ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪರಮಾಣು ಬಾಧ್ಯತಾ ಮಸೂದೆಗೆ ಕ್ಯಾಬಿನೆಟ್ ಅಂಕಿತ (Nuclear liability bill | BJP | Parliament | Congress)
Bookmark and Share Feedback Print
 
ತೀವ್ರ ವಿವಾದಕ್ಕೆ ತುತ್ತಾಗಿದ್ದ ಪರಮಾಣು ಬಾಧ್ಯತಾ ಮಸೂದೆ ಅಗತ್ಯ ತಿದ್ದುಪಡಿಗೊಳಗಾದ ನಂತರ ಪ್ರಮುಖ ಪ್ರತಿಪಕ್ಷ ಬಿಜೆಪಿಯನ್ನೂ ಒಲಿಸಿಕೊಳ್ಳುವಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಸಫಲವಾಗಿದ್ದು, ಶುಕ್ರವಾರ ಸಚಿವ ಸಂಪುಟವು ಅಂಗೀಕಾರ ನೀಡಿದೆ.

ಮಸೂದೆ ಮುಂದಿನ ವಾರ ಸಂಸತ್ತಿನಲ್ಲಿ ಮಂಡನೆಯಾಗಲಿದೆ.

ಪ್ರಸಕ್ತ ಯಾವುದೇ ದೊಡ್ಡ ಪಕ್ಷಗಳು ಮಸೂದೆಗೆ ವಿರುದ್ಧವಾಗಿಲ್ಲ. ಜೆಡಿಯುನಂತಹ ಸಣ್ಣ ಪಕ್ಷಗಳು ಕೂಡ ಮಸೂದೆಯ ಪರವಾಗಿವೆ. ಸ್ಥಾಯಿ ಸಮಿತಿಯಲ್ಲಿರುವ ಆರ್‌ಜೆಡಿ ಸದಸ್ಯರೂ ಪರಮಾಣು ಬಾಧ್ಯತಾ ಮಸೂದೆಯನ್ನು ಬೆಂಬಲಿಸುತ್ತಿದ್ದಾರೆ.

ಮಸೂದೆಯಲ್ಲಿ ಅಗತ್ಯ ಬದಲಾವಣೆ ಮಾಡಬೇಕೆಂಬ ಬಿಜೆಪಿ ಒತ್ತಡದ ಹಿನ್ನೆಲೆಯಲ್ಲಿ ಸರಕಾರ ಒಪ್ಪಿಕೊಂಡಿತ್ತಾದರೂ, ಗುರುವಾರ ಮತ್ತೆ ಬಿಜೆಪಿ ಮತ್ತು ಎಡಪಕ್ಷಗಳು ಸರಕಾರದ ವಿರುದ್ಧ ದಾಳಿ ನಡೆಸಿದ್ದವು. ಸರಕಾರವು ಪ್ರತಿಪಕ್ಷಗಳ ಜತೆ ನಡೆಸಿದ ಒಪ್ಪಂದದಂತೆ ಮಸೂದೆಯಲ್ಲಿ ಬದಲಾವಣೆ ಮಾಡಿಲ್ಲ ಎಂಬುವುದು ಆರೋಪವಾಗಿತ್ತು.

ಆದರೆ ನಂತರ ಸರಕಾರವು ಈ ಸಂಬಂಧ ಗಮನ ಹರಿಸಿದ್ದು, ಸಂಪುಟದಲ್ಲಿ ಮಸೂದೆಗೆ ಅಂಗೀಕಾರ ನೀಡಲಾಗಿದೆ.

ಮಸೂದೆಯ ಅಧಿನಿಯಮ 17ರ ಪ್ರಕಾರ ಸ್ಥಾವರ ನಿರ್ವಹಣೆಗಾರರು ಪೂರೈಕೆದಾರರಿಂದ ನಷ್ಟ ಪರಿಹಾರ ಬಯಸಬಹುದು, ಅದು ಯಾವಾಗ ಎಂದರೆ -- ಎ) ಇಬ್ಬರ ನಡುವೆ ಬಾಧ್ಯತಾ ಒಪ್ಪಂದ ಪೂರ್ವದಿಂದ ಜಾರಿಯಲ್ಲಿದ್ದರೆ, ಬಿ) ಅಥವಾ ಪೂರೈಕೆದಾರರ ಮಹತ್ತರ ನಿರ್ಲಕ್ಷ್ಯ ಅಥವಾ ಉದ್ದೇಶಪೂರ್ವಕ ಕೃತ್ಯದ ಸಂದರ್ಭಗಳಲ್ಲಿ.

ಈ ಮೇಲಿನ ಪ್ಯಾರಾದಲ್ಲಿರುವಂತೆ ಮಸೂದೆಯ 17ನೇ ಅಧಿನಿಯಮವನ್ನು ಬಿಜೆಪಿ ಒಪ್ಪಿಕೊಂಡಿತ್ತು. ಆದರೆ ಅಂತಿಮ ಕರಡಿನಲ್ಲಿ 'ಎ' ಮತ್ತು 'ಬಿ'ಗಳ ನಡುವೆ 'ಎಂಡ್' (ಮತ್ತು) ಎಂಬುದನ್ನು ಸರಕಾರ ಸೇರಿಸಿತ್ತು. ಇದನ್ನು ಬಿಜೆಪಿ ಮತ್ತು ಎಡಪಕ್ಷಗಳು ಆಕ್ಷೇಪಿಸಿದ್ದವು. ಅದರಂತೆ 'ಮತ್ತು' ಪದವನ್ನು ಮಸೂದೆಯಿಂದ ತೆಗೆದು ಹಾಕಲಾಗಿದೆ ಎಂದು ವರದಿಗಳು ಹೇಳಿವೆ.

ಅಮೆರಿಕಾ ಜತೆಗಿನ ಪರಮಾಣು ಒಪ್ಪಂದದಂತೆ ರಿಯಾಕ್ಟರುಗಳನ್ನು ಪೂರೈಸುವ ಅಮೆರಿಕಾ ಕಂಪನಿಗಳು, ಭಾರತದಲ್ಲಿ ನಡೆಯುವ ಯಾವುದೇ ಪರಮಾಣು ಅವಘಡಗಳಿಗೆ ಆರಂಭಿಕ ಬಾಧ್ಯತಾ ಮಸೂದೆಯ ಪ್ರಕಾರ ಹೊಣೆಗಾರರಾಗಿರಲಿಲ್ಲ. ಆದರೆ ಇದಕ್ಕೆ ಬಿಜೆಪಿ ಮತ್ತು ಎಡಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಬಳಿಕ ಪೂರೈಕೆದಾರರನ್ನು ಬಾಧ್ಯಸ್ಥರೆಂದು ಸರಕಾರವು ಮಸೂದೆಯಲ್ಲಿ ಸೇರಿಸಿರುವ ಕಾರಣ ಪ್ರತಿಪಕ್ಷಗಳು ಒಪ್ಪಿಗೆ ಸೂಚಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ