ಬಹುಚರ್ಚಿತ ಕಾಂಗ್ರೆಸ್ ಸಂಸದ ಶಶಿ ತರೂರ್ ಹಾಗ ಸುನಂದಾ ಪುಷ್ಕರ್ ವಿವಾಹ ಇಂದು ಬೆಳ್ಳಂಬೆಳಗ್ಗೆ ಇಲ್ಲಿನ ಎಲ್ವಾಂಚೇರಿಯಲ್ಲಿ ನಡೆಯಿತು.
ಭಾನುವಾರ ಬೆಳಗ್ಗೆ ಸುಮಾರು 8.30ರ ವೇಳೆಗೆ ತರೂರ್ ಹಿಂದೂ ನಾಯರ್ ಸಂಪ್ರದಾಯದಂತೆ ಪುಷ್ಕರ್ ಕೊರಳಿಗೆ ತಾಳಿ ಕಟ್ಟಿದರು. ಇದಕ್ಕೂ ಮೊದಲು ಪೊಡವ ಅರ್ಥಾತ್ ಹೊಸ ಬಟ್ಟೆಗಳ ಅದಲು ಬದಲು ಕಾರ್ಯಕ್ರಮವೂ ನಡೆಯಿತು.
200ಕ್ಕೂ ಹೆಚ್ಚು ಹಳೆಯ ಪೂರ್ವಜರ ಮನೆಯನ್ನು ಈ ಮದುವೆಗಾಗಿಯೇ ವಿಶೇಷವಾಗಿ ಸಿಂಗರಿಸಲಾಗಿತ್ತು. ಶಾಮಿಯಾನಾ ಹಾಕಿ ಮದುವೆಗಾಗಿ ಸಿದ್ಧಪಡಿಸಲಾಗಿತ್ತು.
ಶನಿವಾರ ಸಂಜೆಯೇ ತರೂರ್ ಕೊಳ್ಳೆಂಗೋಂಡ್ ಪುಟ್ಟ ಪಟ್ಟಣಕ್ಕೆ ಬಂದಿಳಿದಿದ್ದ ಶಶಿ ತರೂರ್ ತಮ್ಮ 92ರ ಹರೆಯದ ಅಜ್ಜಿ ಜಯಶಂಕರಿ ಅವರಿಂದ ಆಶೀರ್ವಾದ ಪಡೆದರು.
ಶನಿವಾರ ರಾತ್ರಿ ಕೊಳ್ಳೆಂಕೋಡ್ ಅರಮನೆಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಸುನಂದಾ ಪುಷ್ಕರ್ ಹಾಗೂ ಅವರ ಮನೆ ಮಂದಿಗೂ ಇದೇ ಅರಮನೆಯಲ್ಲೇ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತಾದರೂ ನಂತರ ಬದಲಾಯಿಸಲಾಯಿತು.
ಮದುವೆ ಕಾರ್ಯಕ್ರಮ ಮುಗಿದ ನಂತರ ದುಬೈಯಲ್ಲಿ ಆರತಕ್ಷತೆ ನಡೆಯಲಿದೆ. ಅಲ್ಲಿಂದ ನಂತರ ಸೆಪ್ಟೆಂಬರ್ ಮೂರರಂದು ಅವರು ಸ್ಪೇನ್‌ಗೆ ತೆರಳಲಿದ್ದಾರೆ. ದೆಹಲಿಯಲ್ಲಿ ತನ್ನ ಗೆಳೆಯರಿಗಾಗಿ ಔತಣಕೂಟವೊಂದನ್ನೂ ಆಯೋಜಿಸಲಾಗುತ್ತಿದೆ. ಮಧುಚಂದ್ರವನ್ನು ದಂಪತಿ ದುಬೈ ಮತ್ತು ಸ್ಪೇನ್‌ನಲ್ಲಿ ಆಚರಿಸಲಿದ್ದಾರೆ.