ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕ್ಸಲರ ದಾಳಿಯಿಂದ ರೈಲ್ವೇಗೆ 1,000 ಕೋಟಿ ರೂ. ನಷ್ಟ (Maoist attacks | Indian Railways | Mamata Banerjee | Gyaneshwari Express)
Bookmark and Share Feedback Print
 
ಮಾವೋವಾದಿಗಳಿಂದ ಚಲಿಸುತ್ತಿರುವ ರೈಲುಗಳ ಮೇಲೆ ಸುಮಾರು 217 ದಾಳಿಗಳು ಅಥವಾ ವಿಧ್ವಂಸಕ ಕೃತ್ಯಗಳು ನಡೆದಿದ್ದು, ಇದರಿಂದ ಭಾರತೀಯ ರೈಲ್ವೇಗೆ 1,000 ಕೋಟಿ ರೂಪಾಯಿಗಳ ನಷ್ಟವಾಗಿದೆ ಎಂದು ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಇಂದು ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

ಇದನ್ನು ತೀರಾ ಸೂಕ್ಷ್ಮ ಎಂದು ಬಣ್ಣಿಸಿರುವ ಅವರು, ನಕ್ಸಲರು ಕರೆ ನೀಡಿರುವ 75 ಬಂದ್‌ಗಳಿಂದಾಗಿ 70 ಮೈಲ್ ರೈಲುಗಳು ಹಾಗೂ 416 ಇತರ ರೈಲುಗಳ ಯಾನಗಳನ್ನು ರದ್ದುಗೊಳಿಸಲಾಗಿದೆ. ಇಂತಹ ಘಟನೆಗಳು ಪುನರಾವರ್ತನೆಯಾಗಬಾರದು ಎಂದು ನಾನು ಅವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಪ್ರಶ್ನೋತ್ತರ ವೇಳೆಯಲ್ಲಿ ಉತ್ತರಿಸುತ್ತಿದ್ದ ಬ್ಯಾನರ್ಜಿ ಹೇಳಿದರು.

ಅದೇ ಹೊತ್ತಿಗೆ ಪ್ರತಿಪಕ್ಷಗಳು ಕೇಳಿದ ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ದುರಂತದ ಪ್ರಶ್ನೆಗೆ ಯಾವುದೇ ಉತ್ತರ ನೀಡಲು ನಿರಾಕರಿಸಿದರು. ನೀವು ಇತ್ತೀಚೆಗಷ್ಟೇ ನಡೆಸಿದ ಲಾಲ್‌ಗಢ ರ‌್ಯಾಲಿಯಲ್ಲಿ ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ವಿದ್ವಂಸಕ ಕೃತ್ಯದ ಹೊಣೆಗಾರರು ಭಾಗವಹಿಸಿದ್ದರೇ ಎಂದು ಪ್ರಶ್ನಿಸುವ ಮೂಲಕ ಬ್ಯಾನರ್ಜಿಯವರನ್ನು ಪ್ರತಿಪಕ್ಷಗಳು ಕೆಣಕಿದ್ದವು.

ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ದುರಂತವು ಒಂದು ವಿದ್ವಂಸಕ ಕೃತ್ಯವೇ ಎಂದು ಬಿಜೆಪಿಯ ಬಲಬೀರ್ ಪಂಜ್ ಪ್ರಶ್ನಿಸಿದರು. ಇದಕ್ಕುತ್ತರಿಸಿದ ರೈಲ್ವೇ ಸಚಿವೆ, ನಾನು ಈ ಕುರಿತು ಯಾವುದೇ ರಾಜಕೀಯ ಮಾಡುತ್ತಿಲ್ಲ, ಪಕ್ಷಾತೀತವಾಗಿ ನಡೆದುಕೊಳ್ಳುತ್ತಿದ್ದೇನೆ; ಘಟನೆಯನ್ನು ಮೇಲ್ನೋಟದಿಂದ ಗಮನಿಸಿದಾಗ ವಿದ್ವಂಸಕ ಕೃತ್ಯದಂತೆ ಅನ್ನಿಸುತ್ತಿದೆ. ಅದು ಬಾಂಬ್ ಸ್ಫೋಟ ಅಥವಾ ಬೇರೆ ಏನೋ. ಈ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ ಎಂದರು.

ನೀವು ನಕ್ಸಲರತ್ತ ಮೃದು ಭಾವನೆಯನ್ನು ತೋರಿಸುತ್ತಿರುವ ಹೊರತಾಗಿಯೂ ರೈಲುಗಳ ಮೇಲೆ ಅವರು ಯಾಕೆ ಹೆಚ್ಚೆಚ್ಚು ದಾಳಿಗಳನ್ನು ನಡೆಸುತ್ತಿದ್ದಾರೆ ಎಂದು ಬಹುಜನ ಸಮಾಜ ಪಕ್ಷದ ಗಂಗಾ ಚರಣ್ ಅಚ್ಚರಿಯಿಂದ ಪ್ರಶ್ನಿಸಿದರು.

ಈ ಹೊತ್ತಲ್ಲೂ ತಾಳ್ಮೆ ಕಳೆದುಕೊಳ್ಳದ ಬ್ಯಾನರ್ಜಿ, 2009-10ರ ಅವಧಿಯಲ್ಲಿ 100 ರೈಲು ಅಪಘಾತಗಳು ನಡೆದಿವೆ. ಇದರಲ್ಲಿ 64 ಮಂದಿ ಸಾವನ್ನಪ್ಪಿದ್ದಾರೆ. 54 ಕೋಟಿ ರೂಪಾಯಿಗಳ ರೈಲ್ವೇ ಆಸ್ತಿ ನಷ್ಟವಾಗಿದೆ. ಇಷ್ಟು ಘಟನೆಗಳಲ್ಲಿ ಏಳು ಘಟನೆಗಳು ಬಾಂಬ್ ಸ್ಫೋಟಗಳಿಂದ ನಡೆದಿವೆ ಎಂದರು.

ಮಾವೋವಾದಿಗಳನ್ನು ಬಹಿರಂಗವಾಗಿ ಸಮರ್ಥಿಸಿಕೊಳ್ಳುತ್ತಿರುವ ಸಚಿವೆ ಬ್ಯಾನರ್ಜಿ ಮತ್ತು ಅವರನ್ನು ಸಂಪುಟದಲ್ಲಿ ಇಟ್ಟುಕೊಂಡಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ವಿರುದ್ಧ ಪ್ರತಿಪಕ್ಷಗಳು ಕಳೆದ ಹಲವು ಸಮಯದಿಂದ ಟೀಕಿಸುತ್ತಾ ಬಂದಿವೆ.
ಸಂಬಂಧಿತ ಮಾಹಿತಿ ಹುಡುಕಿ