ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಈ ಅಣ್ಣ-ತಂಗಿಯರಿಗೂ ರಕ್ಷಾಬಂಧನದ ಭಾಗ್ಯವಿದೆಯೇ? (Rakhi | Lucknow | Shrishti | Anuj)
Bookmark and Share Feedback Print
 
'ಅಣ್ಣ ತಂಗಿಯರ ಈ ಬಂಧ, ಜನುಮ ಜನುಮಗಳ ಅನುಬಂಧ.. ಜೀವಕ್ಕೆ ಕೊರಳು ದೇಹಕ್ಕೆ ನೆರಳು, ನಾವಾಗಲೆಂದು ಹರಿಸುತಿದೆ.. ಈ ರಕ್ಷಾಬಂಧನ..' -- ಹೀಗೆ ಶ್ರಾವಣ ಪೂರ್ಣಿಮೆಯ ದಿನ ಬರುವ ರಕ್ಷಾಬಂಧನ ಎಲ್ಲಾ ಅಣ್ಣ-ತಂಗಿಯರಿಗೆ ಸಂಭ್ರಮದ ದಿನ. ಎಲ್ಲರಂತೆ ಅದೇ ರೀತಿಯ ಸಡಗರದಲ್ಲಿ ಮುಳುಗೇಳಬೇಕಾಗಿದ್ದ ಅಣ್ಣ-ತಂಗಿಯೂ ಅವರಾಗಬೇಕಿತ್ತು.

ಆದರೆ ಕಾರಣ ಹೇಳದೆ ಬಂದಿರುವ ಖಾಯಿಲೆಯೊಂದು ಅಣ್ಣ-ತಂಗಿಯರ ವಿಧಿಯನ್ನೇ ಬದಲಾಯಿಸಿದೆ. ರಕ್ಷಾಬಂಧನದಂದು ಸಂತಸದಿಂದ ಕುಣಿದು ಕುಪ್ಪಳಿಸಬೇಕಿದ್ದ ಸಹೋದರಿಯರಿಬ್ಬರು ಅನಿವಾರ್ಯವಾಗಿ ಬೀದಿಗೆ ಬಂದಿದ್ದಾರೆ. ತಮ್ಮ ಸಹೋದರನ ಪ್ರಾಣ ಉಳಿಸಿಯೇ ಸಿದ್ಧ ಎಂದು ಗಟ್ಟಿ ದನಿಯಲ್ಲಿ ಹೇಳುತ್ತಿದ್ದಾರೆ.

ಇದು ಉತ್ತರ ಪ್ರದೇಶದ ಲಕ್ನೋದಲ್ಲಿನ ಕುಟುಂಬವೊಂದರ ವ್ಯಥೆಯ ಕಥೆ. 13ರ ಹರೆಯದ ಬಾಲಕ ಅನುಜ್ ಮಾರಕ ಅಪ್ಲಾಸ್ಟಿಕ್ ಅನೀಮಿಯಾ ರೋಗದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ 20 ಲಕ್ಷ ರೂಪಾಯಿಯ ಅಗತ್ಯವಿದೆ.

ಈತನ ತಂದೆ ಮನೀಷ್ ಬೇಹಲ್ ಓರ್ವ ಮೆಕ್ಯಾನಿಕ್. ಒಪ್ಪೊತ್ತಿನ ಊಟವನ್ನಷ್ಟೇ ಸಂಭ್ರಮದಿಂದ ಮಾಡಿಸಬಲ್ಲ ಸಾಮಾನ್ಯ ಮನುಷ್ಯ. ಇದನ್ನೆಲ್ಲ ಮನಗಂಡ ಅವರ ಇಬ್ಬರು ಪುತ್ರಿಯರಾದ 14ರ ಹರೆಯದ ಸೃಷ್ಟಿ ಮತ್ತು 9ರ ಮುಸ್ಕಾನ್ ಏನಾದರೂ ಮಾಡಿ ದಿನಾ ಸಾಯುತ್ತಿರುವ ಸಹೋದರನನ್ನು ಬದುಕಿನ ಹೊಸ್ತಿಲಿಗೆ ಎಳೆದು ತರುವ ಪಣ ತೊಟ್ಟಿದ್ದಾರೆ.

ಇದಕ್ಕಾಗಿ ಅವರು ಆರಿಸಿಕೊಂಡ ಮಾರ್ಗ ಬೂಟ್ ಪಾಲಿಶ್. ದಿನಾ ಶಾಲೆ ಬಿಟ್ಟ ನಂತರ ತಡರಾತ್ರಿಯವರೆಗೂ ನಗರದ ಬೀದಿಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಮತ್ತು ರೈಲು ನಿಲ್ದಾಣಗಳಲ್ಲಿ 'ನಮ್ಮ ಸಹೋದರನ ಜೀವ ಉಳಿಸಿ' ಎಂದು ನಾಮಫಲಕವೊಂದನ್ನು ಹಾಕಿ ಅವರು ಬೂಟ್ ಪಾಲಿಶ್ ಮಾಡುತ್ತಿದ್ದಾರೆ.

'ನಮ್ಮ ಸಹೋದರನಿಗೆ ನಾವು ಜೀವನದ ಕೊಡುಗೆಯನ್ನು ನೀಡಲು ನಿರ್ಧರಿಸಿದ್ದೇವೆ. ರಕ್ಷಾಬಂಧನದೊಳಗೆ ನಾವು ಅದಕ್ಕಾಗಿ ಅಗತ್ಯ ಹಣವನ್ನು ಹೊಂದಿಸುವ ಭರವಸೆಯಲ್ಲಿದ್ದೇವೆ' ಎಂದು ತಾವು ಸಂಪಾದಿಸಿದ ಅತ್ಯಲ್ಪ ಹಣ ಸಾಲದು ಎನ್ನುವುದನ್ನು ಅರಿತೂ ಹುಡುಗಿಯರು ವಿಶ್ವಾಸದಿಂದ ಹೇಳುತ್ತಿದ್ದಾರೆ.

ತನ್ನ ಹೆಣ್ಣು ಮಕ್ಕಳು ಸಹೋದರ ಪ್ರಾಣ ಉಳಿಸಲು ಹೆಣಗಾಡುತ್ತಿರುವುದು ತಂದೆ ಮನೀಷ್ ಅವರಿಗೂ ಹೆಮ್ಮೆಯೆನಿಸಿದೆ.

ತಮ್ಮ ಸಹೋದರನ ಚಿಕಿತ್ಸೆಯ ವೆಚ್ಚವನ್ನು ನಮ್ಮ ತಂದೆ ಒಬ್ಬನಿಗೇ ಭರಿಸಲು ಸಾಧ್ಯವಿಲ್ಲ ಎನ್ನುವುದು ನನ್ನ ಮಕ್ಕಳಿಗೆ ತಿಳಿದಿದೆ. ಅವರು ಅವರದ್ದೇ ಆದ ಹಾದಿಯಲ್ಲಿ ಹಣ ಸಂಗ್ರಹ ಮಾಡುತ್ತಿದ್ದಾರೆ. ಅಷ್ಟೊಂದು ಹಣ ಅವರಿಗೆ ಸಂಗ್ರಹಿಸುವುದು ಸಾಧ್ಯವಿಲ್ಲ ಎನ್ನುವ ಸತ್ಯ ನನಗೆ ತಿಳಿದಿದ್ದರೂ, ಅವರ ಕಠಿಣ ಶ್ರಮ ಮತ್ತು ಸಂಕಲ್ಪ ನನ್ನಲ್ಲಿ ಭರವಸೆ ಹುಟ್ಟಿಸಿದೆ. ಇಂತಹ ಇಬ್ಬರು ಹೆಣ್ಮಕ್ಕಳನ್ನು ಹೊಂದಿರುವ ನಾನೇ ಧನ್ಯ ಎಂದು ಅವರು ಹೇಳಿಕೊಂಡಿದ್ದಾರೆ.

ಈ ಮಕ್ಕಳು ತಮ್ಮ ಸಹೋದರನ ಪ್ರಾಣ ಉಳಿಸಲು ಹಗಲಿರುಳು ಶ್ರಮಿಸುತ್ತಿರುವುದನ್ನು ಕಂಡ ಸ್ಥಳೀಯರು ಮತ್ತು ಸಮಾಜ ಸೇವಾ ಸಂಸ್ಥೆಗಳು ಕುಟುಂಬಕ್ಕೆ ಸಹಕಾರ ನೀಡಲು ಮನಸ್ಸು ಮಾಡಿದ್ದು, ನಿರ್ದಿಷ್ಠ ಮೊತ್ತವನ್ನು ಒಟ್ಟುಗೂಡಿಸಲು ಯತ್ನಿಸುತ್ತಿದ್ದಾರೆ.

ಇಲ್ಲಿ ಬಟ್ಟೆ ಅಂಗಡಿಯನ್ನೊಂದನ್ನಿಟ್ಟಿಕೊಂಡಿರುವ ಜಾಫರ್ ಹುಸೇನ್ ಎಂಬವರು ಈ ಹುಡುಗಿಯರಿಗಾಗಿ 2,000 ರೂಪಾಯಿ ಸಂಗ್ರಹಿಸಿಟ್ಟಿದ್ದಾರೆ.

20 ಲಕ್ಷ ರೂಪಾಯಿ ಎಂದರೆ ಸಣ್ಣ ಮೊತ್ತವಲ್ಲ. ಆದರೆ ಜನ ಈ ಕುಟುಂಬದ ನೆರವಿಗೆ ಬಂದಲ್ಲಿ ಅಷ್ಟೊಂದು ಮೊತ್ತವನ್ನು ಸಂಗ್ರಹಿಸುವುದು ದೊಡ್ಡ ವಿಚಾರವೇ ಅಲ್ಲ ಎಂದು ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.

ರಕ್ಷಾಬಂಧನದ ಹೆಸರಿನಲ್ಲಿ ಉಡುಗೊರೆ ನೆಪದಲ್ಲಿ ಸಾವಿರಾರು ರೂಪಾಯಿಗಳನ್ನು ವೃಥಾ ಖರ್ಚು ಮಾಡುವ ಬದಲು ಇಂತವರಿಗೆ ನೀಡಿದರೆ ಶ್ರಾವಣ ಹುಣ್ಣಿಮೆ ಅವರ ಪಾಲಿನ ಅಮವಾಸ್ಯೆಯನ್ನು ದೂರ ಮಾಡಬಹುದು.
ಸಂಬಂಧಿತ ಮಾಹಿತಿ ಹುಡುಕಿ