ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಗ್ರರನ್ನು ಮಟ್ಟ ಹಾಕಲು ದೆಹಲಿ ಪೊಲೀಸರು ಸಮರ್ಥರೇ? (Delhi cops | terrorists | Delhi Commonwealth Games | India)
Bookmark and Share Feedback Print
 
ಭಯೋತ್ಪಾದಕರನ್ನು ಎದುರಿಸುವ ನಿಟ್ಟಿನಲ್ಲಿ ಕಡ್ಡಾಯವಾಗಿರುವ ತರಬೇತಿ ಶಿಬಿರಗಳಿಂದ ಪೊಲೀಸ್ ಅಧಿಕಾರಿಗಳು ಕಳೆದ ಕೆಲವು ವರ್ಷಗಳಿಂದ ದೂರವೇ ಉಳಿದುಕೊಳ್ಳುತ್ತಿರುವುದರಿಂದ ಕಾಮನ್‌ವೆಲ್ತ್ ಗೇಮ್ಸ್ ರಾಜಧಾನಿಯಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂತಹ ಪ್ರಶ್ನೆಯೊಂದು ಉದ್ಭವಿಸಿದೆ.

ಅಕ್ಟೋಬರ್ ಮೂರರಿಂದ 14ರವರೆಗೆ ದೆಹಲಿಯಲ್ಲಿ ನಡೆಯುವ ಗೇಮ್ಸ್‌ಗೆ ಇನ್ನೇನು ತಿಂಗಳು ಬಾಕಿಯಿದೆ ಎನ್ನುವಾಗ ಇಂತಹ ನಗ್ನಸತ್ಯವೊಂದು ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಬಹಿರಂಗವಾಗಿದೆ.

ಮುಂಬೈ ದಾಳಿ ನಡೆದ ಮುಂದಿನ ವರ್ಷ ಅಂದರೆ 2009ರಲ್ಲಿ ಅತೀ ಹೆಚ್ಚಿನ ಪೊಲೀಸರು ಫೈರಿಂಗ್ ಅಭ್ಯಾಸಕ್ಕೆ ಗೈರು ಹಾಜರಾಗಿರುವುದೇ ಭೀತಿಗೆ ಕಾರಣವಾಗಿರುವುದು.

2009ರಲ್ಲಿ ನಡೆದ ಫೈರಿಂಗ್ ತರಬೇತಿಯಲ್ಲಿ 240 ಎಸಿಪಿಗಳು ಭಾಗವಹಿಸಬೇಕಿತ್ತು. ಆದರೆ ತರಬೇತಿಗೆ ಹಾಜರಾಗಿದ್ದು ಕೇವಲ 27 ಎಸಿಪಿಗಳು. ಇದೇ ರೀತಿ 40 ಹೆಚ್ಚುವರಿ ಡಿಸಿಪಿಗಳಲ್ಲಿ ಕೇವಲ ಮೂರು ಮಂದಿಯಷ್ಟೇ ತರಬೇತಿ ಪಡೆದಿದ್ದಾರೆ. 50 ಡಿಸಿಪಿಗಳಲ್ಲಿ 43 ಮಂದಿ ತರಬೇತಿಯಿಂದ ದೂರವೇ ಉಳಿದುಕೊಂಡಿದ್ದಾರೆ.

ಇದು ಕೇವಲ 2009ಕ್ಕೆ ಮಾತ್ರ ಮೀಸಲಲ್ಲ. ಕಳೆದ ಐದು ವರ್ಷಗಳಲ್ಲಿ ಇದೇ ರೀತಿಯಲ್ಲಿ ತರಬೇತಿಯ ಅವಸ್ಥೆ ಮುಂದುವರಿದಿದೆ. ಶೇ.10ರಷ್ಟು ಮಾತ್ರ ಅಧಿಕಾರಿಗಳು ಇಂತಹ ಶಿಬಿರಗಳಿಗೆ ಹಾಜರಾಗುತ್ತಿದ್ದಾರೆ.

240 ಎಸಿಪಿಗಳಲ್ಲಿ 2007ರಲ್ಲಿ 111 ಹಾಗೂ 2008ರಲ್ಲಿ 143 ಮಂದಿ ಮಾತ್ರ ತರಬೇತಿಗೆ ಹಾಜರಾಗಿದ್ದಾರೆ. ಹೆಚ್ಚುವರಿ ಡಿಸಿಪಿಗಳ ವಿಭಾಗದಲ್ಲಿ 40 ಮಂದಿಯಲ್ಲಿ 2007ರಲ್ಲಿ ತರಬೇತಿಗೆ ಬಂದವರು ಕೇವಲ 13 ಮಂದಿ. ಇದು 2008ಕ್ಕಾಗುವಾಗ 17ಕ್ಕೇ ಏರಿಕೆಯಾಗಿತ್ತು.

50 ಡಿಸಿಪಿಗಳಲ್ಲಿ 2007ರಲ್ಲಿ ತರಬೇತಿಗೆ ಬಂದವರು 19. ಮರುವರ್ಷ ಇದು 21ಕ್ಕೆ ಏರಿಕೆಯಾಗಿದೆ. ಅಂದರೆ ಹೆಚ್ಚಿನ ಪೊಲೀಸ್ ಅಧಿಕಾರಿಗಳು ತರಬೇತಿಯನ್ನು ಗಂಭೀರವಾಗಿ ಪರಿಗಣಿಸಿಲ್ಲದೇ ಇರುವುದು ಸ್ಪಷ್ಟವಾಗಿದೆ.

ಹಿರಿಯ ಐಪಿಎಸ್ ಅಧಿಕಾರಿಗಳ ಅವಸ್ಥೆ ಮೇಲಿನ ಅಧಿಕಾರಿಗಳಿಗಿಂತಲೂ ಕೆಟ್ಟದಾಗಿದೆ. ಪ್ರಸಕ್ತ ದೆಹಲಿ ನಗರದಲ್ಲಿ ಎಂಟು ಮಂದಿ ವಿಶೇಷ ಆಯುಕ್ತರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಲ್ಲಿ ಕೇವಲ ಒಬ್ಬ ಮಾತ್ರ ಕಳೆದ ಮೂರು ವರ್ಷಗಳಲ್ಲಿ ತರಬೇತಿಗೆ ಹಾಜರಾಗಿದ್ದಾನೆ. 17 ಜಂಟಿ ಆಯುಕ್ತರುಗಳಲ್ಲಿ ಐದು ಮಂದಿ ತರಬೇತಿ ಪಡೆದಿದ್ದಾರೆ.

ಮುಂಬೈ ದಾಳಿಯಲ್ಲಿ ಪೊಲೀಸರು ವಿಫಲವಾದ ನಂತರವೂ ಮತ್ತೊಂದು ದಾಳಿಯನ್ನು ತಡೆಯುವ ನಿಟ್ಟಿನಲ್ಲಿ ಎಷ್ಟೊಂದು ತಯಾರಿ ನಡೆಸಿದ್ದಾರೆ ಎನ್ನುವುದು ಇದರೊಂದಿಗೆ ಬಹಿರಂಗವಾಗಿದ್ದು, ಗೇಮ್ಸ್ ಭದ್ರತೆಯ ಕುರಿತು ತೀವ್ರ ಆತಂಕಕ್ಕಿದು ಕಾರಣವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ