ಇತರ ಒಂಬತ್ತು ಸಹಚರರ ಜತೆಗೂಡಿ 'ಜಿಹಾದ್' ಹೆಸರಿನಲ್ಲಿ 166 ಮಂದಿಯನ್ನು ಪೈಶಾಚಿಕ ರೀತಿಯಲ್ಲಿ ಕೊಂದು ಹಾಕಿದ್ದ ಪಾಕಿಸ್ತಾನಿ ಭಯೋತ್ಪಾದಕ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ಪವಿತ್ರ ರಂಜಾನ್ ಉಪವಾಸ ಮಾಡುವ ಬದಲು, ಹಸಿವಾದಾಗಲೆಲ್ಲ ಹೊಟ್ಟೆ ಬಿರಿಯುವಂತೆ ತಿನ್ನುತ್ತಿದ್ದಾನೆ.
ರಂಜಾನ್ ತಿಂಗಳ ಉಪವಾಸ ವಯಸ್ಕ ಮುಸ್ಲಿಮರಿಗೆ ಕಡ್ಡಾಯ. ಹೀಗೆಂದು ಇಸ್ಲಾಂ ಹೇಳುತ್ತದೆ. ಆದರೆ ಇಸ್ಲಾಂ ಬೋಧಿಸದ ಮತಾಂಧತೆಯನ್ನು ಮೈಗೂಡಿಸಿಕೊಂಡಿರುವ ಕಸಬ್‌ಗೆ ರಂಜಾನ್ ಹೇಗೆ ಪವಿತ್ರವಾಗಿರುತ್ತದೆ. ಆತ ಬೆಳಗಾದಂತೆ ಬಾಳೆಹಣ್ಣು, ಆಪಲ್ ಸೇರಿದಂತೆ ಎಲ್ಲಾ ರೀತಿಯ ಆಹಾರವನ್ನು ಸೇವಿಸುತ್ತದ್ದು, ಅಗತ್ಯ ವೈದ್ಯಕೀಯ ಉಪಚರ್ಯೆ ಪಡೆದುಕೊಳ್ಳುತ್ತಿದ್ದಾನೆ ಎಂದು ವರದಿಯೊಂದು ಹೇಳಿದೆ.
PTI
ಆರೋಗ್ಯವಂತ ಮುಸ್ಲಿಮನೊಬ್ಬ ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ಉಪವಾಸ ಆಚರಿಸಬೇಕಾದ ಹೊತ್ತಿನಲ್ಲಿ ಬ್ಯಾರಕ್ 12ರಲ್ಲಿನ ಪ್ರತ್ಯೇಕ ಸೆಲ್‌ನಲ್ಲಿರುವ ಕಸಬ್ ಪುಸ್ತಕಗಳನ್ನು ಓದುತ್ತಿರುವುದು, ಊಟ ಮಾಡುತ್ತಿರುವುದು ಮತ್ತು ಔಷಧಿಗಳನ್ನು ಸ್ವೀಕರಿಸುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಜೈಲಿನ ಮೂಲವೊಂದು ಹೇಳಿದೆ.
ಭಾರೀ ಭದ್ರತೆ ಆರ್ಥರ್ ರೋಡ್ ಜೈಲಿನಲ್ಲಿರುವ ಕಸಬ್‌ನ ದಿನಚರಿಯನ್ನು ಗಮನಿಸಲೆಂದೇ ಹಲವು ಅಧಿಕಾರಿಗಳು ನಿಯೋಜನೆಗೊಂಡಿದ್ದಾರೆ. ಅವರು ತಯಾರಿಸಿರುವ ವರದಿಯ ಪ್ರಕಾರ, ಕಸಬ್ ಪ್ರತಿದಿನ ಬಾಳೆಹಣ್ಣು, ಅವಲಕ್ಕಿ, ರೋಟಿ, ಇತರ ಸಸ್ಯಾಹಾರಿ ಪದಾರ್ಥಗಳು, ಹಾಲು ಮತ್ತು ಚಹಾ ಸೇವಿಸುತ್ತಿದ್ದಾನೆ.
ಈ ಹಿಂದೆ ತನ್ನ ದೈಹಿಕ ಆರೋಗ್ಯ ಸರಿಯಿಲ್ಲ ಎಂದು ದೂರಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆಯನ್ನೂ ನೀಡಲಾಗಿತ್ತು. ಆಗ ವೈದ್ಯರು ಸೂಚಿಸಿದಂತೆ ನಿಗದಿತ ಸಮಯದಲ್ಲಿ ಮದ್ದನ್ನೂ ಸೇವಿಸುತ್ತಿದ್ದಾನೆ.
ಆರ್ಥರ್ ರೋಡ್ ಜೈಲಿನಲ್ಲಿ ಬೆಳಗ್ಗೆ 6.30ಕ್ಕೆ ಉಪಹಾರ, ಅಪರಾಹ್ನ 3.30ಕ್ಕೆ ಊಟ ನೀಡಲಾಗುತ್ತದೆ. ರಂಜಾನ್ ಉಪವಾಸ ಆಚರಿಸದ ಮುಸ್ಲಿಮರು ಮತ್ತು ಇತರ ಧರ್ಮೀಯರು ಈ ಸಂದರ್ಭದಲ್ಲಿ ಉಪಹಾರ ಮತ್ತು ಊಟ ಸ್ವೀಕರಿಸುತ್ತಾರೆ.
ಆದರೆ ರಂಜಾನ್ ಪಾಲಿಸುವವರಿಗೆ ವಿಶೇಷ ಆಹಾರವನ್ನು ನೀಡಲಾಗುತ್ತಿದೆ. ಮುಂಜಾನೆ ನಾಲ್ಕರಿಂದ ಐದು ಗಂಟೆಯ ನಡುವೆ ಬ್ರೆಡ್, ಟೀ, ಹಾಲು, ಹಣ್ಣು-ಹಂಪಲುಗಳು, ಮೊಟ್ಟೆ ಮುಂತಾದ ಪದಾರ್ಥಗಳು ಹಾಗೂ ಸಂಜೆ ಆರು ಗಂಟೆ ಹೊತ್ತಿಗೆ ಸಹೇರಿ, ಹಣ್ಣು-ಹಂಪಲು, ಕಾಳು, ಅನ್ನ, ಚಪಾತಿ ಮತ್ತು ಟೀ ಪೂರೈಸಲಾಗುತ್ತಿದೆ.