ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾದಳ ಮುಖಂಡ ಲಾಲೂ ಪ್ರಸಾದ್ ಯಾದವ್ ಪ್ರಧಾನ ಮಂತ್ರಿಯಾಗಿದ್ದಾರೆ. ಬಿಜೆಪಿ ನಾಯಕ ಗೋಪಿನಾಥ್ ಮುಂಡೆಯವರು ಲೋಕಸಭಾ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ!
ಇದು ನಡೆದಿರುವುದು ಲೋಕಸಭೆಯಲ್ಲಿ. ಸಂಸದರ ವೇತನ ಹೆಚ್ಚಳ ಬೇಡಿಕೆ ಮತ್ತು ಭಾರತೀಯ ವೈದ್ಯಕೀಯ ಮಂಡಳಿ ಮಸೂದೆಯನ್ನು ಚರ್ಚೆಯಿಲ್ಲದೆ ಅಂಗೀಕರಿಸಿದ್ದನ್ನು ಪ್ರತಿಭಟಿಸಿದ ನಂತರ ಕಲಾಪ ಮುಂದೂಡಲ್ಪಟ್ಟಿತ್ತು. ಬಳಿಕ ಈ ರೀತಿಯಾಗಿ ಅಣಕು ಲೋಕಸಭೆಯನ್ನು ಸೃಷ್ಟಿಸಿ, ಲಾಲೂ ಅವರನ್ನು ಪ್ರಧಾನಿಯನ್ನಾಗಿಸಲಾಯಿತು.
ರಾಷ್ಟ್ರೀಯ ಜನತಾದಳ (ಆರ್‌ಜೆಡಿ), ಸಮಾಜವಾದಿ ಪಕ್ಷ ಮತ್ತು ಬಿಜೆಪಿ ಸದಸ್ಯರು ಸದನದ ಎದುರಿನ ಬಾವಿಯಲ್ಲಿ ಧರಣಿ ನಡೆಸುತ್ತಿದ್ದಂತೆ ಲೋಕಸಭೆಯ ಉಪ ಸ್ಪೀಕರ್ ಕರಿಯ ಮುಂಡಾ ಕಲಾಪವನ್ನು ಮುಂದೂಡಿದ್ದರು.
ಬಳಿಕ ಈ ನಾಟಕೀಯ ಬೆಳವಣಿಗೆಗಳು ನಡೆದವು. ಬಿಜೆಪಿ ನಾಯಕ ಮುಂಡೆಯವರನ್ನು ಅಣಕು ಅಧಿವೇಶನದ ಲೋಕಸಭೆಗೆ ಸ್ಪೀಕರ್ ಅವರನ್ನಾಗಿ ನೇಮಕಗೊಳಿಸಿದರೆ, ಲಾಲೂ ಅವರು ಪ್ರಧಾನಿಯಾಗಿ ಪೋಸ್ ಕೊಟ್ಟರು.
ಅಣಕು ಅಧಿವೇಶನವು ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸಮಾಜವಾದಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರಿಗೆ ವಹಿಸಲಾಗಿತ್ತು.
ನಂತರ ವೈದ್ಯಕೀಯ ಮಂಡಳಿ ಮಸೂದೆ ಸೇರಿದಂತೆ ಇತರ ವಿಚಾರಗಳ ಕುರಿತು ಆರಂಭವಾದ 'ಚರ್ಚೆ'ಯಲ್ಲಿ 70ಕ್ಕೂ ಹೆಚ್ಚು ಸಂಸದರು ಪಾಲ್ಗೊಂಡರು. ಈ ಅವಧಿಯಲ್ಲಿ ಬಿಜೆಪಿಯ ಮೇನಕಾ ಗಾಂಧಿಯವರು ಕೂಡ ತನ್ನ ವಾದವನ್ನು ಮಂಡಿಸಿದರು. ಅವರ ಮಾತು ಬೆಳೆಯುತ್ತಿದ್ದಂತೆ ಕಡಿತಗೊಳಿಸುವಂತೆ 'ಸ್ಪೀಕರ್' ಮನವಿ ಮಾಡಿಕೊಂಡರು. ಸಮಯದ ಅಭಾವ ಇರುವುದರಿಂದ ಹೆಚ್ಚಿನ ಕಾಲಾವಕಾಶ ನೀಡುವುದು ಸಾಧ್ಯವಿಲ್ಲ ಎಂದರು.
ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಲಾಲೂ, ಇಂದು ನಾನು ಪ್ರಧಾನ ಮಂತ್ರಿಯಾಗಿ ನೇಮಕಗೊಂಡಿದ್ದೇನೆ; ನಾಳೆ ಏನಾಗುತ್ತದೋ ಕಾದು ನೋಡೋಣ. ನಾನು 'ಸದನ'ದ ಅಭಿಪ್ರಾಯವನ್ನು ಆಲಿಸಿದ್ದು, ಇಂದು ಅಂಗೀಕಾರಗೊಂಡ ಮಸೂದೆಗಳನ್ನು ಜನತಾ ಸರಕಾರವು ತಿರಸ್ಕರಿಸಲು ನಿರ್ಧರಿಸಿದೆ ಎಂದು ಕಟಕಿಯಾಡಿದರು.
ಇಲ್ಲಿ (ಅಣಕು ಅಧಿವೇಶನ) ಪ್ರತಿಪಕ್ಷದ ನಾಯಕನಿಗೆ ಜಾಗವೇ ಇಲ್ಲ. ಯಾಕೆಂದರೆ ಇದು ರಾಷ್ಟ್ರೀಯ ಸರಕಾರ. ನೂತನ ಸರಕಾರದ ಸದಸ್ಯರು ನಾಳೆ ಮತ್ತೆ ಸಭೆ ಸೇರಿ, ವೇತನ ಮತ್ತು ಇತರ ಮಸೂದೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಪ್ರಧಾನಿ ಗಾದಿಯ ಮೇಲೆ ಹಲವಾರು ವರ್ಷಗಳಿಂದ ಕಣ್ಣಿಟ್ಟಿರುವ ಮೇವು ಹಗರಣದ ರೂವಾರಿಯೆಂದು ಆಪಾದನೆಗೊಳಗಾಗಿದ್ದ ಬಿಹಾರ ಮಾಜಿ ಮುಖ್ಯಮಂತ್ರಿ ಹೇಳಿದರು.