ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಿಂದೂ ಪದ್ಧತಿಯಂತೆ ಮುಸ್ಲಿಂ ದಹನ; ಪೊಲೀಸರು ಮನೆಗೆ
(cremating Muslim | police officers | Hindu rites | Mohd Ishrafil)
ಭಿಕ್ಷುಕನೆಂದು ತಪ್ಪಾಗಿ ಅರ್ಥೈಸಿಕೊಂಡು ಮುಸ್ಲಿಂ ವ್ಯಕ್ತಿಯೊಬ್ಬನ ಕಳೇಬರವನ್ನು ಹಿಂದೂ ಸಂಪ್ರದಾಯದಂತೆ ಶವಸಂಸ್ಕಾರ ನಡೆಸಿದ್ದಕ್ಕಾಗಿ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ!
ಬಿಹಾರದ ರಾಜಧಾನಿ ಪಾಟ್ನಾದಲ್ಲಿನ ಗಾಂಧಿ ಮೈದಾನ ಸಮೀಪದ ಕಳೆದ ವಾರ 46ರ ಹರೆಯದ ಮೊಹಮ್ಮದ್ ಇಶ್ರಾಫಿಲ್ ಎಂಬವರ ಶವ ಪತ್ತೆಯಾಗಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿಯಾಗಿರುವ ಇವರ ಶವವನ್ನು ಮೂರು ಗಂಟೆಯೊಳಗೆ ದಹನ ಮಾಡಲಾಗಿತ್ತು.
ಪತ್ತೆಯಾಗಿರುವ ಶವ ಭಿಕ್ಷುಕನದ್ದು ಎಂದು ಅಧಿಕಾರಿಗಳು ಹೇಳಿದ ನಂತರ ಹಿಂದೂ ಸಂಪ್ರದಾಯದಂತೆ ಇಶ್ರಾಫಿಲ್ ಶವವನ್ನು ಸುಡಲಾಗಿತ್ತು.
ಇದರ ಬೆನ್ನಿಗೆ ಇಶ್ರಾಫಿಲ್ ಅವರ ಕುಟುಂಬವು 'ಕಾಣೆಯಾಗಿದ್ದಾರೆ' ಎಂದು ದೂರು ನೀಡಿತ್ತು. ಆದರೆ ಅಷ್ಟರಲ್ಲಾಗಲೇ ಎಲ್ಲವೂ ಮುಗಿದು ಹೋಗಿದ್ದ ಕಾರಣ, ಕುಟುಂಬವು ಪೊಲೀಸರ ವಿರುದ್ಧವೇ ಕ್ರಿಮಿನಲ್ ಕೇಸ್ ದಾಖಲು ಮಾಡಿ, ತಪ್ಪಿತಸ್ಥ ಅಧಿಕಾರಿಗಳನ್ನು ಶಿಕ್ಷಿಸುವಂತೆ ಒತ್ತಾಯಿಸಿತ್ತು.
ತಕ್ಷಣವೇ ಕಾರ್ಯಪ್ರವೃತ್ತರಾದ ಪಾಟ್ನಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಮೀನಾ ಅವರು, ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ಪೊಲೀಸರು ಆತುರಾತುರವಾಗಿ ತಂದೆಯ ಕಳೇಬರವನ್ನು ದಹಿಸಿರುವ ಬಗ್ಗೆ ಅವರ ಪುತ್ರ ಮೊಹಮ್ಮದ್ ಸೊಹ್ರಾಬ್ ಆಲಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ಅಪರಿಚಿತ ಶವ ಪತ್ತೆಯಾದರೂ ಕನಿಷ್ಠ 72 ಗಂಟೆಗಳ ಕಾಲ ಅದನ್ನು ರಕ್ಷಿಸಬೇಕಾದುದು ಪೊಲೀಸರ ಕರ್ತವ್ಯ. ಆದರೆ ನನ್ನ ತಂದೆಯ ಪ್ರಕರಣದಲ್ಲಿ ಅವರು ಕೇವಲ ಕೆಲವೇ ಗಂಟೆಯೊಳಗೆ ಶವವನ್ನು ದಹಿಸಿದ್ದಾರೆ. ಇಲ್ಲಿನ ಬಾನ್ಸ್‌ಘಾಟ್ ಸಮೀಪದ ಗಂಗೆಯ ತಟದಲ್ಲಿ ಶವಸಂಸ್ಕಾರ ನಡೆಸಲಾಗಿದೆ ಎಂದು ಅವರು ಕಿಡಿ ಕಾರಿದ್ದಾರೆ.
ಮುಸ್ಲಿಂ ಶವ ಸಂಸ್ಕಾರ ಸಂಪ್ರದಾಯದ ಪ್ರಕಾರ ಸತ್ತವರ ದೇಹಗಳನ್ನು ದಹನ ಮಾಡುವುದಿಲ್ಲ, ದಫನ ಮಾಡಲಾಗುತ್ತದೆ.