1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಸಂಸದ ಸಜ್ಜನ್ ಕುಮಾರ್ ವಿರುದ್ಧದ ವಿಚಾರಣೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಆರು ಮಂದಿಯ ಸಾವಿಗೆ ಕಾರಣವಾಗಿದ್ದ ಪ್ರಕರಣದಲ್ಲಿ ಸಜ್ಜನ್ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ಎ.ಕೆ. ಪಾಠಕ್ ತಳ್ಳಿ ಹಾಕಿದ್ದಾರೆ.
ತನ್ನ ವಿರುದ್ಧ ಹತ್ಯೆ ಮತ್ತು ಗಲಭೆ ಆರೋಪಗಳನ್ನು ಹೊರಿಸಿರುವ ಕೆಳಗಿನ ನ್ಯಾಯಾಲಯದ ತೀರ್ಪಿನ ವಿರುದ್ಧ ತಾನು ಮೇಲ್ಮನವಿ ಸಲ್ಲಿಸುತ್ತಿರುವುದರಿಂದ ತನಿಖೆಗೆ ತಕ್ಷಣವೇ ತಡೆಯಾಜ್ಞೆ ನೀಡಬೇಕು ಎಂದು ಸಜ್ಜನ್ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
ಸುಲ್ತಾನ್‌ಪುರಿ ಪ್ರದೇಶದಲ್ಲಿ ಹಿಂಸಾಚಾರದಲ್ಲಿ ಪಾಲ್ಗೊಂಡಿರುವ ಕುರಿತು ನಡೆಯುತ್ತಿರುವ ಕ್ರಿಮಿನಲ್ ವಿಚಾರಣೆಯನ್ನು ತಡೆಯಬೇಕು ಎಂಬ ಕಾಂಗ್ರೆಸ್ಸಿಗನ ಮನವಿಯನ್ನು ತಳ್ಳಿ ಹಾಕಿರುವ ಕೋರ್ಟ್, ಇದೀಗ ಸಿಬಿಐಗೂ ನೊಟೀಸ್ ನೀಡಿದೆ. ಈ ಸಂಬಂಧ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿರುವ ಸೆಪ್ಟೆಂಬರ್ 16ರಂದು ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಲಾಗಿದೆ.
ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ಉದ್ಭವಿಸಿದ್ದ ಸಿಖ್ ವಿರೋಧಿ ದಂಗೆಯಲ್ಲಿ ದೆಹಲಿಯ ಮಾಜಿ ಸಂಸದ ಸಜ್ಜನ್ ಕುಮಾರ್ ಭಾಗವಹಿಸಿದ್ದಾರೆಂದು ಆರೋಪಿಸಿ, ಅವರ ಮೇಲೆ ಎರಡು ಪ್ರಕರಣಗಳನ್ನು ದಾಖಲಿಸಲಾಗಿತ್ತು.
ದೆಹಲಿ ಕಂಟೋನ್ಮೆಂಟ್ ಪ್ರದೇಶದಲ್ಲಿ ಐದು ಮಂದಿಯ ಸಾವಿಗೆ ಕಾರಣವಾಗಿದ್ದ ಮತ್ತೊಂದು ಪ್ರಕರಣದಲ್ಲಿ ಸಜ್ಜನ್ ಕುಮಾರ್ ವಿರುದ್ಧದ ತನಿಖೆಗೆ ಈ ಹಿಂದೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತ್ತು.
ಇಂದಿರಾ ಹತ್ಯೆಯ ಬಳಿಕ ನಡೆದ ಗಲಭೆ ಕಾಂಗ್ರೆಸ್ ಪ್ರಾಯೋಜಿತ, ಮಾಜಿ ಪ್ರಧಾನಿ ಸಿಖ್ಖರ ಗುಂಡಿಗೆ ಬಲಿಯಾದ ಕಾರಣದಿಂದ ಕಾಂಗ್ರೆಸ್ ಪಿತೂರಿ ನಡೆಸಿ ಈ ಗಲಭೆಯನ್ನು ನಡೆಸಿತ್ತು ಎಂದು ಆರೋಪಿಸುತ್ತಾ ಬರಲಾಗುತ್ತಿದ್ದರೂ, ಪಕ್ಷವು ಇದನ್ನು ನಿರಾಕರಿಸಿದೆ.
3,000ಕ್ಕೂ ಹೆಚ್ಚು ಸಿಖ್ಖರು ಕೊಲ್ಲಲ್ಪಟ್ಟಿದ್ದ ನರಮೇಧದಲ್ಲಿ ಜಗದೀಶ್ ಟೈಟ್ಲರ್ ಮತ್ತು ಸಜ್ಜನ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದಾರೆ ಎಂದು ಹೇಳಲಾಗಿದೆ.