ಆಕೆ ಬ್ರಿಟನ್ ಮೂಲದ ಯುವತಿ. ದೇಶದ ಹಲವು ಕಡೆ ಶುಚಿತ್ವ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ 'ಗಾರ್ಬೇಜ್ ಗರ್ಲ್' ಎಂಬ ಹೆಸರನ್ನೂ ಪಡೆದುಕೊಂಡಿದ್ದಾಳೆ. ಇದೀಗ ಹಿಮಾಚಲ ಪ್ರದೇಶದ ಶಿವ ದೇವಸ್ಥಾನವೊಂದರ ಪಕ್ಕ ಭಾರೀ ಪ್ರಮಾಣದಲ್ಲಿ ಎಸೆಯಲಾಗಿರುವ ಕಸವನ್ನು ಶುಚಿಗೊಳಿಸುವ ಕಾರ್ಯಕ್ಕೆ ಕೈ ಹಾಕಿದ್ದಾಳೆ.
34ರ ಹರೆಯದ ಜೋಡಿ ಅಂಡರ್ಹಿಲ್ ಎಂಬಾಕೆಯೇ ಈ ರೀತಿಯಲ್ಲಿ ಭಾರತದಲ್ಲಿ ಸಮಾಜ ಸೇವೆ ಮಾಡುತ್ತಿರುವವಳು. ಉತ್ತರ ಭಾರತದ ಧರ್ಮಶಾಲಾ ಬೆಟ್ಟ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಎಸೆಯಲಾಗಿದ್ದ ಕಸವನ್ನು ಹೆಕ್ಕಿ ಅಂದಗೊಳಿಸಿದ ನಂತರ ಆಕೆಗೆ 'ಗ್ರೀನ್ ಹೀರೋ' ಎಂಬ ಬಿರುದನ್ನು ನೀಡಲಾಗಿತ್ತು.
PR
ಇದರಿಂದ ಹುರುಪು ಪಡೆದುಕೊಂಡಿರುವ ಅಂಡರ್ಹಿಲ್, ಚಂಬಾ ಜಿಲ್ಲೆಯ ಪವಿತ್ರ ಮಣಿಮಹೇಶ್ ಸರೋವರದಲ್ಲಿನ ಶಿವ ದೇವಸ್ಥಾನದ ಸುತ್ತ ಇರುವ ಬೆಟ್ಟ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ಉದ್ದೇಶಿಸಿದ್ದಾಳೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಂಡರ್ಹಿಲ್, ನಾನು ಈಗಷ್ಟೇ ಮಣಿಮಹೇಶ್‌ನಿಂದ ವಾಪಸ್ ಬರುತ್ತಿದ್ದೇನೆ. ನಮ್ಮ ಮುಂಬರುವ ಶುಚಿತ್ವ ಕಾರ್ಯಾಚರಣೆ ನಿಮಿತ್ತ ಅಂದಾಜು ನಡೆಸಲು ನಾನು ಸ್ಥಳಕ್ಕೆ ತೆರಳಿದ್ದೆ. ಮಣಿಮಹೇಶ್ ವಾರ್ಷಿಕ ಯಾತ್ರೆ ಇನ್ನಷ್ಟೇ ಆರಂಭಗೊಳ್ಳಬೇಕಿದ್ದರೂ, ಅಲ್ಲಿ ಎಲ್ಲಾ ಕಡೆ ಕಸ-ಕಡ್ಡಿಗಳನ್ನು ಎಸೆದು ಹೊಲಸು ಮಾಡಿರುವುದನ್ನು ನೋಡಲಾಗುತ್ತಿಲ್ಲ. ನಿಜಕ್ಕೂ ಬೇಸರವಾಗುತ್ತಿದೆ ಎಂದಿದ್ದಾಳೆ.
ಈಕೆ ಇಲ್ಲಿ 'ಮೌಂಟೇನ್ ಕ್ಲೀನರ್ಸ್' ಎಂಬ ಸಂಘಟನೆಯೊಂದನ್ನು ಹುಟ್ಟು ಹಾಕಿದ್ದು, ಅದರ ಮೂಲಕ ಪರಿಸರಕ್ಕೆ ಮಾರಕವಾಗುತ್ತಿರುವ ಕಸ-ಹೊಲಸುಗಳನ್ನು ಶುಚಿ ಮಾಡುವ ಮಹತ್ತರ ಕಾರ್ಯವನ್ನು ಮಾಡುತ್ತಿದ್ದಾಳೆ.
ಸಂಘಟನೆಯ ಕಾರ್ಯಕರ್ತರು ಇಂದು (ಆಗಸ್ಟ್ 20) ಶಿಮ್ಲಾದಿಂದ 500 ಕಿಲೋ ಮೀಟರ್ ದೂರದಲ್ಲಿರುವ ಮಣಿಮಹೇಶ್ ಸರೋವರಕ್ಕೆ ತಲುಪಿದ್ದಾರೆ. ಇಂದೇ ಅಲ್ಲಿ ಜಾತ್ರೆಯೂ ಆರಂಭವಾಗುತ್ತಿದೆ. ತಿಂಗಳ ಕಾಲ ಅದು ಮುಂದುವರಿಯುತ್ತದೆ.
ಇಲ್ಲಿ ಪ್ರತಿವರ್ಷ ಐದು ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಜಾತ್ರೆಯ ಸಂದರ್ಭದಲ್ಲಿ ಸೇರುತ್ತಾರೆ. ಎಲ್ಲಾ ನಿರುಪಯುಕ್ತ ವಸ್ತುಗಳನ್ನು ನದಿಗೆ ಮತ್ತು ಕಾಡಿನತ್ತ ಅವರು ಎಸೆಯುತ್ತಾರೆ. ಇದನ್ನು ತಡೆಯಲು ನಾವು ಭಕ್ತಾದಿಗಳಲ್ಲಿ ಮನವಿ ಮಾಡುತ್ತೇವೆ. ಕಸಗಳನ್ನು ತಮ್ಮ ಬ್ಯಾಗಿನಲ್ಲೇ ವಾಪಸ್ ತೆಗೆದುಕೊಂಡು ಹೋಗುವಂತೆ ಅವರಿಗೆ ಬಟ್ಟೆಯ ಬ್ಯಾಗುಗಳನ್ನು ನೀಡುತ್ತೇವೆ ಎಂದು ಈ ಸಮಾಜ ಸೇವಕಿ ಹೇಳಿಕೊಂಡಿದ್ದಾಳೆ.
ಎಲ್ಲೆಂದರಲ್ಲಿ ತಿಪ್ಪೆಗಳನ್ನು ಸೃಷ್ಟಿಸುವ ಬಹುತೇಕ ಭಾರತೀಯರು ಈ ಬ್ರಿಟನ್ ಯುವತಿಯ ಜನಜಾಗೃತಿಯಿಂದ ಕಲಿಯುವುದು ಬಹಳಷ್ಟಿದೆ, ಅಲ್ಲವೇ?