿದ್ದಿದೆ. ಪರೋಕ್ಷವಾಗಿ ಸಂಸದರ ವೇತನ ಹೆಚ್ಚಳ ಎಷ್ಟು ಅಗತ್ಯ ಎಂಬುದನ್ನು ಅವರು ಸೂಚ್ಯವಾಗಿ ಹೇಳಿದ್ದಾರೆ.

ಪ್ರಸಕ್ತ ಅಂದಾಜಿನ ಪ್ರಕಾರ ಭಾರತದ ಪ್ರಧಾನ ಮಂತ್ರಿಯ ವೇತನ 1,00,000 ರೂಪಾಯಿಗಳು. 1967ರಲ್ಲಿ ರಾಜೀವ್ ಗಾಂಧಿ 'ಇಂಡಿಯನ್ ಏರ್‌ಲೈನ್ಸ್' ವಿಮಾನಯಾನ ಸಂಸ್ಥೆಯಲ್ಲಿ ಪೈಲಟ್ ಆಗಿ ಕೆಲಸಕ್ಕೆ ಸೇರಿದ್ದಾಗ, ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದರು. ಆಗಿನ ಪೈಲಟ್ ಮತ್ತು ಪ್ರಧಾನಿ ವೇತನ ಹೇಗಿತ್ತು ಎಂಬುದನ್ನು ಇಂದಿನ ಸ್ಥಿತಿಗೆ ಹೋಲಿಸಿ ಸೋನಿಯಾ ವೇತನ ಹೆಚ್ಚಳದ ಅಗತ್ಯವನ್ನು ಒತ್ತಿ ಹೇಳಿದ್ದಾರೆ.

ಕಾಂಗ್ರೆಸ್ ಪ್ರಕಾರ ಸಂಸದರ ವೇತನ ಹೆಚ್ಚಳಕ್ಕೆ ಹಲವಾರು ಕಾರಣಗಳಿವೆ. ಆದರೆ ಸಚಿವ ಸಂಪುಟ ಮಾತ್ರ ಇದಕ್ಕೆ ಹಿಂದೇಟು ಹಾಕುತ್ತಿದೆ. ದೇಶ ಹಲವು ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ವೇತನ ಹೆಚ್ಚಳ ಸರಿಯಲ್ಲ ಎಂಬುದು ಸಂಪುಟದಲ್ಲಿನ ಕೆಲವು ಸಚಿವರ ಆಕ್ಷೇಪ.

ಹಲವು ಕಾಂಗ್ರೆಸ್ ಸಂಸದರು ಕೂಡ ವೇತನ ಹೆಚ್ಚಳ ಸರಕಾರದ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಭೀತಿ ವ್ಯಕ್ತಪಡಿಸಿದ್ದಾರೆ. ಬೆಲೆಯೇರಿಕೆ, ಕಾಮನ್‌ವೆಲ್ತ್ ಗೇಮ್ಸ್ ಅವ್ಯವಹಾರ ಮತ್ತು ಪ್ರವಾಹ-ಬರ ಮತ್ತಿತರ ಸಮಸ್ಯೆಗಳನ್ನು ಎದುರಿಸುತ್ತಿರುವ ಹೊತ್ತಿನಲ್ಲಿ ಸಂಬಳ ಹೆಚ್ಚಿಸಿದರೆ, ಅದು ಜನಸಾಮಾನ್ಯರಿಗೆ ತಪ್ಪು ಸಂದೇಶವನ್ನು ರವಾನಿಸಿದಂತೆ ಆಗಬಹುದು ಎಂದು ಅವರು ಹೇಳುತ್ತಿದ್ದಾರೆ.

ವರದಿಗಳ ಪ್ರಕಾರ ಸರಕಾರ ನೀಡುವ ವೇತನವನ್ನೇ ನಂಬಿಕೊಂಡಿರುವ ಸಂಸದರ ಸಂಖ್ಯೆ ಕೇವಲ ಶೇ.10 ಮಾತ್ರ. ಉಳಿದವರು ಸಾಮಾನ್ಯವಾಗಿ ಶ್ರೀಮಂತ ಕುಳಗಳೇ ಆಗಿರುತ್ತಾರೆ. ಹಾಗಾಗಿ ಅವರ ಸಾಲಿನಿಂದ ವೇತನ ಹೆಚ್ಚಳಕ್ಕೆ ಒತ್ತಡಗಳು ಬರುತ್ತವೆ.

ಸಂಸದೀಯ ಸಮಿತಿ ಶಿಫಾರಸು ಮಾಡಿರುವಂತೆ 16,000 ರೂಪಾಯಿಗಳಿಂದ 80,001 ರೂಪಾಯಿಗಳಿಗೆ ಏರಿಕೆ ಮಾಡದೇ ಇದ್ದರೂ, 40,000 ರೂಪಾಯಿಗಳಿಗೆ ಏರಿಕೆಯಾಗಲಿರುವುದಂತೂ ಖಚಿತ. ಈ ಕುರಿತು ಇಂದು ಸಚಿವ ಸಂಪುಟವು ಅಂತಿಮ ತೀರ್ಮಾನವನ್ನೂ ತೆಗೆದುಕೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ